ಬಾಂಬ್, ಗನ್‌ಗೆ ಯುರೋಪ್ ಒಕ್ಕೂಟಕ್ಕೆ ಉಕ್ರೇನ್ ಅಧ್ಯಕ್ಷನ ಬೇಡಿಕೆ!
ಬಲ್‌ಬೋಕಾ: ರಷ್ಯಾ & ಉಕ್ರೇನ್ ನಡುವೆ ಭೀಕರ ಕಾಳಗ ನಡೆಯುವಾಗಲೇ ಯುದ್ಧದ ಲಾಭ ಪಡೆಯಲು ಹಲವು ದೇಶಗಳು ಮುಂದೆ ಬರುತ್ತಿವೆ. ಅದರಲ್ಲೂ ಇದೇ ಯುದ್ಧ ಯುರೋಪ್ ಭವಿಷ್ಯ ನಿರ್ಧರಿಸುವುದು ಪಕ್ಕಾ ಎಂದು ಯುರೋಪ್ ರಾಷ್ಟ್ರಗಳು ಉಕ್ರೇನ್ ಬೆನ್ನಿಗೆ ನಿಂತಿಗೆ. ಹೀಗಾಗಿ ಉಕ್ರೇನ್ ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಮಾಡ್ತಿದೆ.
ಮಾಲ್ಡೋವಾದಲ್ಲಿ ಯುರೋಪ್ ಒಕ್ಕೂಟದ ಶೃಂಗಸಭೆ ಆರಂಭವಾಗಿದೆ. ಇನ್ನು ಶೃಂಗಸಭೆ ಎಂಟ್ರಿಯಲ್ಲಿ ಮೊದಲು ಆಗಮಿಸಿದೆ ಉಕ್ರೇನ್ ಅಧ್ಯಕ್ಷ, ಎಲ್ಲರ ಗಮನ ಸೆಳೆದರು. ಇದೇ ವೇಳೆ ಯುರೋಪ್ ಒಕ್ಕೂಟದ ಜೊತೆ ನೇರವಾಗಿ ಸಹಾಯದ ಮಾತುಕತೆ ಮುಂದುವರಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಇನ್ನಷ್ಟು ಶಸ್ತ್ರಾಸ್ತ್ರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ರಷ್ಯಾ ವಿರುದ್ಧ ಯುರೋಪ್ ರಾಷ್ಟ್ರಗಳು ಒಗ್ಗಟ್ಟಾಗಿವೆ.

ಶೃಂಗಸಭೆಯೋ, ರಷ್ಯಾ ವಿರುದ್ಧ ರಣತಂತ್ರವೋ?
ಹೌದು, ಈ ಬಾರಿಯ ಯುರೋಪ್ ಒಕ್ಕೂಟದ ಶೃಂಗಸಭೆ ಥೇಟ್ ರಷ್ಯಾ ವಿರುದ್ಧದ ಸಭೆ ಎನ್ನುವಂತೆ ಬಿಂಬಿತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಷ್ಯಾ ವಿರುದ್ಧ ಉಕ್ರೇನ್ ಸೇನೆ ಮತ್ತು ನಾಯಕರಿಗೆ ಬಲ ನೀಡಲು ಯುರೋಪ್ ಒಕ್ಕೂಟದ ಸದಸ್ಯರು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಯುರೋಪ್ ಒಕ್ಕೂಟದ ಶೃಂಗಸಭೆ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಬಾರಿ ಬಹುದೊಡ್ಡ ಮೊತ್ತದ ಶಸ್ತ್ರಾಸ್ತ್ರ ಪೂರೈಕೆಯನ್ನ ಉಕ್ರೇನ್ ಬಯಸುತ್ತಿದೆ. ಅಲ್ಲದೆ ನಿನ್ನೆ ತಾನೆ ಅಮೆರಿಕ ಕೂಡ ಮತ್ತೊಂದು ಸುತ್ತಿನ ಸಹಾಯದ ಬಗ್ಗೆ ಮಾತನಾಡಿತ್ತು.
3 ಲಕ್ಷ ಕೋಟಿ ನೆರವು ನೀಡಿದೆ ಅಮೆರಿಕ
ಉಕ್ರೇನ್‌ಗೆ ಒಂದೇ ವರ್ಷದಲ್ಲಿ ಅಮೆರಿಕ 3 ಲಕ್ಷ ಕೋಟಿ ನೆರವನ್ನ ನೀಡಿದೆ. ಮೊನ್ನೆ ಮೊನ್ನೆ ಸಾವಿರಾರು ಕೋಟಿ ಪ್ಯಾಕೇಜ್ ನೀಡಿದ್ದ ಅಮೆರಿಕ ಮತ್ತೆ ₹2,482 ಕೋಟಿ ಮೊತ್ತದ ನೆರವಿನ ಹೊಸ ಪ್ಯಾಕೇಜ್ ಘೋಷಿಸಲು ಸಿದ್ಧವಾಗಿರುವ ಆರೋಪ ಕೇಳಿಬಂದಿದೆ. ಈ ಪ್ಯಾಕೇಜ್‌ನಲ್ಲಿ ಹೆಚ್ಚುವರಿ ಡ್ರೋನ್ ಪೂರೈಸಲಾಗುತ್ತಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿರುವುದು ಪುಟಿನ್ ಪಿತ್ತ ನೆತ್ತಿಗೇರಿಸಿದೆ. ಮತ್ತೊಂದ್ಕಡೆ ಯುರೋಪ್ ಒಕ್ಕೂಟ ಕೂಡ ಉಕ್ರೇನ್ ಸಹಾಯಕ್ಕೆ, ಶೃಂಗಸಭೆಯಲ್ಲಿ ಚರ್ಚೆ ಆರಂಭಿಸಿದೆ.

