US election 2024 | ಕಮಾಲಾ ಹ್ಯಾರಿಸ್- ಡೊನಾಲ್ಡ್ ಟ್ರಂಪ್ ಕದನ ಕುತೂಹಲ: ಜೈಶಂಕರ್ ಹೇಳಿದ್ದೇನು?
ಜಗತ್ತಿನ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮಂಗಳವಾರ ಸಂಜೆ ( ಭಾರತದ ಕಾಲಮಾನ ) ನಡೆಯಲಿದೆ. ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಅಮೆರಿಕದ ಈಗಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಣದಲ್ಲಿದ್ದಾರೆ. ಇಬ್ಬರ ನಡುವಿನ ಕದನದ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪ್ರತಿಕ್ರಿಯಿಸಿದ್ದಾರೆ.
ಜೈಶಂಕರ್ ಅವರು ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕುರಿತು ಸಿಡ್ನಿಯಲ್ಲಿ ಮಾತನಾಡಿದ ಅವರು, ಕಳೆದ ಐವರು ಅಧ್ಯಕ್ಷರ ಅವಧಿಗಳಲ್ಲಿ ಭಾರತ ಹಾಗೂ ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳ್ಳುತ್ತಲೇ ಬಂದಿದೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಜೈಶಂಕರ್, ಅಮೆರಿಕದ ಚುನಾವಣೆಯ ಫಲಿತಾಂಶಗಳು ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳೆದ ಕೆಲ ದಶಕಗಳಿಂದ ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧದಲ್ಲಿ ವ್ಯಾಪಕ ಸಾಮರಸ್ಯ ಬೆಳೆಯುತ್ತಲೇ ಇದೆ ಎಂದು ಅವರು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಸೇರಿದಂತೆ ಕಳೆದ ಐವರು ಅಧ್ಯಕ್ಷರ ಅವಧಿಗಳಲ್ಲಿ ಅಮೆರಿಕ ಜೊತೆಗೆ ಭಾರತದ ಸಂಬಂಧವು ಸ್ಥಿರವಾದ ಪ್ರಗತಿಯನ್ನು ಕಾಣುತ್ತಲೇ ಬಂದಿದೆ. ಈಗ ನಡೆಯುತ್ತಿರುವ ಅಮೆರಿಕದ ಚುನಾವಣೆಯಯಲ್ಲಿ ಯಾವುದೇ ತೀರ್ಪು ಬಂದರೂ, ಅದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಇನ್ನೂ ಮುಂದೆಯೂ ಅಮೆರಿಕದೊಂದಿಗಿನ ನಮ್ಮ ಸಂಬಂಧ ಗಟ್ಟಿಯಾಗಿ ಬೆಳೆಯುವ ವಿಶ್ವಾಸವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಮಾಲಾ ಹ್ಯಾರಿಸ್- ಡೊನಾಲ್ಡ್ ಟ್ರಂಪ್ ಕದನ
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಅಭ್ಯರ್ಥಿಯಾಗಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ ಅವರನ್ನು ಎದುರಿಸಲಿದ್ದಾರೆ. ಈಗಿನ ಅಧ್ಯಕ್ಷ ಜೋ ಬೈಡೆನ್ ಅವರು ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಜೋ ಬೈಡೆನ್ ಅವರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
ಒಂದು ವೇಳೆ, ಕಮಲಾ ಹ್ಯಾರಿಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಅವರು ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ. ಇನ್ನು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಧ್ಯಕ್ಷ ಗಾದಿಯನ್ನು ಏರಲು ಎದುರು ನೋಡುತ್ತಿದ್ದಾರೆ. ವಿಶೇಷವೆಂದರೆ, ಟ್ರಂಪ್ ಅವರು ಸತತ ಮೂರನೇ ಬಾರಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುತ್ತಿರುವುದು ಸ್ಪರ್ಧಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಉತ್ತಮ ಸ್ನೇಹವನ್ನು ಹೊಂದಿದ್ದಾರೆ.












Click it and Unblock the Notifications