3ನೇ ಮಹಾಯುದ್ಧ: ರಷ್ಯಾ ದಾಳಿಗೆ 11 ಉಕ್ರೇನ್ ನಾಗರಿಕರು ಬಲಿ
ಕೀವ್: ರಷ್ಯಾ ಸೇನೆ ತನ್ನ ಶತ್ರುವಿನ ವಿರುದ್ಧ ಭೀಕರ ಸಂಘರ್ಷ ನಡೆಸುತ್ತಿದೆ. ಉಕ್ರೇನ್‌ನ ನೆಲದ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ರಷ್ಯಾ 11 ಜನರನ್ನು ಕೊಂದು ಹಾಕಿದೆ ಅನ್ನೋ ಆರೋಪ ಕೇಳಿಬಂದಿದೆ. ಉಕ್ರೇನ್ ಡ್ಯಾಂ ಸ್ಫೋಟವಾಗಿ ಜನ ಪರಿತಪಿಸುವಾಗಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹುಟ್ಟಿದ ಊರಿಗೇ ರಷ್ಯಾ ಕ್ಷಿಪಣಿಗಳು ನುಗ್ಗಿ ದಾಳಿ ನಡೆಸಿವೆ.
ಇಷ್ಟುದಿನ ಮಾಮೂಲಿ ದಾಳಿ ನಡೆಸುತ್ತಿದ್ದ ರಷ್ಯಾ ಇದೀಗ ತನ್ನ ಉಗ್ರ ರೂಪ ತೋರಿಸಿದೆ. ಅದರಲ್ಲೂ ನ್ಯಾಟೋ ಹಾಗೂ ಅಮೆರಿಕ ಪಡೆಗಳು ಉಕ್ರೇನ್ ಬೆಂಬಲಕ್ಕೆ ನಿಂತ ನಂತರ ಈ ದಾಳಿ ಇನ್ನಷ್ಟು ಭೀಕರವಾಗಿದೆ. ತನ್ನ ಬಳಿ ಇರುವ ವಿನಾಶಕಾರಿ ಕ್ಷಿಪಣಿ, ಡ್ರೋನ್ ಬಳಸಿ ಉಕ್ರೇನ್ ವಿರುದ್ಧ ದಾಳಿ ಆರಂಭಿಸಿದೆ. ಈ ಬೆಳವಣಿಗೆಗಳ ನಡುವೆ ರಷ್ಯಾ ದಾಳಿಗೆ 11 ಜನ ಬಲಿಯಾಗಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಅಪಾರ್ಟ್‌ಮೆಂಟ್ ಕಟ್ಟಡ್ಡಕ್ಕೆ ತಗುಲಿದ ರಷ್ಯಾದ ಕ್ಷಿಪಣಿ ವಿನಾಶ ಮಾಡಿದೆ ಎಂದು ಆರೋಪಿಸಲಾಗಿದೆ (Russia Ukraine War).

500 ದಿನದತ್ತ ರಷ್ಯಾ & ಉಕ್ರೇನ್ ಯುದ್ಧ
ಇನ್ನೇನು 1 ತಿಂಗಳು ಕಳೆದರೆ ರಷ್ಯಾ & ಉಕ್ರೇನ್ ಯುದ್ಧಕ್ಕೆ 500 ದಿನ ಪೂರ್ಣವಾಗಲಿದೆ. ಆದರೂ ಯುದ್ಧ ನಿಲ್ಲುವ ಮುನ್ಸೂಚನೆ ಇಲ್ಲ, ಎರಡೂ ದೇಶಗಳ ಮಧ್ಯೆ ಕಿತ್ತಾಟ ಕೂಡ ಇನ್ನಷ್ಟು ಜೋರಾಗುತ್ತಿದೆ. ಅದರಲ್ಲೂ ಉಕ್ರೇನ್ ಡ್ಯಾಂ ಸ್ಫೋಟವಾಗಿ ಹತ್ತಾರು ಜನರು ಜೀವ ಬಿಟ್ಟಿದ್ದಾರೆ. ಲಕ್ಷಾಂತರ ಜನ ಬೀದಿಗೆ ಬಿದ್ದು ಊರಿಗೆ ಊರೇ ಜಲಾಶಯದ ನೀರಲ್ಲಿ ಮುಳುಗಿ ಹೋಗಿವೆ. ಈ ಸ್ಥಿತಿಯಲ್ಲಿ ಸೇಡಿಗೆ ಸೇಡು ತೀರಿಸಿಕೊಳ್ಳಲು ಉಕ್ರೇನ್ ಸೇನೆ ಸಿದ್ಧವಾಗಿದೆ ಅನ್ನೋ ಮಾಹಿತಿ ಕೇಳಿಬಂದಿತ್ತು, ಆದರೆ ಉಕ್ರೇನ್ ದಾಳಿ ಮಾಡುವ ಮೊದಲೇ ರಷ್ಯಾ ಕ್ಷಿಪಣಿಗಳ ಮಳೆ ಸುರಿಸಿ ಮತ್ತೆ 11 ಜನರನ್ನ ಕೊಂದಿರುವ ಆರೋಪ ಕೇಳಿಬಂದಿದೆ.
ಒಪ್ಪಂದ ರದ್ದು ಮಾಡಿದ ಪುಟಿನ್!
ಅತ್ತ ಯುದ್ಧ ಕೂಡ ಭೀಕರ ಸ್ವರೂಪ ಪಡೆಯುತ್ತಿದೆ, ಹಾಗೇ ಇನ್ನೊಂದ್ಕಡೆ ರಷ್ಯಾದಿಂದ ಸೇಡಿನ ಕ್ರಮ ಮುಂದುವರಿದಿದೆ. ತನ್ನ ದೇಶದ ಗಡಿಯಲ್ಲಿ ನ್ಯಾಟೋ ಹಾಗೂ ಅಮೆರಿಕದ ಸಹಾಯದಿಂದ ಉಕ್ರೇನ್ ಯುದ್ಧ ಮಾಡುತ್ತಿದೆ, ಹೀಗಾಗಿ ಉಕ್ರೇನ್ ಜೊತೆ ಒಪ್ಪಂದ ಬೇಡ ಎಂಬ ನಿರ್ಧಾರಕ್ಕೆ ರಷ್ಯಾ ಬಂದಿದೆ. ಹೀಗಾಗಿ ಹಲವು ದ್ವಿಪಕ್ಷೀಯ ಒಪ್ಪಂದಗಳನ್ನ ರಷ್ಯಾ ಕೈಬಿಟ್ಟಿದೆ. ಇದರ ಜೊತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರಿಗೆ ಮತ್ತು ಉಕ್ರೇನ್‌ಗೆ ಶಸ್ತ್ರ ಪೂರೈಸುತ್ತಿರುವ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದು ಈಗಿನ ಪರಿಸ್ಥಿತಿಯನ್ನ ಮತ್ತಷ್ಟು ಸೂಕ್ಷ್ಮಗೊಳಿಸಿದೆ.

