21 ಸಾವಿರ ರಷ್ಯಾ ಸೈನಿಕರನ್ನು ಕೊಂದು ಹಾಕಿದ ಉಕ್ರೇನ್ ಸೇನೆ: ಹೇಗೆ ಗೊತ್ತಾ?
ಕೀವ್: ರಷ್ಯಾ ಹಾಗೂ ಉಕ್ರೇನ್ ಮಧ್ಯೆ ರಣಭೀಕರ ಕದನ ಕ್ಷಣಕ್ಷಣಕ್ಕೂ ಕೈಮೀರುತ್ತಿದ್ದು, ಎರಡೂ ದೇಶಗಳ ರಕ್ತದಾಹ ಕಡಿಮೆ ಆಗುತ್ತಿಲ್ಲ. ಹೀಗೆ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈ ನಡುವೆ 21 ಸಾವಿರ ರಷ್ಯಾ ಸೈನಿಕರನ್ನು ಕೊಲೆ ಮಾಡಿರುವುದಾಗಿ ಉಕ್ರೇನ್ ಸ್ಫೋಟಕ ಮಾಹಿತಿ ಹೊರಹಾಕಿದೆ. ಹಾಗಾದ್ರೆ ಈ ಹತ್ಯೆ ನಡೆದಿದ್ದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧ ಶುರುವಾಗಿ ಇಂದಿಗೆ ಸರಿಯಾಗಿ 494 ದಿನಗಳು ಕಳೆದಿವೆ. ಇನ್ನೇನು ಈ ಯುದ್ಧ 500 ದಿನ ಪೂರೈಸಲಿದ್ದು, ಈ ನಡುವೆ ಎರಡೂ ದೇಶಗಳ ಸೇನೆಯ ನಡುವೆ ತೀವ್ರ ದಾಳಿ ಮತ್ತು ಪ್ರತಿದಾಳಿ ನಡೆಯುತ್ತಿದೆ. ಅದರಲ್ಲೂ ರಷ್ಯಾ ನಡೆಸುತ್ತಿರುವ ಭೀಕರ ದಾಳಿಗೆ ಉಕ್ರೇನ್ ಜನರು ಬೆಚ್ಚಿಬಿದ್ದಿದ್ದಾರೆ. ಈ ಮಧ್ಯೆ ರಷ್ಯಾದ ಒಟ್ಟು 21 ಸಾವಿರ ಸೈನಿಕರನ್ನು ಕೊಂದು ಹಾಕಿದ್ದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿರುವುದು ಸಂಚಲನ ಸೃಷ್ಟಿಸಿದೆ. ದಿಢೀರ್ ಇಂತಹ ಸ್ಫೋಟಕ ಮಾಹಿತಿ ನಿಡಿರುವುದು ರಷ್ಯಾ ಕೋಪ ಕೆರಳಿಸಿದೆ. ರಷ್ಯಾ ತನ್ನಲ್ಲಿರುವ ಪರಮಾಣು ಅಸ್ತ್ರ ಹೊರತೆಗೆಯುವ ಮುನ್ಸೂಚನೆ ಸಿಕ್ಕಿದೆ (Russia Ukraine War).

21 ಸಾವಿರ ಸೈನಿಕರು ಸತ್ತಿದ್ದು ಹೇಗೆ?
ಸರಿಯಾಗಿ ಒಂದು ವಾರದ ಹಿಂದಷ್ಟೇ ರಷ್ಯಾದಲ್ಲಿ ಖಾಸಗಿ ಸೇನೆ ದಂಗೆ ಎದ್ದು ಬಿರುಗಾಳಿ ಬೀಸುತ್ತಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ನೀಡಿರುವ ಮಾಹಿತಿ ಮತ್ತೊಮ್ಮೆ ರಷ್ಯಾ ಒಳಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಯುದ್ಧ ಶುರುವಾಗಿ ಇಲ್ಲಿವರೆಗೂ ಅಂದ್ರೆ ಕಳೆದ 494 ದಿನದಲ್ಲಿ, ರಷ್ಯಾದ ಬರೋಬ್ಬರಿ 21 ಸಾವಿರ ಖಾಸಗಿ ಸೈನಿಕರನ್ನು ಕೊಂದು ಹಾಕಿದ್ದೀವಿ ಅಂತಾ ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ. ವ್ಯಾಗ್ನರ್ ಗ್ರೂಪ್ ಎಂದೂ ಕರೆಯಲಾಗುವ ರಷ್ಯಾ ಖಾಸಗಿ ಸೇನೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಮಹತ್ವದ ಹೋರಾಟ ನಡೆಸುತ್ತಿದೆ. ಇದೇ ಕಾರಣಕ್ಕೆ ಖಾಸಗಿ ಸೇನೆಯ 21 ಸಾವಿರ ಸೈನಿಕರನ್ನು ಕೊಂದು ಹಾಕಿದ್ದೀವಿ ಎಂದು ಈಗ ಉಕ್ರೇನ್ ಮಾಹಿತಿ ನೀಡಿದೆ.
