ಏಟಿಗೆ ಎದಿರೇಟು.. ಅಮೆರಿಕದ ಬ್ರಹ್ಮಾಸ್ತ್ರಕ್ಕೆ ರಷ್ಯಾದ ಹೊಸ ಅಸ್ತ್ರ!
ಮಾಸ್ಕೋ: ಉಕ್ರೇನ್ ಪರ ಅಮೆರಿಕ & ನ್ಯಾಟೋ ಪಡೆ ನಿಂತಿದ್ದು ಡಬಲ್ ಗೇಮ್ ಆಡುತ್ತಾ ಬಂದಿವೆ. ಇಷ್ಟು ದಿನ ಪರೋಕ್ಷವಾಗಿ ಉಕ್ರೇನ್ ಸೇನೆಗೆ ನೆರವಾಗುತ್ತಿದ್ದ ಅಮೆರಿಕ ಮತ್ತು ನ್ಯಾಟೋ ಪಟಾಲಂ ಈಗ ಬೇರೆ ಆಟ ಶುರು ಮಾಡಿ ನೇರವಾಗಿ ಸಹಾಯ ಮಾಡ್ತಿವೆ. ಹೀಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾ ಹೊಸ ತಂತ್ರ ಹೂಡಿದ್ದು, ಅಮೆರಿಕದ ಬ್ರಹ್ಮಾಸ್ತ್ರದ ಬುಡಕ್ಕೆ ಬಾಂಬ್ ಇಡಲು ಸಜ್ಜಾಗಿದೆ.
ರಷ್ಯಾ & ಉಕ್ರೇನ್ ವಾರ್ ಶುರುವಾಗಿ 450 ದಿನಗಳೇ ಉರುಳಿದೆ, ಆದರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಈ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರವನ್ನು ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ಇದಾದ ನಂತರ ರಷ್ಯಾಗೆ ಭಾರಿ ತೊಂದರೆ ಆಗುತ್ತಿದ್ದು, ಈಗ ಮೈಕೊಡವಿದೆ ರಷ್ಯಾ.

ರಷ್ಯಾ ರೂಪಿಸಿದ ರಣತಂತ್ರ ಏನು?
ಅಮೆರಿಕ ಶತ್ರು ರಷ್ಯಾ ಬಗ್ಗುಬಡಿಯಲು ಎಲ್ಲ ರೀತಿ ಅಸ್ತ್ರ ಪ್ರಯೋಗಿಸುತ್ತಾ ಬಂದಿದೆ. ಅದ್ರಲ್ಲಿ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುವ ವಿಧಾನವೂ ಒಂದು. ಹೀಗೆ ಉಕ್ರೇನ್‌ಗೆ ಅಮೆರಿಕ ದಾನ ನೀಡಿದ ಗಿಫ್ಟ್ ಪೈಕಿ 'ಯುಎಸ್-ಮೇಡ್ ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್' (US-made Patriot missile defense) ಕೂಡ ಇದೆ. ಈ ಅಸ್ತ್ರದ ಮೂಲಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಬಹುದು ಮತ್ತು ಶತ್ರುಗಳ ಕ್ಷಿಪಣಿಗಳನ್ನ ಹೊಡೆದು ಹಾಕುವುದು ಕೂಡ ಸುಲಭ. ಈ ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಬೆಂಕಿ ಹಚ್ಚಲು ಸಜ್ಜಾಗಿದೆ ರಷ್ಯಾ.
ಒಂದೇ ಏಟಿಗೆ ಅಮೆರಿಕದ ಅಸ್ತ್ರ ಉಡೀಸ್?
ರಷ್ಯಾ ಬಳಿ ಇರುವ ವಿನಾಶಕ ಅಸ್ತ್ರಗಳನ್ನ ಆ ದೇಶ ಇನ್ನೂ ಹೊರಗೆ ತೆಗೆದಿಲ್ಲ. ಅಕಸ್ಮಾತ್ ಅದನ್ನ ಹೊರಗೆ ತೆಗೆದರೆ ಜಗತ್ತು ತೀವ್ರ ಸಂಕಷ್ಟ ಎದುರಿಸುತ್ತದೆ. ಈಗ ಅನಿವಾರ್ಯವಾಗಿ ತನ್ನ ಶತ್ರುವಿನ ಕ್ಷಿಪಣಿ ನಿರೋಧಕ ವ್ಯವಸ್ಥೆ ಚಿಂದಿ ಮಾಡಲು ಹೈಪರ್ ಸಾನಿಕ್ ಮಿಸೈಲ್ ಅಂದರೆ ಶಬ್ಧಕ್ಕಿಂತಲೂ ವೇಗವಾಗಿ ಚಲಿಸುವ ಕ್ಷಿಪಣಿ ಬಳಕೆ ಮಾಡಿದ ಆರೋಪ ಕೇಳಿಬಂದಿದೆ. ಕಿಂಝಲ್ ಹೈಪರ್ ಸಾನಿಕ್ ಮಿಸೈಲ್ ಶಬ್ಧಕ್ಕಿಂತ ಒಟ್ಟು 5 ಪಟ್ಟು ವೇಗವಾಗಿ ಚಲಿಸುವ ಶಕ್ತಿ ಹೊಂದಿವೆ. ಇದೀಗ ರಷ್ಯಾ ಮೊದಲ ಪ್ರಯತ್ನದಲ್ಲಿ ಫೇಲ್ ಆಗಿದ್ರೂ, ಬೇರೆ ದಾರಿ ಹುಡುಕುತ್ತಿದೆ.