ಉಕ್ರೇನ್ ಡ್ಯಾಂ ಸ್ಫೋಟಿಸಿದ್ದು ಯಾರು?
ಕೋಳಿ ಜಗಳದಂತೆ ಶುರುವಾಗಿದ್ದ ರಷ್ಯಾ, ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಅದರಲ್ಲೂ ಕಳೆದ ಕೆಲ ವಾರಗಳಿಂದ ರಷ್ಯಾ ಮತ್ತು ಉಕ್ರೇನ್ ವಿನಾಶಕಾರಿ ಅಸ್ತ್ರಗಳನ್ನ ಬಳಸಿ ಒಬ್ಬರ ಮೇಲೆ ಒಬ್ಬರು ದಾಳಿ ಮಾಡುತ್ತಿದ್ದಾರೆ. ಈ ಹೊತ್ತಲ್ಲಿ ಜೂನ್ 6ರ ಮಧ್ಯ ರಾತ್ರಿ ವೇಳೆ ಭೀಕರ ಬಾಂಬ್ & ಸ್ಫೋಟಕ ಬಳಸಿ ಖೆರ್ಸನ್ ಪ್ರಾಂತ್ಯದ ಕಖೌಕಾ ಡ್ಯಾಂ ಬ್ಲಾಸ್ಟ್ ಮಾಡಿದ್ದರು. ಈ ಘಟನೆ ಬಳಿಕ ರಷ್ಯಾ ಮತ್ತು ಉಕ್ರೇನ್ ನಡುವೆ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋದ ಸಹಾಯ ಪಡೆದು ರಷ್ಯಾ ಮೇಲೆ ಉಕ್ರೇನ್ ಡೆಡ್ಲಿ ಅಟ್ಯಾಕ್ ನಡೆಸೋದು ಪಕ್ಕಾ ಅನ್ನೋ ಮಾಹಿತಿ ಸಂಚಲನ ಸೃಷ್ಟಿಸಿತ್ತು. ಆದರೆ ಉಕ್ರೇನ್‌ಗೂ ಮೊದಲೇ ರಷ್ಯಾ ದಾಳಿ ಮಾಡಿಬಿಟ್ಟಿದೆ.
ಹೀಗೆ ಎರಡೂ ರಾಷ್ಟ್ರಗಳ ನಡುವೆ ಹಿಂಸಾಚಾರ ನಡೆಯುತ್ತಿದ್ದು, ಸಾಮಾನ್ಯ ಜನರ ಜೀವ ಅಪಾಯಕ್ಕೆ ಸಿಲುಕಿದೆ. ಇಷ್ಟಾದರೂ ಜಗತ್ತು ಬುದ್ಧಿ ಕಲಿಯುತ್ತಿಲ್ಲ. ಅತ್ತ ಪಾಶ್ಚಿಮಾತ್ಯರು ತಮ್ಮ ದಾಳ ಉರುಳಿಸಲು ಈ ಯುದ್ಧದಲ್ಲಿ ಉಕ್ರೇನ್ ಪರ ನಿಂತಿದ್ದಾರೆ. ಇದು ರಷ್ಯಾಗೂ ಕೋಪ ತರಿಸಿದ್ದು, ಶತ್ರುಗಳ ವಿರುದ್ಧ ಇನ್ನಷ್ಟು ಆಕ್ರೋಶ ಹೊರಹಾಕುತ್ತಿದೆ. ಸಂಧಾನಕ್ಕೆ ಕೂಡ ಯಾವ ದೇಶವೂ ಪ್ರಯತ್ನಪಟ್ಟಿಲ್ಲ ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಭೀಕರ ಸ್ವರೂಪ ಪಡೆಯುವುದು ಗ್ಯಾರಂಟಿ.












Click it and Unblock the Notifications