US Election: ಈ ಕಾರಣಕ್ಕೆ ಕುತೂಹಲ, ಏಳು ರಾಜ್ಯಗಳು ನಿರ್ಣಾಯಕ!
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗಲೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಇದನ್ನು ಪೋಟೋ ಫಿನಿಶ್ ಮೂಮೆಂಟ್ ಎಂದು ಹೇಳಲಾಗಿದೆ. ಅಂದರೆ ಯಾವುದಾದರೂ ಸ್ಪರ್ಧೆಯಲ್ಲಿ ಕೊನೆಯ ಹಂತದಲ್ಲಿ ಸ್ಪರ್ಧಿಗಳ ನಡುವೆ ಕೂದಲೆಳೆಯ ಅಂತರ ಇರುತ್ತದೆ. ಒಂದು ಪೋಟೋ ಕ್ಲಿಕ್ಕಿಸುವ ಗ್ಯಾಪ್ ಅಂತಲೂ ಹೇಳಬಹುದು. ಈ ರೀತಿಯ ಪೈಪೋಟಿ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಅಮೆರಿಕದ ಚುನಾವಣೆಯ ಅಧ್ಯಕ್ಷೀಯ ಸ್ಪರ್ಧಿಗಳ ನಡುವೆ ಭಾರೀ ಸೆಣಸಾಟ ಮುಂದುವರಿದಿದೆ. ನ್ಯೂಯಾರ್ಕ್ ಟೈಮ್ಸ್ /ಸಿಯೆನಾ ಕಾಲೇಜ್ ನಡೆಸಿದ ಜಂಟಿ ಹೊಸ ಸಮೀಕ್ಷೆಯ ಪ್ರಕಾರ, ಏಳು ಪ್ರಮುಖ ರಾಜ್ಯಗಳು ಅಂತಿಮ ಫಲಿತಾಂಶಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿವೆ ಎಂದು ಹೇಳಿದೆ. ನಾಳೆ ಅಂದರೆ ನವೆಂಬರ್ 5ಕ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ.

ಈ ಹಂತದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಮುಖ ಏಳು ರಾಜ್ಯಗಳಾದ ನೆವಾಡಾ, ಉತ್ತರ ಕೆರೊಲಿನಾ, ವಿಸ್ಕಾನ್ಸಿನ್, ಜಾರ್ಜಿಯಾ, ಪೆನ್ಸಿಲ್ವೇನಿಯಾ, ಮಿಚಿಗನ್ ಮತ್ತು ಅರಿಜೋನಾ ಸೇರಿವೆ. ಈ ರಾಜ್ಯಗಳು ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿವೆ. ಅಲ್ಲದೇ ಈ ರಾಜ್ಯಗಳ ಜನರ ನಾಡಿ ಮಿಡಿತ ತಿಳಿಯುವುದು ಕಷ್ಟವಾಗುತ್ತಿದೆ ಅಂತಲೂ ಹೇಳಲಾಗುತ್ತಿದೆ. ಹೀಗಾಗಿ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಯಾವ ಬದಲಾವಣೆಗಳು ಬೇಕಾದರೂ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಪ್ರಮುಖ ಏಳು ರಾಜ್ಯಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಕೂದಲೆಳೆಯ ಪೈಪೋಟಿ ಇದೆ. ಅಮೆರಿಕದ ನೆವಾಡಾ ರಾಜ್ಯದಲ್ಲಿ ರಿಪಬ್ಲಿಕ್ ಪಾರ್ಟಿಯ ಅಭ್ಯರ್ಥಿ ಟ್ರಂಪ್ ಅವರು ಶೇಕಡ 46% ಮತಗಳನ್ನು (ಮತದಾರರ ಒಲವು ಪ್ರಮಾಣ) ಪಡೆದಿದ್ದರೆ, ಕಮಲಾ ಹ್ಯಾರಿಸ್ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯು ಶೇಕಡ 49% ರಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ. ಇನ್ನು ಮತ್ತೊಂದು ರಾಜ್ಯವಾದ ಉತ್ತರ ಕೆರೊಲಿನಾದಲ್ಲಿ, ಕಮಲಾ ಹ್ಯಾರಿಸ್ ಶೇ. 48% ಮತಗಳಿಂದ ಮುನ್ನಡೆಯಲ್ಲಿದ್ದರೆ, ಟ್ರಂಪ್ ಅವರು ಪಡೆದಿರುವ ಮತಪ್ರಮಾಣ ಶೇ. 46% ಇದೆ.