ಉಕ್ರೇನ್ ಪರ ಯುರೋಪ್ ಬ್ಯಾಟಿಂಗ್!
ರಷ್ಯಾ ವಿರುದ್ಧ ನ್ಯಾಟೋ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿವೆ. ಯುರೋಪ್ ಒಕ್ಕೂಟದ ಹಲವು ರಾಷ್ಟ್ರಗಳು ನ್ಯಾಟೋ ಲೆಕ್ಕದಲ್ಲೇ ಬರುತ್ತವೆ. ರಷ್ಯಾ & ಉಕ್ರೇನ್ ವಾರ್ ಶುರುವಾಗಿ ಒಂದು ವರ್ಷ ಉರುಳಿದೆ, ಆದ್ರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಎರಡೂ ದೇಶಗಳ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಈ ನಡುವೆ ಯುರೋಪ್ ಒಕ್ಕೂಟ ಅವಿರೋಧವಾಗಿ ಉಕ್ರೇನ್ ಬೆನ್ನಿಗೆ ನಿಲ್ಲುತ್ತಿದ್ದು, ಅಮೆರಿಕ ಈ ವಿಚಾರದಲ್ಲಿ ಖುಷಿಯಾಗಿದೆ.
ರಷ್ಯಾ ಜೊತೆ ನಿಂತಿರುವ ಚೀನಾ ಸೇನೆ
ಅತ್ತ ಉಕ್ರೇನ್ ಪರವಾಗಿ ನ್ಯಾಟೋ, ಯುರೋಪ್ ಒಕ್ಕೂಟ ಹಾಗೂ ಅಮೆರಿಕ ನಿಂತಿದ್ದರೆ, ಇತ್ತ ರಷ್ಯಾ ಪರವಾಗಿ ಚೀನಾ ನಿಂತಿದೆ. ಇದೇ ಕಾರಣಕ್ಕೆ ರಷ್ಯಾ ಕೂಡ ಗಟ್ಟಿ ಮನಸ್ಸನ್ನು ಮಾಡಿ ಯುದ್ಧ ಮುಂದುವರಿಸಿದೆ. ಈ ನಡುವೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟು, ಹತ್ತಾರು ಜನ ಗಾಯಗೊಂಡಿದ್ದಾರೆ. ಯುರೋಪ್ ಒಕ್ಕೂಟದ ಸಭೆ ಹೊತ್ತಲ್ಲೇ ಈ ರೀತಿ ರಷ್ಯಾ ಸೇನೆ ಭೀಕರ ದಾಳಿ ನಡೆಸಿದೆ.

ಒಟ್ನಲ್ಲಿ ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೋಂಡ್ರು ಅನ್ನೋ ಹಾಗೆ ಆಗಿದೆ ರಷ್ಯಾ ಮತ್ತು ಉಕ್ರೇನ್ ಪರಿಸ್ಥಿತಿ. ಅನಗತ್ಯವಾಗಿ ಶುರುವಾದ ಈ ಯುದ್ಧ ಇದೀಗ ಜಗತ್ತಿನ ಹಲವು ರಾಷ್ಟ್ರಗಳಿಗೆ ಅಗತ್ಯ ಎನಿಸುತ್ತಿದೆ. ಕೆಲವರು ಇದೇ ಯುದ್ಧ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೂಡ ಇದೆ. ಆದರೆ ರಷ್ಯಾ ಮಾತ್ರ ಇದ್ಯಾವ ಮಾತಿಗೂ ತಲೆ ಕೆಡಿಸಿಕೊಳ್ಳದೆ ದಾಳಿ ಮುಂದುವರಿಸಿದೆ. ಹಾಗೇ ರಷ್ಯಾ & ಉಕ್ರೇನ್ ಯುದ್ಧ ಹತ್ತಾರು ವರ್ಷ ಮುಂದುವರಿಯುವ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications