ಸಿಕ್ಕೇ ಬಿಡ್ತು ಸಂಜೀವಿನಿ: ಕೊರೊನಾವೈರಸ್ ಲಸಿಕೆಗೆ ಇಂಗ್ಲೆಂಡ್ ಅನುಮೋದನೆ
ನವದೆಹಲಿ, ಡಿಸೆಂಬರ್,02: ಜಗತ್ತಿನ ಮೊದಲ ಪಾಶ್ಚಾಚ್ಯ ರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿಗೆ ಸಂಜೀವಿನಿ ಸಿಕ್ಕಿದೆ. ಎರಡು ಕಂಪನಿಗಳ ಕೊವಿಡ್-19 ಲಸಿಕೆಯ ಮಾದರಿಗೆ ಇಂಗ್ಲೆಂಡ್ ಸರ್ಕಾರವು ಬುಧವಾರ ಅನುಮೋದನೆ ನೀಡಿದೆ.
ಜರ್ಮನ್ ಫಾರ್ಮಾಸೆಂಟಿಕಲ್ ಕಂಪನಿ ಆಗಿರುವ ಬಯೋನೆಟೆಕ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಹಭಾಗಿತ್ವದ ಪಿ-ಫಿಜರ್ ಕಂಪನಿ ಸಂಶೋಧಿಸಿರುವ ಕೊವಿಡ್-19 ಲಸಿಕೆಗಳನ್ನು ಇಂಗ್ಲೆಂಡ್ ಸರ್ಕಾರವು ಅನುಮೋದಿಸಿದೆ. ಯುರೋಪಿಯನ್ ಮೆಡಿಸನ್ಸ್ ಏಜೆನ್ಸಿಗೆ ಕೊರೊನಾವೈರಸ್ ಲಸಿಕೆ ಸಂಶೋಧನಾ ಕಂಪನಿಗಳು ಅನುಮೋದನೆಗಾಗಿ ಎರಡೂ ಕಂಪನಿಗಳು ಮನವಿ ಸಲ್ಲಿಸಿದ್ದವು.
ಮಾಡರ್ನಾ ಕಂಪನಿಯ ಕೊರೊನಾವೈರಸ್ ಲಸಿಕೆಯು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳುವುದಕ್ಕೆ ಸೂಕ್ತವಾಗಿದೆ ಎಂದು ಯುಎಸ್ ಮತ್ತು ಯುರೋಪಿಯನ್ ಔಷಧೀಯ ಮಂಡಳಿಗೆ ತಿಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಡಿಸೆಂಬರ್ 2ನೇ ವಾರದಲ್ಲಿ ಕೊರೊನಾವೈರಸ್ ಲಸಿಕೆ ಲಭ್ಯ
ಬಯೋನೆಟೆಕ್ ಮತ್ತು ಪಿ-ಫಿಜರ್ ಲಸಿಕೆಗೆ ಇಂಗ್ಲೆಂಡ್ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ವಾರದಲ್ಲೇ ಇಂಗ್ಲೆಂಡ್ ನಲ್ಲಿ ಕೊರೊನಾವೈರಸ್ ಲಸಿಕೆ ಬಳಕೆಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೊವಿಡ್-19 ಲಸಿಕೆಯು ಉತ್ತಮ ಗುಣಮಟ್ಟ, ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ ಎಂದು ಇಂಗ್ಲೆಂಡ್ ಮಡಿಸನ್ಸ್ ಆಂಡ್ ಹೆಲ್ತ್ ಕೇರ್ ಪ್ರಾಡೆಕ್ಟ್ಸ್ ರೆಗ್ಯುಲೆಟರ್ ಏಜೆನ್ಸಿ ತಿಳಿಸಿದೆ.

ಕಳೆದ ತಿಂಗಳಿನಲ್ಲೇ ಲಸಿಕೆ ಅನುಮೋದನೆಗೆ ಮನವಿ
ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸಿದ್ಧಪಡಿಸಿದ BNT162b2 ಮಾದರಿಯ ಲಸಿಕೆಗೆ ಅನುಮೋದನೆ ಸಿಕ್ಕಿದ್ದಲ್ಲಿ 2020ರಲ್ಲೇ ಈ ಲಸಿಕೆಯನ್ನು ಬಳಕೆಗೆ ತರಲಾಗುತ್ತದೆ ಎಂದು ಬಯೋನೆಟೆಕ್ ಕಂಪನಿ ಹೇಳಿತ್ತು. ಈ ಸಂಬಂಧ ನವೆಂಬರ್.20ರಂದೇ ಎರಡೂ ಕಂಪನಿಗಳು ಕೊರೊನಾವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಯುನೈಟೆಡ್ ಸ್ಟೇಟ್ಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದವು.

ಕೊವಿಡ್-19 ಲಸಿಕೆ ಶೇ.95ರಷ್ಟು ಪರಿಣಾಮಕಾರಿ
ಬಯೋನೆಟೆಕ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಹಭಾಗಿತ್ವದ ಪಿ-ಫಿಜರ್ ಕಂಪನಿ ಸಂಶೋಧಿಸಿರುವ ಕೊವಿಡ್-19 ಲಸಿಕೆಗಳಿಗೆ ಸಂಬಂಧಿಸಿದಂತೆ ಎರಡು ಕಂಪನಿಗಳು ನವೆಂಬರ್.18ರಂದು ಅಂತಿಮ ಹಂತದ ವೈದ್ಯಕೀಯ ಪ್ರಯೋಗ ನಡೆಸಿದ್ದವು. ಈ ಹಂತದಲ್ಲಿ ತಮ್ಮ ಕೊರೊನಾ ಲಸಿಕೆ ಮಾದರಿಯು ಶೇ.95ರಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ ಎಂದು ಕಂಪನಿಗಳು ಹೇಳಿಕೊಂಡಿದ್ದವು.

60,000 ಜನರು ಕೊರೊನಾವೈರಸ್ ಸೋಂಕಿನಿಂದ ಸಾವು
ಕೊರೊನಾವೈರಸ್ ಸೋಂಕಿನ ಹರಡುವಿಕೆ ಆರಂಭದಲ್ಲಿ ಮಹಾಮಾರಿಗೆ ಸಿಕ್ಕು ನಲುಗಿದ ರಾಷ್ಟ್ರಗಳಲ್ಲಿ ಇಂಗ್ಲೆಂಡ್ ಕೂಡಾ ಒಂದಾಗಿತ್ತು. ಇಂಗ್ಲೆಂಡ್ ನಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 16.43 ಲಕ್ಷದ ಗಡಿ ದಾಟಿದ್ದು, ಕೊವಿಡ್-19 ಸೋಂಕಿಗೆ ಸುಮಾರು 60 ಸಾವಿರ ಜನರು ಪ್ರಾಣ ಬಿಟ್ಟಿದ್ದರು. ಜಗತ್ತಿನಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣಗಳು ದಾಖಲಾದ ರಾಷ್ಟ್ರಗಳ ಪಟ್ಟಿಯಲ್ಲಿ ಇಂಗ್ಲೆಂಡ್ 7ನೇ ಸ್ಥಾನದಲ್ಲಿದೆ. ವಿಶ್ವದಲ್ಲಿ 6,41,94,674 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಈವರೆಗೂ 14,86,829 ಜನರು ಪ್ರಾಣ ಬಿಟ್ಟಿದ್ದಾರೆ. ಜಗತ್ತಿನಲ್ಲಿ ಈವರೆಗೂ 4,44,41,249 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ.












Click it and Unblock the Notifications