US-Iran Conflict: ಮಧ್ಯಪ್ರಾಚ್ಯದಲ್ಲಿ ಮತ್ತೆ ಅಮೆರಿಕ-ಇರಾನ್ ಸಮರ: ಕಚ್ಚಾ ತೈಲ ದರ ದಿಢೀರ್ ಏರಿಕೆ
US-Iran Conflict: ಈಗಾಗಲೇ ಮಧ್ಯಪ್ರಾಚ್ಯದಲ್ಲಿ ತಣ್ಣಗಾಗಿದ್ದ ಯುದ್ಧದ ಕಾವು ಇದೀಗ ಮತ್ತೆ ಕಾವೇರಿದೆ. ಇರಾನ್ ಹಾಗೂ ಅಮೆರಿಕ ಪಡೆಗಳ ನಡುವೆ ನೇರ ದಾಳಿ-ಪ್ರತಿದಾಳಿಗಳು ಪುನರಾರಂಭಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದೇ ದಿನದಲ್ಲಿ ಶೇಕಡಾ 2ಕ್ಕಿಂತ ಹೆಚ್ಚು ಜಿಗಿತ ಕಂಡಿದ್ದು, ವಿಶ್ವದಾದ್ಯಂತ ಇಂಧನ ಅಭಾವ ಮತ್ತು ಬೆಲೆ ಏರಿಕೆಯ ಭೀತಿ ಸೃಷ್ಟಿಯಾಗಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಪುನರಾರಂಭಗೊಂಡಿದ್ದು, ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡಾ 2ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಕಳೆದ ಎರಡು ತಿಂಗಳಿನಿಂದ ತಣ್ಣಗಾಗಿದ್ದ ಈ ಸಂಘರ್ಷ ಮತ್ತೆ ಕಾವೇರಿದ್ದು, ಜಾಗತಿಕ ಇಂಧನ ಸಾಗಣೆ ಹಾಗೂ ಸರಬರಾಜಿನ ಮೇಲೆ ನೇರ ಪರಿಣಾಮ ಬೀರಿದಂತಾಗಿದೆ.

ಸೋಮವಾರದ ವಹಿವಾಟಿನಲ್ಲಿ ಅಂತಾರಾಷ್ಟ್ರೀಯ ಬೆಂಚ್‌ಮಾರ್ಕ್ 'ಬ್ರೆಂಟ್ ಕ್ರೂಡ್' ಬೆಲೆ ಬ್ಯಾರಲ್‌ಗೆ $1.86 (ಶೇಕಡ 2.11) ಹೆಚ್ಚಾಗಿ $89.96ಕ್ಕೆ ತಲುಪಿದೆ. ಅದೇ ರೀತಿ ಯುಎಸ್ 'ಡಬ್ಲ್ಯೂಟಿಐ ಕ್ರೂಡ್' (WTI Crude) ಬೆಲೆ ಬ್ಯಾರಲ್‌ಗೆ $1.60 (ಶೇ. 1.92) ಜಿಗಿದು $85.00 ತಲುಪಿದೆ. ಕಳೆದ ವಾರ ಜಾಗತಿಕ ತೈಲ ಬೆಲೆ ಶೇಕಡ 4ಕ್ಕಿಂತ ಹೆಚ್ಚು ಕುಸಿತ ಕಂಡಿತ್ತು. ಆದರೂ ಪ್ರಸ್ತುತ ಉದ್ವಿಗ್ನತೆಯಿಂದಾಗಿ ಬೆಲೆಗಳು ದಿಢೀರ್ ಏರಿಕೆಯಾಗಿವೆ.
ಅಮೆರಿಕದ ಮಿಲಿಟರಿ ದಾಳಿ
ಹಾರ್ಮುಜ್ ಜಲಸಂಧಿ ಬಳಿ ಇರುವ ಇರಾನ್‌ನ 'ಲಾರಾಕ್' ದ್ವೀಪದಲ್ಲಿದ್ದ ಎರಡು ಕ್ಷಿಪಣಿ ಉಡಾವಣಾ ನೆಲೆಗಳ ಮೇಲೆ ಅಮೆರಿಕ ಸೇನೆ ಭಾನುವಾರ ದಾಳಿ ನಡೆಸಿತು. ಜುಲೈ ಅಂತ್ಯದ ನಂತರ ಇರಾನ್ ನೆಲದ ಮೇಲೆ ಅಮೆರಿಕ ನಡೆಸಿದ ಮೊದಲ ಪ್ರತ್ಯಕ್ಷ ದಾಳಿ ಇದಾಗಿದೆ.
ಅಮೆರಿಕದ ವಾಯು ನೆಲೆಗಳ ಮೇಲ್ ಇರಾನ್ ಪ್ರತಿದಾಳಿ
ದಾಳಿಗೆ ಪ್ರತ್ತುತ್ತರವಾಗಿ ಇರಾನ್‌ನ ಸೈನಿಕರು ಜೋರ್ಡಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ವಾಯು ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ. ಜೋರ್ಡಾನ್ ಸೇನೆಯು ತನ್ನ ವೈಮಾನಿಕ ಗಡಿಯನ್ನು ಪ್ರವೇಶಿಸಿದ ಎಂಟು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಪ್ರಪಂಚದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು (20%) ಕಚ್ಚಾ ತೈಲವು ಅತ್ಯಂತ ಪ್ರಮುಖ ಜಲಮಾರ್ಗವಾದ 'ಹಾರ್ಮುಜ್ ಜಲಸಂಧಿ' ಮೂಲವೇ ಸಾಗುತ್ತದೆ. ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ತೀವ್ರ ಭದ್ರತಾ ಆತಂಕ ಎದುರಾಗಿದೆ. ಶನಿವಾರ ಈ ಮಾರ್ಗದಲ್ಲಿ ತೆರಳುತ್ತಿದ್ದ ತೈಲ ಟ್ಯಾಂಕರ್ ಒಂದರ ಮೇಲೆ ದಾಳಿ ನಡೆದಿದ್ದು, ಪ್ರಸ್ತುತ ದಿನಕ್ಕೆ ಕೇವಲ 5 ತೈಲ ನೌಕೆಗಳು ಮಾತ್ರ ಈ ಮಾರ್ಗವಾಗಿ ಸಂಚರಿಸುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಮೆರಿಕದ ಮಿಲಿಟರಿ ಕ್ರಮವನ್ನು ಖಂಡಿಸಿರುವ ಇರಾನ್‌ನ ಸೈನಿಕ ಪಡೆಯು, ಅಮೆರಿಕವು ಆರ್ಥಿಕ ಯುದ್ಧದ ನಡುವೆ ದೊಡ್ಡ ತಪ್ಪು ಮಾಡಿದೆ ಮತ್ತು ಇದಕ್ಕೆ ಮಿಲಿಟರಿ ಹಾಗೂ ಆರ್ಥಿಕವಾಗಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ. ಮತ್ತೊಂದೆಡೆ ಅಮೆರಿಕವು ಇರಾನ್‌ನೊಂದಿಗೆ ವ್ಯವಹರಿಸುವ ದೇಶಗಳು ಹಾಗೂ ಸಂಸ್ಥೆಗಳ ಮೇಲೆ ಹೆಚ್ಚಿನ ಆರ್ಥಿಕ ನಿರ್ಬಂಧಗಳನ್ನು ವಿಧಿಸುವ ಕುರಿತು ಆಲೋಚಿಸುತ್ತಿದೆ.


Click it and Unblock the Notifications
