ರಷ್ಯಾದ 35 ಡ್ರೋನ್ ಉಡೀಸ್ ಮಾಡಿದ ಉಕ್ರೇನ್ ಸೇನೆ!
ಕೀವ್: ವಿಜಯ ದಿವಸಕ್ಕೆ ಮೊದಲು ರಷ್ಯಾ & ಉಕ್ರೇನ್ ಮಧ್ಯೆ ಭೀಕರ ಕಾಳಗ ಆರಂಭವಾಗಿದೆ. ತನ್ನ ಮೇಲೆ ರಷ್ಯಾ ಹಾರಿಸುತ್ತಿರುವ ಡ್ರೋನ್ & ಮಿಸೈಲ್ ಉಕ್ರೇನ್ ಸೇನೆ ಹೊಡೆದು ಹೊಡೆದು ಮಲಗಿಸುತ್ತಿದೆ. ಅಮೆರಿಕದ ಸಹಾಯದಿಂದ ಇದೀಗ ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ತಿರುಗಿಬಿದ್ದಿದೆ. ಹಾಗಾದರೆ ಇದರ ಪರಿಣಾಮ ಮುಂದೆ ಏನಾಗಬಹುದು? ಇಲ್ಲಿ ತಿಳಿಯೋಣ.
ಹೌದು, ರಷ್ಯಾ ಮಿಲಿಟರಿ ಉಕ್ರೇನ್‌ನ ನಗರಗಳನ್ನೇ ಗುರಿಯಾಗಿಸಿ ರಾತ್ರಿ ಸಮಯದಲ್ಲಿ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿ ಶುರು ಮಾಡಿದೆ. ಈ ಅಟ್ಯಾಕ್ ನಂತರ ಉಕ್ರೇನ್‌ನ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಈ ಬೆಳವಣಿಗೆ ಮಧ್ಯೆ ತಕ್ಷಣ ಎಚ್ಚೆತ್ತ ಉಕ್ರೇನ್ ಸೇನೆ ರಷ್ಯಾ ಹಾರಿಸಿದ್ದ ಸುಮಾರು 35 ಡ್ರೋನ್ ಹೊಡೆದು ಹಾಕಿದೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಐವರು ನಾಗರಿಕರು ಗಾಯಗೊಂಡಿದ್ದು, ಪರಿಸ್ಥಿತಿ ನಿಭಾಯಿಸಲು ಗಡಿಯಲ್ಲಿ ಹೈಅಲರ್ಟ್ ಕೂಡ ಘೋಷಿಸಿದೆ ಉಕ್ರೇನ್ ಸೇನೆ.

ರಷ್ಯಾ ಟಾರ್ಗೆಟ್ ಯಾವ ಜಾಗ?
ಅಂದಹಾಗೆ ಉಕ್ರೇನ್‌ನ ಉತ್ತರ, ದಕ್ಷಿಣ, ಪೂರ್ವ ಭಾಗದಾದ ಸುಮಾರು 127 ಸ್ಥಳಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಶೆಲ್ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ. ಯುದ್ಧ ಟ್ಯಾಂಕ್, ಡ್ರೋನ್ ಸೇರಿದಂತೆ ಯುದ್ಧ ವಿಮಾನಗಳನ್ನ ಬಳಸಿ ದಾಳಿ ಮಾಡಿದೆಯಂತೆ ರಷ್ಯಾ ಸೇನೆ. ರಾಕೆಟ್ ಲಾಂಚರ್, ಕ್ಷಿಪಣಿ, ಬಾಂಬ್‌ಗಳನ್ನೂ ಉಕ್ರೇನ್ ಮೇಲೆ ಎಸೆದಿರುವ ಆರೋಪ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ ನಾಲ್ವರು ಅಮಾಯಕರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ.
ಸೇಡಿ ಸೇಡು ಅಂತಾ ರಷ್ಯಾ?
ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದ ನಂತರ ಭಯ ಆವರಿಸಿಬಿಟ್ಟಿದೆ. ಅತ್ತ ಗಡಿ ಭಾಗದಲ್ಲಿ ಉಕ್ರೇನ್ ಕೂಡ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ನಡುವೆ ರಷ್ಯಾ ಒಳಗೇ ನುಗ್ಗಿ ಪುಟಿನ್ ಹತ್ಯೆಗೂ ಪ್ರಯತ್ನ ಪಟ್ಟಿದ್ದಾರೆ ಆಗಂತುಕರು. ಇನ್ನೊಂದ್ಕಡೆ 'ವಿಜಯ ದಿವಸ' ಆಚರಣೆ ವೇಳೆ ದಾಳಿ ನಡೆಯುವ ಭೀತಿ ಸೃಷ್ಟಿಯಾಗಿತ್ತು. ಇದೇ ಕಾರಣಕ್ಕೆ 'ವಿಜಯ ದಿವಸ' ಆಚರಣೆ ಕ್ಯಾನ್ಸಲ್ ಮಾಡಲು ರಷ್ಯಾ ಸೇನಾಧಿಕಾರಿಗಳು ಚಿಂತಿಸುತ್ತಿದ್ದರು. ಆದರೆ ಈಗ ಶತ್ರಗಳನ್ನ ಬಗ್ಗುಬಡಿದು, 'ವಿಜಯ ದಿವಸ' ಸಂಭ್ರಮ ಡಬಲ್ ಮಾಡಲು ಮುಂದಾಗಿದೆ ರಷ್ಯಾ ಸೇನೆ.
ಏನಿದು ರಷ್ಯಾ 'ವಿಜಯ ದಿವಸ'?
ಅದು 1945 ಮೇ 8, ನಾಜಿ ಜರ್ಮನಿ ಸಂಪೂರ್ಣ ನಾಶವಾಗಿ ರಷ್ಯಾ ಮುಂದೆ ಮಂಡಿ ಊರಿತ್ತು. ಸೋವಿಯತ್ ರಷ್ಯಾ ಹಿಟ್ಲರ್ ಸೇನೆ ಬಗ್ಗುಬಡಿದು ಸಂಭ್ರಮಿಸಿದ ದಿನವದು. ಹೀಗೆ ನಾಜಿ ಜರ್ಮನಿ ವಿರುದ್ಧ ದಿಗ್ವಿಜಯದ ನೆನಪಿಗೆ ವಿಜಯ ದಿವಸ ಆಚರಿಸುತ್ತದೆ ರಷ್ಯಾ. ಆದ್ರೆ ಈ ಬಾರಿ ವಿಜಯ ದಿವಸ ಆಚರಣೆಗೂ ಕಾರ್ಮೋಡ ಆವರಿಸಿತ್ತು. ರಷ್ಯಾ ಅಧ್ಯಕ್ಷರ ಸರ್ಕಾರಿ ಮನೆ ಮೇಲೆ ಡ್ರೋನ್ ಮೂಲಕ ನಡೆಸಲಾಗಿರುವ ಬಾಂಬ್ ದಾಳಿ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿತ್ತು. ಈಗ ಪರಿಸ್ಥಿತಿ ಉಕ್ರೇನ್‌ಗೆ ಉಲ್ಟಾ ಆಗಿದ್ದು, ರಷ್ಯಾ ಕೌಂಟರ್ ಅಟ್ಯಾಕ್ ಶುರು ಮಾಡಿದೆ.