18 ಕ್ಷಿಪಣಿ ಹೊಡೆದಿದ್ದ ಉಕ್ರೇನ್
ರಷ್ಯಾ ವಿರುದ್ಧ ಯುದ್ಧ ಆರಂಭವಾದ ಬಳಿಕ ಉಕ್ರೇನ್ ನೆಲಕಚ್ಚಿದೆ. ಇಂತಹ ಹೊತ್ತಲ್ಲೇ ನ್ಯಾಟೋ & ಅಮೆರಿಕ ಸಿಕ್ಕಾಪಟ್ಟೆ ಸಹಾಯ ಮಾಡಿ, ಉಕ್ರೇನ್‌ಗೆ ಬೆನ್ನೆಲುಬಾಗಿವೆ. ಹೀಗಾಗಿ ಹೊಸ ಎನರ್ಜಿ ಜೊತೆಗೆ ರಣತಂತ್ರ ರೂಪಿಸಿ ರಷ್ಯಾ ವಿರುದ್ಧ ಭೀಕರ ದಾಳಿ ಆರಂಭಿಸಿರುವ ಉಕ್ರೇನ್, ರಷ್ಯಾ ಸೇನೆ ಹಾರಿಸಿದ್ದ 18 ಕ್ಷಿಪಣಿಗಳನ್ನ ತನ್ನ ಕ್ಷಿಪಣಿ ನಿರೋಧಕದ ಸಹಾಯದಿಂದ ಹೊಡೆದು ಉರುಳಿಸಿತ್ತು. ನಿನ್ನೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಾರಿಬಂದ 18 ಕ್ಷಿಪಣಿಗಳನ್ನ ಧೂಳ್ ಧೂಳ್ ಮಾಡಿತ್ತು ಉಕ್ರೇನ್ ಸೇನೆ.
ಒಟ್ನಲ್ಲಿ ಈಗಿನ ಸೋಲು ಸೇರಿದಂತೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ರಷ್ಯಾಗೆ ಹಿನ್ನಡೆ ಎದುರಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ರಷ್ಯಾಗೆ ಸೇರಿದ 4 ಯುದ್ಧ ವಿಮಾನ ಹೊಡೆದು ಉರುಳಿಸಿತ್ತು ಉಕ್ರೇನ್. ಇದಾದ ಬಳಿಕ ನಿನ್ನೆ 18 ರಷ್ಯಾದ ಮಿಸೈಲ್‌ಗಳನ್ನ ಉಕ್ರೇನ್ ಉಡೀಸ್ ಮಾಡಿತ್ತು. ಈ ಮೂಲಕ ಮೊದಲೇ ಹೊತ್ತಿ ಉರಿಯುತ್ತಿದ್ದ ಪರಿಸ್ಥಿತಿ ಇನ್ನಷ್ಟು ಕಗ್ಗಂಟಾಗಿತ್ತು. ಅದರ ನಡುವೆಯೇ ರಷ್ಯಾ ಅತ್ಯಂತ ಶಕ್ತಿಶಾಲಿ ಹೈಪರ್ ಸಾನಿಕ್ ಮಿಸೈಲ್ ಕೂಡ ಉಕ್ರೇನ್ ಏಟಿಗೆ ಬಲಿಯಾಗಿರುವುದು ಭಾರಿ ಆತಂಕ ಸೃಷ್ಟಿಸಿದೆ. ರಷ್ಯಾ ಮತ್ತೆ ಯಾವ ಹೊಸ ಅಸ್ತ್ರ ಹೊರಗೆ ತೆಗೆಯಲಿದೆಯೋ ಗೊತ್ತಿಲ್ಲ.












Click it and Unblock the Notifications