ಉಕ್ರೇನ್ನಿಯರು ಅನುಭವ ಇಲ್ಲದವರಲ್ಲ: ರಷ್ಯಾಕ್ಕೆ ಝೆಲೆನ್ಸ್ಕಿ ತಿರುಗೇಟು
ಕೀವ್, ಮಾರ್ಚ್ 30: ಉಕ್ರೇನ್ ಹಾಗೂ ರಷ್ಯಾದ ನಡುವೆ ಎರಡನೇ ಹಂತದ ಶಾಂತಿ ಮಾತುಕತೆ ಬಳಿಕ ರಷ್ಯಾವು ಶಾಂತಿ ಮಾತುಕತೆ ಸಂದರ್ಭದಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ತನ್ನ ಸೇನೆಯನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿದೆ. ಈ ನಡುವೆ ಇದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಉಕ್ರೇನ್ ರಷ್ಯಾದ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದೆ.
Recommended Video

ಕೀವ್ ಹಾಗೂ ಇನ್ನೊಂದು ನಗರದ ಸುತ್ತ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ಮಾತುಕತೆಗಳಲ್ಲಿ ರಷ್ಯಾದ ಭರವಸೆಗೆ ಉಕ್ರೇನ್ ಸಂದೇಹವನ್ನು ವ್ಯಕ್ತಪಡಿಸಿದೆ. ಎರಡನೇ ಮಹಾಯುದ್ಧದ ನಂತರ ಐರೋಪ್ಯ ರಾಷ್ಟ್ರವೊಂದರ ಮೇಲೆ ನಡೆದ ಅತಿ ದೊಡ್ಡ ದಾಳಿಯ ಹಿನ್ನೆಲೆ ಉಭಯ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆಯು ನಡೆಯುತ್ತಿದೆ.
ಈ ಯುದ್ಧದಿಂದಾಗಿ ಈಗಾಗಲೇ ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಸುಮಾರು 4 ಮಿಲಿಯನ್ ಜನರು ವಿದೇಶಕ್ಕೆ ಪಲಾಯನ ಮಾಡಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ. ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾದ ಮೇಲೆ ಹಲವಾರು ದೇಶಗಳು ಆರ್ಥಿಕ ನಿರ್ಬಂಧವನ್ನು ಹೇರಿದೆ.

ಕೀವ್, ಚೆರ್ನಿಹಿವ್‌ನಲ್ಲಿ ಸೇನೆ ಕಡಿತಗೊಳಿಸಲು ರಷ್ಯಾ ನಿರ್ಧಾರ
ಮಾತುಕತೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್, "ಪರಸ್ಪರ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಮಾತುಕತೆಗಳಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ಸೃಷ್ಟಿಸಲು, ಒಪ್ಪಂದಕ್ಕೆ ಸಹಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು, ಕೀವ್ ಹಾಗೂ ಚೆರ್ನಿಹಿವ್ ದಿಕ್ಕುಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಕಡಿಮೆ ಮಾಡಲಾಗುವುದು ಎಂದು ನಿರ್ಧಾರ ಮಾಡಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.
ಆಗ್ನೇಯದಲ್ಲಿ ಮರಿಯುಪೋಲ್, ಪೂರ್ವದಲ್ಲಿ ಸುಮಿ ಮತ್ತು ಖಾರ್ಕಿವ್ ಮತ್ತು ದಕ್ಷಿಣದಲ್ಲಿ ಖೆರ್ಸನ್ ಮತ್ತು ಮೈಕೊಲೈವ್ ಸೇರಿದಂತೆ ಹಲವು ಪ್ರದೇಶಗಳು ರಷ್ಯಾದ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಆದರೆ ಈ ಪ್ರದೇಶದಲ್ಲಿ ಸೇನೆಯನ್ನು ಹಾಗೂ ಸೇನೆಯ ಕಾರ್ಯಾಚರಣೆಯನ್ನು ಕಡಿತ ಮಾಡುವ ಬಗ್ಗೆ ರಷ್ಯಾ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಬರೀ ಕೀವ್ ಹಾಗೂ ಚೆರ್ನಿಹಿವ್‌ನಲ್ಲಿ ಮಾತ್ರ ಸೇನೆ ಕಡಿತ ಮಾಡುವುದಾಗಿ ಹೇಳಿದೆ.
"ಉಕ್ರೇನಿಯನ್ನರು ಅನುಭವ ಇಲ್ಲದ ಜನರೇನಲ್ಲ"
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ಉಕ್ರೇನಿಯನ್ನರು ಅನುಭವ ಇಲ್ಲದ ಜನರೇನಲ್ಲ. ಈ 34 ದಿನಗಳ ಆಕ್ರಮಣದ ಸಮಯದಲ್ಲಿ ಉಕ್ರೇನಿಯನ್ನರು ಈಗಾಗಲೇ ಕಲಿತಿದ್ದಾರೆ. ಡಾನ್ಬಾಸ್‌ನಲ್ಲಿನ ಕಳೆದ ಎಂಟು ವರ್ಷಗಳ ಯುದ್ಧದಲ್ಲಿ ನಾವು ಕಲಿತಿದ್ದೇವೆ. ಯಾವುದನ್ನು ನಂಬಬಹುದು ಎಂದು ತಿಳಿದಿದೆ," ಎಂದು ಹೇಳುವ ಮೂಲಕ ರಷ್ಯಾದ ಭರವಸೆಯ ಮೇಲೆ ಅನುಮಾನ ಇರುವುದನ್ನು ಸ್ಪಷ್ಟಪಡಿಸಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಮೊಟಕುಗೊಳಿಸುವ ರಷ್ಯಾದ ಭರವಸೆಯು "ಬಹುಶಃ ಪ್ರತ್ಯೇಕ ಘಟಕಗಳನ್ನು ವಾಪಾಸ್ ಪಡೆಯಲು ಮತ್ತು ತಪ್ಪುದಾರಿಗೆಳೆಯುವ ಗುರಿಯನ್ನು ಹೊಂದಿದೆ" ಎಂದು ಉಕ್ರೇನಿಯನ್ ಸಶಸ್ತ್ರ ಪಡೆಗಳ ಸಾಮಾನ್ಯ ಸಿಬ್ಬಂದಿ ಹೇಳಿದರು.
ರಷ್ಯಾ ಆಕ್ರಮಣಕ್ಕೆ ಬೆದರಿದ ಉಕ್ರೇನ್ ತಟಸ್ಥ ನಿಲುವು ತಾಳುವುದಾಗಿ ಸಂಧಾನ ಸಭೆಯಲ್ಲಿ ಹೇಳಿದೆ. ಆ ಮೂಲಕ ರಷ್ಯಾದ ದಾಳಿಗೆ ಬೆದರಿದ ಉಕ್ರೇನ್, ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ತನ್ನ ಉದ್ದೇಶದಿಂದ ಹಿಂದೆ ಸರಿದಿದೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಮಿಲಿಟರಿ ಚಟುವಟಿಕೆಯನ್ನು ಕಡಿಮೆ ಮಾಡುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆಯು ಯಶಸ್ವಿಯಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications