6 ನಾಗರಿಕರ ಭೀಕರ ಸಾವು, 11 ಜನರಿಗೆ ಗಾಯ...
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಮಾಯಕರ ರಕ್ತಪಾತ ಮುಂದುವರಿದಿದೆ. ಅದರಲ್ಲೂ ಒಬ್ಬರ ಮೇಲೆ ಮತ್ತೊಬ್ಬರ ಹಗೆತನ ಜೋರಾದ ಮೇಲೆ ಸಾವಿನ ಸಂಖ್ಯೆ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈಗಲೂ ಅಷ್ಟೇ ರಷ್ಯಾ ನಡೆಸಿದ ಭೀಕರ ದಾಳಿಗೆ ಹಲವರ ಪ್ರಾಣಪಕ್ಷಿ ಹಾರಿ ಹೋಗಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ.
ರಷ್ಯಾ ಗಡಿ ಭಾಗದಿಂದ 100 ಕಿಲೋ ಮೀಟರ್ ದೂರದ ಮೊರೊಜೊವಾಸ್ಕಿ ಜಿಲ್ಲೆ ಒಳಗಡೆ ನುಗ್ಗಿದ್ದ 44 ಡ್ರೋನ್‌ಗಳನ್ನು ನಿನ್ನೆ ರಷ್ಯಾ ಸೇನೆ ಹೊಡೆದು ಉರುಳಿಸಿತ್ತು. ಈ ಘಟನೆ ನಂತರ ಪರಿಸ್ಥಿತಿ ಭೀಕರವಾಗಿದೆ. ಉಕ್ರೇನ್ ತನ್ನ ನೆಲದ ಮೇಲೆ ದಾಳಿ ಮಾಡಿದೆ ಅಂತಾ ರೊಚ್ಚಿಗೆದ್ದಿರುವ ರಷ್ಯಾ ಸೇನೆ, ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಹೀಗಾಗಿ ಈಗ ಉಕ್ರೇನ್ ಬುಡ ಅಲ್ಲಾಡಿ ಹೋಗಿದೆ. ಹಾಗಾದ್ರೆ ರಷ್ಯಾ ನಡೆಸಿದ ದಾಳಿ ಹೇಗಿತ್ತು? ದಾಳಿ ವೇಳೆ ಮೃತಪಟ್ಟ ಉಕ್ರೇನ್ ನಾಗರಿಕರ ಸಂಖ್ಯೆ ಎಷ್ಟು? ಮುಂದೆ ಓದಿ.

ಏನೆಲ್ಲಾ ಹಾನಿ ಉಂಟಾಗಿದೆ?
ಅಷ್ಟಕ್ಕೂ ಉಕ್ರೇನ್ ದೇಶದ ಅತಿದೊಡ್ಡ ನಗರ ಹಾರ್ಕಿವ್ ಮೇಲೆ ರಷ್ಯಾ ಸೇನೆ ಡ್ರೋನ್‌ಗಳ ಮೂಲಕ ದಾಳಿ ಮಾಡಿ, ಕ್ಷಿಪಣಿ ಕೂಡ ಹಾರಿಸಿದೆಯಂತೆ. ಈ ದಾಳಿಯಲ್ಲಿ ಸುಮಾರು 6 ಉಕ್ರೇನ್ ನಾಗರಿಕರು ಜೀವ ಬಿಟ್ಟಿದ್ದರೆ, ಇದರ ಜೊತೆಗೆ 11 ಜನ ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ. ಕ್ಷಿಪಣಿ ದಾಳಿ ಪರಿಣಾಮ ಜನವಸತಿ ಕಟ್ಟಡಗಳು, ಗ್ಯಾಸ್ ಸ್ಟೇಷನ್, ಶಿಶುವಿಹಾರ, ಕೆಫೆ, ಅಂಗಡಿಗಳು ಹಾಗೂ ಕಾರುಗಳು ಹಾನಿಗೀಡಾಗಿವೆ ಎಂದು ಹಾರ್ಕಿವ್ ನಗರದ ಗವರ್ನರ್ ತಿಳಿಸಿದ್ದು, ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಇರಾನ್ ನಿರ್ಮಿತ ಡ್ರೋನ್ ಬಳಕೆ?
ಇನ್ನು ಈ ದಾಳಿಯಲ್ಲಿ ಇರಾನ್ ನಿರ್ಮಿತ 32 ಶಾಹಿದ್ ಡ್ರೋನ್‌ಗಳು & 6 ಕ್ಷಿಪಣಿ ಬಳಕೆಯ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಅಸ್ತ್ರಗಳ ಪೈಕಿ 3 ಕ್ರೂಸ್ ಕ್ಷಿಪಣಿಗಳು ಮತ್ತು 28 ಡ್ರೋನ್ ಹೊಡೆದು ಉರುಳಿಸಿದ್ದೇವೆ ಎಂದು ಉಕ್ರೇನ್ ಮಾಹಿತಿ ನೀಡುತ್ತಿದೆ. ಇಷ್ಟಾದರೂ ಈ ದಾಳಿಯ ಬಗ್ಗೆ ರಷ್ಯಾ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆ ರಷ್ಯಾ ಮತ್ತಷ್ಟು ದಾಳಿ ನಡೆಸುವ ಭೀತಿ ಈಗ ಆವರಿಸಿದೆ. ಹೀಗಾಗಿ ಉಕ್ರೇನ್ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ರಷ್ಯಾ ದಾಳಿ ಹಿಮ್ಮೆಟ್ಟಿಸಲು ಸಿದ್ಧತೆಯನ್ನು ಮಾಡಲಾಗಿದೆ.

ಹೀಗೆ ರಷ್ಯಾ & ಉಕ್ರೇನ್ ಯುದ್ಧ ಕೈಮೀರಿ ಹೋಗಿರುವ ಹಂತಕ್ಕೆ ಬಂದು ನಿಂತಿದ್ದು, ಮುಂದಿನ ದಿನಗಳಲ್ಲಿ ಇಬ್ಬರ ನಡುವೆ ಮತ್ತಷ್ಟು ಘೋರ ಯುದ್ಧ ನಡೆಯುವ ಆತಂಕ ಕಾಡುತ್ತಿದೆ. ರಷ್ಯಾ ಬಳಿ ಭೀಕರ ಅಸ್ತ್ರಗಳ ರಾಶಿಯೇ ಇದ್ದು, ಹೀಗಾಗಿ ಮುಂದೆ ಇದು ಕೈಮೀರಿ ಹೋಗುವ ಭಯ ಕೂಡ ಕಾಡುತ್ತಿದೆ. ಹೀಗಾಗಿ ಮುಂದೆ ಏನಾಗುತ್ತೆ? ಅನ್ನೋ ಭಯ ಉಕ್ರೇನ್ ಜನರ ಮನಸ್ಸಿನಲ್ಲಿ ಆವರಿಸಿದೆ.












Click it and Unblock the Notifications