ಹ್ಯಾರಿಸ್ ಅವರು ವಿಸ್ಕಾನ್ಸಿನ್‌ನಲ್ಲಿ ಶೇ. 49% ಪ್ರಮಾಣದಿಂದ ಮುಂದಿದ್ದಾರೆ, ಟ್ರಂಪ್ ಶೇ. 47% ಪ್ರಮಾಣದ ಮತಗಳನ್ನು ಗಳಿಸಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಕೂದಲೆಳೆಯ ಅಂತರ ಮಾತ್ರ ಬಾಕಿ ಉಳಿದಿರುವುದರಿಂದ ಕುತೂಹಲ ಹೆಚ್ಚಾಗಿದೆ. ಜಾರ್ಜಿಯಾ ರಾಜ್ಯದಲ್ಲೂ ಎರಡೂ ಪಕ್ಷಗಳ ನಡುವೆ ಕೇವಲ ಒಂದು ಪಾಯಿಂಟ್ಸ್‌ನ ಅಂತರ ಮಾತ್ರ ಉಳಿದಿದೆ.
ಇಲ್ಲಿ ಹ್ಯಾರಿಸ್ ಅವರು ಶೇ. 48% ಜನರಿಂದ ಬೆಂಬಲ ಪಡೆದಿದ್ದರೆ. ಟ್ರಂಪ್ ಅವರು 47% ಪ್ರಮಾಣದ ಜನರ ಒಲವು ಹೊಂದಿದ್ದು, ಕೇವಲ ಒಂದು ಪಾಯಿಂಟ್ಸ್‌ನಿಂದ ಹಿಂದುಳಿದಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಎರಡೂ ಪಕ್ಷಗಳು ಶೇಕಡ 48% ಪ್ರಮಾಣದ ಜನರ ಬೆಂಬಲ ಪಡೆಯುವ ಮೂಲಕ ಸಮಾನವಾಗಿವೆ. ಮಿಚಿಗನ್‌ನಲ್ಲಿಯೂ ಸಹ ಸಮೀಕ್ಷೆಯು ಹ್ಯಾರಿಸ್ ಮತ್ತು ಟ್ರಂಪ್ ನಡುವೆ 47% ರಷ್ಟು ಸಮಾನ ಹೋರಾಟ ಇದೆ. ಇನ್ನು ಅರಿಜೋನಾ ರಾಜ್ಯದಲ್ಲಿ ಟ್ರಂಪ್ 49% ಮತ್ತು ಹ್ಯಾರಿಸ್ 45% ಪ್ರಮಾಣದ ಜನ ಬೆಂಬಲ ಪಡೆದಿದ್ದಾರೆ.
ಇನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ /ಸಿಯೆನಾ ಕಾಲೇಜ್ ಅಕ್ಟೋಬರ್ 24 ರಿಂದ ನವೆಂಬರ್ 2 ರ ನಡುವೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ನೆವಾಡಾದಲ್ಲಿ 1,010 ಮತದಾರರು, ವಿಸ್ಕಾನ್ಸಿನ್‌ನಲ್ಲಿ 1,305 ಮತದಾರರು, ಉತ್ತರ ಕೆರೊಲಿನಾದಲ್ಲಿ 1,010 ಮತದಾರರು, ಜಾರ್ಜಿಯಾದಲ್ಲಿ 1,004 ಮತದಾರರು, ಪೆನ್ಸಿಲ್ವೇನಿಯಾದಲ್ಲಿ 1,527 ಮತದಾರರು, ಮಿಚಿಗನ್‌ನಲ್ಲಿ 998 ಮತದಾರರು ಹಾಗೂ ಅರಿಜೋನಾದಲ್ಲಿ 1,025 ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
270 ಮ್ಯಾಜಿಕ್ ನಂಬರ್: ಅಮೆರಿಕದ ಶ್ವೇತಭವನ ಗದ್ದುಗೆಯನ್ನು ಹೇರುವುದಕ್ಕೆ 270 ಜನ ಎಲೆಕ್ಟ್ರೋ ವೋಟರ್ಸ್‌ಗಳು ಆಯ್ಕೆಯಾಗಬೇಕು. ಎಲೆಕ್ಟ್ರೋ ವೋರ್ಸ್‌ಗಳ ಮೂಲಕವೇ ಅಮೆರಿಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅಮೆರಿಕದ ಮತದಾರರು ಎಲೆಕ್ಟ್ರೋ ವೋಟರ್ಸ್‌ಗಳನ್ನು ಆಯ್ಕೆ ಮಾಡುತ್ತಾರೆ. ಇಲ್ಲಿ ದ್ವಿಪಕ್ಷೀಯ ಪದ್ಧತಿ ಇದೆ. ಇನ್ನು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ.












Click it and Unblock the Notifications