ತಾಲಿಬಾನ್ ವಿರುದ್ಧ ಗುಡುಗಿದ ವಿಶ್ವಸಂಸ್ಥೆ, ಮತ್ತೆ ಅಮೆರಿಕ ಎಂಟ್ರಿ?
ಮಹಿಳೆಯರ ವಿರೋಧಿ ಅಂತಾ ಗುರುತಿಸಿಕೊಂಡ ತಾಲಿಬಾನಿ ಸರ್ಕಾರ, ವಿಚಿತ್ರ ರೂಲ್ಸ್ ಜಾರಿಗೆ ತರುತ್ತಿದೆ. ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯ ಕಿತ್ತುಕೊಂಡಿದೆ. ಇದರ ಜೊತೆ ಅಪ್ರಾಪ್ತ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಲು ಬಿಡುತ್ತಿಲ್ಲ. ಇಷ್ಟು ಮಾತ್ರವಲ್ಲದೆ ಅಪ್ಘಾನಿಸ್ತಾನದ ನೆಲದಲ್ಲೇ, ಉಗ್ರರಿಗೆ ಬ್ರೇಕ್ ಹಾಕುವಲ್ಲಿಯೂ ತಾಲಿಬಾನ್ ಉಗ್ರರ ಆಡಳಿತ ಎಡವಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಶ್ವಸಂಸ್ಥೆ ಗುಡುಗಿದ್ದು, ಮತ್ತೊಮ್ಮೆ ಅಮೆರಿಕ ಸೇನೆ ಎಂಟ್ರಿ ಕೊಡುತ್ತಾ?
ಹೌದು, ಅಫ್ಘಾನಿಸ್ತಾನ ದೇಶದಲ್ಲಿ 2021ರಲ್ಲಿ ಜನರಿಂದ ಆಯ್ಕೆಯಾಗಿದ್ದ ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿದ ತಾಲಿಬಾನ್ ಉಗ್ರರು ಆ ದೇಶದಲ್ಲಿ ವಿದೇಶಿ ಭಯೋತ್ಪಾದಕರ ಮಟ್ಟ ಹಾಕಲು ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ ಎಂದು ಇದೀಗ ವಿಶ್ವಸಂಸ್ಥೆ ಗರಂ ಆಗಿದೆ. ಈ ಬಗ್ಗೆ ಇದೀಗ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಗುಡುಗಿದ್ದಾರೆ. ಹೀಗಾಗಿ ಮತ್ತೊಮ್ಮೆ ತಾಲಿಬಾನಿಗಳ ನಾಡಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಈ ದೇಶದಲ್ಲಿ ತಾಲಿಬಾನ್ ಸರ್ಕಾರ ಮೊದಲು ತೊಲಗಲಿ ಅಂತಾ ಕಾಯುತ್ತಿದ್ದ ಜನರಿಗೆ ಈಗ, ಹೊಸ ಹುಮ್ಮಸ್ಸು ಬರುತ್ತಿದೆ.

20 ವರ್ಷದ ಸುದೀರ್ಘ ಹೋರಾಟ
ಅಂದಹಾಗೆ ಸುಮಾರು 20 ವರ್ಷ ಸುದೀರ್ಘ ಹೋರಾಟ ಬಳಿಕ, 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣ ಅಫ್ಘಾನಿಸ್ತಾನವನ್ನ ತೊರೆದು ಹೊರಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗಿನ ಸಮಯಕ್ಕೆ 2021ರ ಆಗಸ್ಟ್ 31ನ್ನ ಡೆಡ್‌ಲೈನ್ ಆಗಿ ನೀಡಿ ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡರು. ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಜನ ನೆಮ್ಮದಿಯಾಗಿ ಬದುಕುವ ಹಕ್ಕು ಕೂಡ ಇಲ್ಲ, ಮಹಿಳೆಯರು ಹೊರಗೆ ಬರುವ ಹಕ್ಕು ಕೂಡ ಇಲ್ಲ. ಅಫ್ಘಾನ್‌ಗೆ ತಾಲಿಬಾನ್ ಉಗ್ರರ ಆಡಳಿತ ಗಂಟಲ ಮುಳ್ಳಾಗಿದೆ. ಹೀಗಿದ್ದಾಗಲೇ ಉಗ್ರರನ್ನು ಕೂಡ ಇದೇ ತಾಲಿಬಾನ್ ಬೆಳೆಸುತ್ತಿದೆ ಎಂಬ ಆರೋಪ ಇದೀಗ ವಿಶ್ವಸಂಸ್ಥೆಯಿಂದ ಕೇಳಿಬಂದಿದೆ.
