Greenland: ಟ್ರಂಪ್ ದರ್ಬಾರು, ಗ್ರೀನ್‌ಲ್ಯಾಂಡ್ ದ್ವೀಪದಾಚೆಗೂ ಅಮೆರಿಕಾ ಗಡಿ ವಿಸ್ತರಿಸುವ ಹೊಸ ಕನಸು!
ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಗ್ರೀನ್ ಲ್ಯಾಂಡನ್ನು ಅಮೆರಿಕ ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ. ಆದ್ರೆ ಅವರ ಯೋಜನೆಯನ್ನ ಬಹಳಷ್ಟು ಜನ ಟೀಕಿಸಲು ಆರಂಭಿಸಿದ್ದಾರೆ. ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ನೆಲದ ಮೇಲೆ ಮಾತ್ರವಲ್ಲದೆ, ಅಲ್ಲಿನ ರಾಜಕೀಯ ಸ್ವಾತಂತ್ರ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದಾಗ ಗ್ರೀನ್ ಲ್ಯಾಂಡನ್ನು ಖರೀದಿಸುವ ವಿಚಾರವನ್ನು ಪ್ರಸ್ತಾಪಿಸಿದಾಗ, ಬಹಳಷ್ಟು ಜನರು ಅವರ ಆಲೋಚನೆಯನ್ನು ಹಾಸ್ಯಾಸ್ಪದ ಎಂದು ಆಡಿಕೊಂಡಿದ್ದರು. ಆಗಲೂ, ಮತ್ತು ಈಗಲೂ, ಗ್ರೀನ್ ಲ್ಯಾಂಡಿನ ಖರೀದಿಯ ವಿಚಾರವನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಗಮನಿಸಿದಾಗ ಒಂದಷ್ಟು ವಿಚಾರಗಳು ಹೊಳೆಯಬಹುದು.

2019ರಲ್ಲಿ ಡೊನಾಲ್ಡ್ ಟ್ರಂಪ್ ಗ್ರೀನ್ ಲ್ಯಾಂಡನ್ನು ಖರೀದಿಸುವ ಯೋಜನೆಯನ್ನು ಮುಂದಿಟ್ಟಾಗ, ಗ್ರೀನ್ ಲ್ಯಾಂಡಿನ ಆಡಳಿತ ನಿರ್ವಹಿಸುವ ಡೆನ್ಮಾರ್ಕ್ ಈ ಆಲೋಚನೆಯೇ ಅಸಂಬದ್ಧ ಎಂದು ಕರೆದು, ಟ್ರಂಪ್ ಪ್ರಸ್ತಾಪವನ್ನು ತಳ್ಳಿಹಾಕಿತು. ಅಮೆರಿಕಾದಲ್ಲೂ ಟೀಕಾಕಾರರು ಟ್ರಂಪ್ ಯೋಜನೆಯನ್ನು ಸ್ವಾರ್ಥ ಮತ್ತು ಶ್ರೀಮಂತಿಕೆಯ ಅಸಹಜ ಪ್ರದರ್ಶನವೆಂದು ಕರೆದು, ಇಂತಹ ಆಲೋಚನೆ ಅಮೆರಿಕಾದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದಿದ್ದರು.
ಆದರೆ, ಈ ಯೋಜನೆ ಅಸಹಜವಾಗಲಿ, ಕೇವಲ ಟ್ರಂಪ್ ಮಾತ್ರವೇ ಆಲೋಚಿಸಿದ್ದಾಗಲಿ ಆಗಿರಲಿಲ್ಲ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳ ನಾಯಕರು ಅಮೆರಿಕದ ಇತಿಹಾಸದಲ್ಲಿ ಇಂತಹ ಕ್ರಮಗಳನ್ನು ಕೈಗೊಂಡಿದ್ದರು.
