ರಷ್ಯಾ ದಾಳಿಗೆ ಮರಿಯುಪೋಲ್ ಥಿಯೇಟರ್‌ನಲ್ಲಿ ಆಶ್ರಯ ಪಡೆದ 300 ಜನ ಸಾವು
ಕೀವ್, ಮಾರ್ಚ್ 25: ರಷ್ಯಾ ನಡೆಸುತ್ತಿರುವ ಯುದ್ಧ ಮುಂದುವರಿದಿದೆ. ಉಕ್ರೇನ್‌ನ ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ 300ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ವರದಿ ಆಗಿದೆ.
ಮರಿಯುಪೋಲ್ ನಗರದಲ್ಲಿ ರಷ್ಯಾ ಸೇನೆಯು ನಿರಂತರವಾಗಿ ವೈಮಾನಿಕ ದಾಳಿ ಹಾಗೂ ಶೆಲ್ ದಾಳಿ ನಡೆಸುತ್ತಿದೆ. ಅತ್ಯಾಪ್ತರು, ಸಂಬಂಧಿಕರನ್ನು ಕಳೆದುಕೊಂಡ ಸಾವಿರಾರು ಮಂದಿ ನಿರಾಶ್ರಿತರಾಗುತ್ತಿದ್ದಾರೆ.
ಕಳೆದ ಮಾರ್ಚ್ 16ರಂದು, ರಷ್ಯಾದ ಪಡೆಗಳು ಉಕ್ರೇನಿಯನ್ ಬಂದರು ನಗರವಾದ ಮರಿಯುಪೋಲ್‌ನಲ್ಲಿರುವ ಥಿಯೇಟರ್‌ನಲ್ಲಿ ಶಕ್ತಿಯುತ ಬಾಂಬ್ ದಾಳಿ ನಡೆಸಿದ್ದವು. ಅಂದಿನ ವೇಳೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಚಿತ್ರಮಂದಿರದಲ್ಲಿ ಆಶ್ರಯ ಪಡೆದಿದ್ದರು.

ಸಂಪರ್ಕ ಕಡಿದುಕೊಂಡ ಮರಿಯುಪೋಲ್:
ಉಕ್ರೇನ್‌ನ ಉಳಿದ ನಗರಗಳಿಗೆ ಹೋಲಿಸಿದರೆ ರಷ್ಯಾ ದಾಳಿಯಿಂದ ಮರಿಯುಪೋಲ್ ನಗರವೇ ಅತಿಹೆಚ್ಚು ಹೈರಾಣಾಗಿದೆ. ದೇಶದ ಉಳಿದ ನಗರಗಳೊಂದಿಗೆ ನಂಟು ಕಡಿದುಕೊಂಡಿದೆ. ಮಾನವ ಸಂಪೂನ್ಮೂಲದ ಜೊತೆಗೆ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ತತ್ತರಿಸಿ ಹೋಗುತ್ತಿದ್ದಾರೆ.
ಕಳೆದ ಫೆಬ್ರವರಿ 24ರಂದು ಮೊದಲ ಬಾರಿಗೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಸಾರಿತು. ಅಂದಿನಿಂದ ಇಂದಿನವರೆಗೂ ಎರಡು ರಾಷ್ಟ್ರಗಳ ನಡುವೆ ಸಮರ ಮುಂದುವರಿದಿದೆ. ಎರಡು ರಾಷ್ಟ್ರಗಳ ನಡುವಿನ ಕಾದಾಟ 30ನೇ ದಿನಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ನ್ಯಾಟೋ ರಾಷ್ಟ್ರಗಳು ಉಕ್ರೇನ್ ರಾಷ್ಟ್ರಕ್ಕೆ ಬೆಂಬಲ ಘೋಷಿಸಿವೆ.
ಚೀನಾಗೆ ಎಚ್ಚರಿಕೆ ನೀಡಿದ ನ್ಯಾಟೋ:
"ವಿಶ್ವದ ಇತರ ಭಾಗಗಳೊಂದಿಗೆ ಸೇರಿ ಉಕ್ರೇನ್ ವಿರುದ್ಧದ ಕ್ರೂರ ಯುದ್ಧವನ್ನು ಖಂಡಿಸಬೇಕು. ರಷ್ಯಾವನ್ನು ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ಬೆಂಬಲಿಸಬಾರದು ಎಂಬುದು ಚೀನಾಕ್ಕೆ ಸಂದೇಶವಾಗಿದೆ," ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. "ನಾವು ಒಂದು ಪೀಳಿಗೆಯಲ್ಲಿ ಅತಿದೊಡ್ಡ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ನಮ್ಮ ಮೈತ್ರಿಯನ್ನು ಬಲವಾಗಿ ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ," ಎಂದು ತಿಳಿಸಿದರು.
ಉಕ್ರೇನ್ ಬತ್ತಳಿಕೆಗೆ ನ್ಯಾಟೋ ಅಸ್ತ್ರ:
ರಷ್ಯಾದ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ಉಕ್ರೇನ್ ಪರವಾಗಿ ನ್ಯಾಟೋ ಎಲ್ಲಾ ರಕ್ಷಣಾ ಯೋಜನೆಗಳನ್ನು ಸಕ್ರಿಯಗೊಳಿಸಿದೆ ಎಂದು ನ್ಯಾಟೋ ಹೇಳಿಕೆಯಲ್ಲಿ ತಿಳಿಸಿದೆ. "40,000 ಪಡೆಗಳನ್ನು ಪೂರ್ವದಲ್ಲಿ ನಿಯೋಜನೆ ಮಾಡಲಾಗಿದೆ. ಮಿತ್ರ ರಾಷ್ಟ್ರಗಳೆಲ್ಲವೂ ಸಹಾಯ ಮಾಡಲಿದೆ. ನಾವು ಬಲ್ಗೇರಿಯಾ, ಹಂಗೇರಿ, ರೊಮೇನಿಯಾ ಮತ್ತು ಸ್ಲೋವಾಕಿಯಾದಲ್ಲಿ ನಾಲ್ಕು ಹೆಚ್ಚುವರಿ ಯುದ್ಧ ಪಡೆಯನ್ನು ನಿಯೋಜನೆ ಮಾಡುತ್ತೇವೆ. ಮಿತ್ರರಾಷ್ಟ್ರಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಣು ಬಾಂಬ್ ಅನ್ನು ಎದುರಿಸಲು ಬೇಕಾದ ರಕ್ಷಣಾತ್ಮಕ ಕ್ರಮವನ್ನು ಕೂಡಾ ಕೈಗೊಳ್ಳಲಾಗುವುದು. ಸೈಬರ್ ದಾಳಿಯ ಸಂದರ್ಭದಲ್ಲಿ ಪರಸ್ಪರ ಬೆಂಬಲ ಒದಗಿಸುತ್ತೇವೆ. ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ನ್ಯಾಟೋ ಹೇಳಿದೆ.












Click it and Unblock the Notifications