ಇರುವೆಗಳಂತೆ ಹೆಚ್ಚಾದ ಉಗ್ರರ ಸಂಖ್ಯೆ
ಅಂದಹಾಗೆ ತಾಲಿಬಾನ್ ಆಳ್ವಿಕೆ ಇರುವ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ, ಹೆಚ್ಚು ಸ್ವಾತಂತ್ರ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಭಯೋತ್ಪಾದಕರ ಜೈಲು ಶಿಕ್ಷೆಗೆ ಕೂಡ ಮುಕ್ತಿ ನೀಡಲಾಗಿದೆ. ಇದರಿಂದಾಗಿ ಐಎಸ್‌ಐಎಲ್-ಕೆ ಭಯೋತ್ಪಾದಕ ಸಂಘಟನೆಯಲ್ಲಿ 2,200 ಇದ್ದ ಉಗ್ರರ ಸಂಖ್ಯೆಯು ಈಗ ಡಬಲ್ ಆಗಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಎಲ್ಲೆಲ್ಲಿ ಉಗ್ರರು ಹೆಚ್ಚಾಗುತ್ತಿದ್ದಾರೆ?
ಮತ್ತೊಂದು ಕಡೆ ರಾಜಕೀಯ ಅಸ್ಥಿರತೆ ಇರುವ ಪಶ್ಚಿಮ ಆಫ್ರಿಕಾ ಹಾಗೂ ಸಹೇಲ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ, ಅಂದರೆ ಐಎಸ್ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡಿದೆ. ಇದರ ಜೊತೆಗೆ, ಇಲ್ಲಿನ ಭಯೋತ್ಪಾದಕ ಸಂಘಟನೆಗಳು ಹೊರದೇಶಗಳಲ್ಲಿ ದಾಳಿ ನಡೆಸುತ್ತವೆ ಎಂದು ವಿಶ್ವಸಂಸ್ಥೆಯ ಭಯೋತ್ಪಾದಕ ನಿಗ್ರಹ ಮುಖ್ಯಸ್ಥ ವ್ಲಾದಿಮಿರ್ ವೊರನ್‌ಕೋಫ್ ಆರೋಪ ಮಾಡಿದ್ದಾರೆ.
ಭಯೋತ್ಪಾದನೆ ನಿಗ್ರಹಕ್ಕೆ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಹಲವು ಕ್ರಮ ಕೈಗೊಂಡ ನಂತರವು ಕೂಡ, ಐಎಸ್ ಸಂಘಟನೆ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಸಮಸ್ಯೆ ಮಾಡುತ್ತಿದೆ. ಸಂಘರ್ಷ ಪೀಡಿತ ವಲಯಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಈ ಹಿಂದೆ ಇರಾಕ್ ಸೇರಿದಂತೆ, ಸಿರಿಯಾ, ಆಗ್ನೇಯ ಏಷ್ಯಾದಲ್ಲಿ ಹಿಡಿತ ಹೊಂದಿದ್ದ ಐಎಸ್ ಸಂಘಟನೆ ತನ್ನ ಜಾಲ ದಿನದಿಂದ ದಿನಕ್ಕೆ ಮತ್ತಷ್ಟು ವಿಸ್ತರಿಸಿಕೊಂಡಿದೆ ಎಂದು ಆರೋಪ ಮಾಡಲಾಗಿದೆ.












Click it and Unblock the Notifications