ಉಕ್ರೇನ್ ಮೇಲೆ ಯದ್ವಾತದ್ವ ಅಟ್ಯಾಕ್!
ಸುಮ್ಮನಿದ್ದ ರಷ್ಯಾ ಸೇನೆಯನ್ನು ಕೆಣಕಿ ಉಕ್ರೇನ್ ತಪ್ಪು ಮಾಡಿದಂತೆ ಕಾಣುತ್ತಿದೆ. ಇದೀಗ ಅದೇ ಕಾರಣಕ್ಕೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಹಿಗ್ಗಾಮುಗ್ಗಾ ದಾಳಿ ಆರಂಭಿಸಿದೆ. 50ಕ್ಕೂ ಹೆಚ್ಚು ಡ್ರೋನ್ ಸೇರಿದಂತೆ, ಅಪಾರ ಸಂಖ್ಯೆ ಮಿಸೈಲ್‌ಗಳನ್ನ ಉಕ್ರೇನ್ ಕಡೆಗೆ ಉಡಾಯಿಸಿದೆ ರಷ್ಯಾ. ಈ ಮೂಲಕ ಮೇ 9ರ ವಿಜಯ ದಿವಸ ಆಚರಣೆಗೆ ಮತ್ತೆ ಸಿದ್ಧತೆಯಲ್ಲಿ ತೊಡಗಿದೆ. ಮತ್ತೊಂದ್ಕಡೆ ಉಕ್ರೇನ್ ಮಾತ್ರ ರಷ್ಯಾ ಸೇನೆ ನಡೆಸುತ್ತಿರುವ ದಾಳಿಯಿಂದ ಬೆಚ್ಚಿಬಿದ್ದಿದೆ.
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇನ್ನೊಂದು ಕಡೆ ಎರಡೂ ರಾಷ್ಟ್ರಗಳ ನಡುವೆ ವೈಷಮ್ಯ ಇನ್ನಷ್ಟು ದೊಡ್ಡದಾಗುತ್ತಿದೆ. ಇದನ್ನೆಲ್ಲಾ ನೋಡಿದರೆ ಮುಂದಿನ ದಿನಗಳಲ್ಲಿ ಈ ಯುದ್ಧ 3ನೇ ಮಹಾಯುದ್ಧವಾಗಿ ತಿರುವು ಪಡೆದರೂ ಅಚ್ಚರಿ ಪಡಬೇಕಿಲ್ಲ. ಹಾಗೇ ನ್ಯೂಕ್ಲಿಯರ್ ದಾಳಿಯ ಭಯವೂ ಯುರೋಪ್ ಖಂಡದ ದೇಶಗಳನ್ನ ಕಾಡುತ್ತಿದ್ದು, ಅಮೆರಿಕದ ನಾಯಕರು ಉಕ್ರೇನ್ ಬೆಂಬಲಿಸಲು ಸಿಕ್ಕಾಪಟ್ಟೆ ದೊಡ್ಡ ಮೊತ್ತದ ಪ್ಯಾಕೇಜ್ ಘೋಷಿಸುತ್ತಿರುವುದು ವಿಶೇಷ.












Click it and Unblock the Notifications