ಭೀಕರ ಕ್ಷಿಪಣಿ ದಾಳಿ ನಡೆಸಿದ ರಷ್ಯಾ
ರಷ್ಯಾ ಮತ್ತು ಉಕ್ರೇನ್ ಎರಡು ಕಡೆ ಸೇರಿ ಲಕ್ಷಾಂತರ ಜನ ಉಸಿರು ಚೆಲ್ಲಿದ್ದಾರೆ ಎನ್ನಲಾಗಿದೆ. ಆದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ ಯುದ್ಧವು ತಣ್ಣಗಾಗುತ್ತಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ ಉಕ್ರೇನ್ & ರಷ್ಯಾ ಕಿತ್ತಾಟ ಸೈಲೆಂಟ್ ಆಗುವ ಲಕ್ಷಣ ಕಾಣ್ತಿಲ್ಲ. ಅದ್ರಲ್ಲೂ ಉಕ್ರೇನ್ ಪರವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಗಟ್ಟಿ ನಿಲುವನ್ನು ತೆಗೆದುಕೊಂಡಿವೆ. ಇದು ಕೂಡ ರಷ್ಯಾ ಕೋಪ ನೆತ್ತಿಗೇರುವಂತೆ ಮಾಡಿದೆ. ಯುದ್ಧ ಇಂದು ನಿಲ್ಲುತ್ತೆ, ನಾಳೆ ಕೊನೆಯಾಗುತ್ತೆ ಅಂತಾ ಕಾದಿದ್ದೇ ಬಂತು. ಆದ್ರೆ ನೋಡ ನೋಡುತ್ತಲೇ 500 ದಿನ ಪೂರೈಸುತ್ತಿದೆ ರಷ್ಯಾ & ಉಕ್ರೇನ್ ಬಡಿದಾಟ. ನಿನ್ನೆ ರಾತ್ರಿಯಷ್ಟೇ ಮಾಸ್ಕೋ ಮತ್ತೊಮ್ಮೆ ಕ್ಷಿಪಣಿ ದಾಳಿ ನಡೆಸಿದೆ. ಹಲವರ ಪ್ರಾಣಪಕ್ಷಿ ರಷ್ಯಾ ದಾಳಿಯಲ್ಲಿ ಹಾರಿ ಹೋಗಿದೆ ಎಂಬ ಆರೋಪ ಕೇಳಿಬಂದಿದೆ.

ವಿಶ್ವಬ್ಯಾಂಕ್, ಅಮೆರಿಕದ ಸಹಾಯ
ಕೆಲದಿನಗಳ ಹಿಂದಷ್ಟೇ ಅಮೆರಿಕ ತನ್ನ ಸ್ನೇಹಿತ ಉಕ್ರೇನ್‌ಗೆ ಸುಮಾರು 4 ಸಾವಿರ ಕೋಟಿ ರೂ. ಗಿಫ್ಟ್ ಕೊಟ್ಟಿತ್ತು. ಇದರ ನಡುವೆ ವಿಶ್ವಬ್ಯಾಂಕ್ ಕೂಡ ಸಹಾಯ ಹಸ್ತ ಚಾಚುತ್ತಿದೆ. ಉಕ್ರೇನ್‌ಗೆ ಸುಮಾರು 12 ಸಾವಿರ ಕೋಟಿ ರೂಪಾಯಿ ಸಾಲ ನೀಡಲು ವಿಶ್ವಬ್ಯಾಂಕ್ ಈಗ ಮುಂದಾಗಿದೆ. ತನ್ನ ಬಜೆಟ್ ಘೋಷಣೆ ಪೂರ್ಣಗೊಳಿಸಲು ಈ ಸಹಾಯ ಮಾಡುತ್ತಿರುವ ಬಗ್ಗೆ ವಿಶ್ವಬ್ಯಾಂಕ್ ಉಕ್ರೇನ್‌ಗೆ ತಿಳಿಸಿದೆ. ಈಗಾಗಲೇ 3 ಬಿಲಿಯನ್ ಡಾಲರ್ ಹಣ ಬಜೆಟ್ ಪೂರೈಕೆಗಾಗಿ ಉಕ್ರೇನ್‌ಗೆ ಹರಿದುಬಂದಿದೆ. ಅತ್ತ ಅಮೆರಿಕ ಮಿಲಿಟರಿ ಸಹಾಯ ಮಾಡುತ್ತಿದ್ದು ಈವರೆಗೆ 3 ಲಕ್ಷ ಕೋಟಿ ರೂ. ಕೊಟ್ಟಿದೆ. ಇದೆಲ್ಲವನ್ನ ನೋಡುತ್ತಿದ್ದರೆ ರಷ್ಯಾ ವಿರುದ್ಧ ಉಕ್ರೇನ್ ಬಲಗೊಳ್ಳುತ್ತಿರುವ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications