ಇಸ್ರೇಲ್ ವಿರುದ್ಧ ರೊಚ್ಚಿಗೆದ್ದ ಟರ್ಕಿ ಮಾಡಿದ್ದೇನು?
ಇಸ್ರೇಲ್ ಸೇನೆ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಇಡೀ ಜಗತ್ತು ಚಿಂತೆಯಲ್ಲಿ ಮುಳುಗಿದೆ. ಇವರು ಹಿಂಗೆ ಬಡಿದಾಡುವ ಕಾರಣಕ್ಕೆ ಜಾಗತಿಕವಾಗಿ ಆತಂಕ ಶುರುವಾಗಿದೆ. ಹೀಗಿದ್ದಾಗ ಯುದ್ಧ ನಿಲ್ಲಿಸಬೇಕು ಅಂತಾ ಇಸ್ರೇಲ್ ಮೇಲೆ ಈಗ ಒತ್ತಡ ಹೇರಲಾಗುತ್ತಿದ್ದು, ಇದೇ ಸಮಯದಲ್ಲಿ ಟರ್ಕಿ ಮಾಡಿದ್ದು ಏನು ಗೊತ್ತಾ?
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಮತ್ತಷ್ಟು ಭೀಕರ ಸ್ವರೂಪ ಪಡೆಯುತ್ತಿದೆ. ಅದ್ರಲ್ಲೂ ಇಸ್ರೇಲ್ ವಾಯು ಸೇನೆ ದಾಳಿಗೆ ಗಾಜಾ ಪಟ್ಟಿ ನಗರ, ನರಕವಾಗಿ ಬದಲಾಗಿದೆ. ಮತ್ತೊಂದು ಕಡೆ ಇಸ್ರೇಲ್ ಸೇನೆ ತನ್ನ ದಾಳಿಯ ಮತ್ತಷ್ಟು ಭೀಕರವಾಗಿಸಿದೆ. ಹಾಗೇ ಹಮಾಸ್ ನಾಯಕರನ್ನು ಹುಡುಕುತ್ತಿದೆ. ಹೀಗಿದ್ದಾಗ ಅಮಾಯಕರ ಸಾವು ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದು ಜಾಗತಿಕವಾಗಿ ತಲೆನೋವು ತಂದಿರುವ ಸಮಯದಲ್ಲೇ ಇಸ್ರೇಲ್ ವಿರುದ್ಧ ಒಂದೊಂದೇ ದೇಶಗಳು ತಿರುಗಿ ಬೀಳುತ್ತಿವೆ.

ಸೇಡಿಗೆ ಸೇಡು ಅಂತಿದೆ ಟರ್ಕಿ!
ಅಂದಹಾಗೆ ಪ್ಯಾಲೆಸ್ತೀನ್ ನಗರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದ ಕೃತ್ಯ ಖಂಡಿಸಿ, ಇಸ್ರೇಲ್ ಜೊತೆಗಿನ ಆಮದು & ರಫ್ತನ್ನ ಸ್ಥಗಿತಗೊಳಿಸಲು ನಿರ್ಧರಿಸಿದ್ದಾಗಿ ಟರ್ಕಿ ತಿಳಿಸಿದೆ. ಈ ಕುರಿತು ಇದೀಗ ಟರ್ಕಿ ವ್ಯಾಪಾರ ಸಚಿವಾಲಯ ಮಾಹಿತಿ ನೀಡಿದ್ದು, ಮಧ್ಯಪ್ರಾಚ್ಯ ಪರಿಸ್ಥಿತಿ ಮತ್ತೊಮ್ಮೆ ಬೂದಿ ಮುಚ್ಚಿದ ಕೆಂಡವಾಗಿದೆ. ಎಲ್ಲಾ ರೀತಿಯಲ್ಲಿ ಇಸ್ರೇಲ್ ಜೊತೆಗಿನ ವ್ಯಾಪಾರ ಸಂಬಂಧ ಕಡಿದುಕೊಳ್ಳಲು ಟರ್ಕಿ ಮುಂದಾಗಿದೆ. ಇನ್ನು ಎಲ್ಲಾ ಉತ್ಪನ್ನಗಳಿಗೂ ಅನ್ವಯ ಆಗುವಂತೆ ಈ ನಿರ್ಧಾರ ಕೈಗೊಂಡಿದೆ ಟರ್ಕಿ. ಇದು ಇಸ್ರೇಲ್ ಸರ್ಕಾರವನ್ನು ರೊಚ್ಚಿಗೆಬ್ಬಿಸಿದೆ.
ಇಸ್ರೇಲ್‌ಗೆ ಬುದ್ಧಿ ಕಲಿಸಲು...
ಗಾಜಾ ಪಟ್ಟಿ ಜನರು ನರಳುವ ಸಮಯದಲ್ಲಿ ಇಸ್ರೇಲ್ ಸೇನೆ ಮಾನವೀಯ ನೆರವನ್ನು ನೀಡಲು ಅವಕಾಶ ಕೊಡುತ್ತಿಲ್ಲ. ಇದರಿಂದ ಲಕ್ಷಾಂತರ ಜನರು ಪರದಾಡುತ್ತಿದ್ದಾರೆ, ಹೀಗಾಗಿ ಇಸ್ರೇಲ್‌ಗೆ ಬುದ್ಧಿ ಕಲಿಸಲು ಈ ಕ್ರಮ ಕೈಗೊಂಡಿರುವುದಾಗಿ ಟರ್ಕಿ ಹೇಳಿದೆ. ಟರ್ಕಿ ಇದೀಗ ನಿರ್ಬಂಧ ಹೇರಿದ ಪರಿಣಾಮ ಹಲವು ವಸ್ತುಗಳ ರಫ್ತು & ಆಮದನ್ನೂ ನಿಲ್ಲಿಸಲಾಗುತ್ತದೆ. ಇನ್ನು ಏಪ್ರಿಲ್ ತಿಂಗಳಲ್ಲಿ ಅಲ್ಯಮಿನಿಯಂ, ಸ್ಟೀಲ್ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ ವಸ್ತಗಳು ಸೇರಿ ಒಟ್ಟು 54 ಬಗೆಯ ಉತ್ಪನ್ನ ರಫ್ತನ್ನ ಟರ್ಕಿ ನಿಷೇಧ ಮಾಡಿತ್ತು. ಇದೀಗ ಮತ್ತೊಂದು ಕ್ರಮ ಕೈಗೊಂಡಿರುವುದು ಭಯ ಹೆಚ್ಚು ಮಾಡಿದೆ.

ಒಟ್ನಲ್ಲಿ ಇಸ್ರೇಲ್ & ಹಮಾಸ್ ನಡುವಿನ ಯುದ್ಧ ಘೋರ ರೂಪ ಪಡೆಯುತ್ತಿದ್ದು, ಈ ಯುದ್ಧ ಮುಂದಿನ ದಿನಗಳಲ್ಲಿ ಮತ್ತೊಂದು ರೀತಿಯ ಎಡವಟ್ಟು ಮಾಡುವ ಆತಂಕವು ಆವರಿಸಿದೆ. ಹಾಗೇ ಗಾಜಾ ಪಟ್ಟಿ ಪ್ರದೇಶದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ನರಳಾಡುತ್ತಿದ್ದು, ಇವರಿಗೆಲ್ಲಾ ಅಗತ್ಯ ಸಾಮಾಗ್ರಿ ಬೇಕಾಗಿದೆ.












Click it and Unblock the Notifications