ಅಮೆರಿಕ ಸಂಯುಕ್ತ ಸಂಸ್ಥಾನ: ಖರೀದಿಸಿದ ಪ್ರದೇಶಗಳಿಂದ ಬೆಳೆದ ದೇಶ
ಅಮೆರಿಕದ ಮೂರನೇ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್ಸನ್ ಅವರು, 1803ರಲ್ಲಿ, ತನ್ನ ಅಧ್ಯಕ್ಷೀಯ ಅವಧಿಯಲ್ಲಿ, ಮಿಸಿಸಿಪ್ಪಿ ನದಿಯಿಂದ ರಾಕಿ ಪರ್ವತಗಳ ತನಕ ಹಬ್ಬಿದ್ದ ಉತ್ತರ ಅಮೆರಿಕದ ವಿಶಾಲವಾದ ಲೂಸಿಯಾನಾ ಪ್ರದೇಶವನ್ನು ಫ್ರಾನ್ಸ್‌ನಿಂದ ಖರೀದಿಸಿದ್ದರು. ಆ ಬಳಿಕ, ಅವರು ಕ್ಯೂಬಾವನ್ನೂ ಖರೀದಿಸುವ ಪ್ರಸ್ತಾವನೆಯನ್ನೂ ಪರಿಗಣಿಸಿದ್ದರು.
1819ರಲ್ಲಿ, ಜಾನ್ ಕ್ವಿನ್ಸಿ ಆ್ಯಡಮ್ಸ್ ಅವರು ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಸಂದರ್ಭದಲ್ಲಿ, ಸ್ಪೇನ್ ಅಮೆರಿಕಾಗೆ ನೀಡಬೇಕಿದ್ದ 5 ಮಿಲಿಯನ್ ಡಾಲರ್ ಮೊತ್ತಕ್ಕೆ ವಿನಾಯಿತಿ ನೀಡುವ ಕುರಿತು ಮಾತುಕತೆ ನಡೆಸಿದ್ದರು. ಆ ಮೊತ್ತದ ಬದಲಿಗೆ, ಇಂದಿನ ಫ್ಲೋರಿಡಾ ರಾಜ್ಯವೂ ಸೇರಿದಂತೆ, ಫ್ಲೋರಿಡಾ ಪ್ರದೇಶದ ಮೇಲಿನ ಹಕ್ಕನ್ನು ಸ್ಪೇನ್ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ನೀಡಿತು. ಬಳಿಕ, 1867ರಲ್ಲಿ, ಸೆಕ್ರೆಟರಿ ಆಫ್ ಸ್ಟೇಟ್ ವಿಲಿಯಂ ಸಿವಾರ್ಡ್ ಅವರು 5,86,000 ಚದರ ಮೈಲಿಗಳಷ್ಟು ವಿಸ್ತಾರ ಹೊಂದಿರುವ, ವಿಶಾಲವಾದ ಅಲಾಸ್ಕಾ ಪ್ರದೇಶವನ್ನು ಕೇವಲ 7.2 ಮಿಲಿಯನ್ ಡಾಲರ್ ನೀಡಿ ರಷ್ಯಾದಿಂದ ಖರೀದಿಸುವ ವ್ಯವಸ್ಥೆ ನಡೆಸಿದರು.
ಅಮೆರಿಕಾ ಪಾರಂಪರಿಕವಾಗಿ ನಡೆಸಿಕೊಂಡು ಬಂದ ಕ್ರಮವನ್ನೇ ಇಂದು ಡೊನಾಲ್ಡ್ ಟ್ರಂಪ್ ಅವರೂ ಮುಂದುವರಿಸುವ ಆಲೋಚನೆ ನಡೆಸಿದ್ದಾರೆ. ವಾಸ್ತವವಾಗಿ ಹೇಳುವುದಾದರೆ, ಇಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಒಟ್ಟಾರೆ ಭೂ ಪ್ರದೇಶದಲ್ಲಿ 40%ಕ್ಕೂ ಹೆಚ್ಚಿನ ಪ್ರದೇಶವನ್ನು ಬೇರೆ ದೇಶಗಳಿಂದ ಖರೀದಿಸುವ ಮೂಲಕವೇ ಇಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಭಾಗವಾಗಿಸಲಾಗಿತ್ತು.
ಈ ವಿಧಾನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯೂ ಲಭಿಸಿದೆ. ಹಿಂದೆ ಸ್ಪೇನ್, ಫ್ರಾನ್ಸ್, ಮೆಕ್ಸಿಕೋ, ಮತ್ತು ರಷ್ಯಾಗಳು ತಮ್ಮ ಭೂ ಪ್ರದೇಶಗಳನ್ನು ಅಮೆರಿಕಾಗೆ ಮಾರಾಟ ಮಾಡಿದಾಗ, ಇಂತಹ ಒಪ್ಪಂದಗಳು ಕಾನೂನಿನ ಅನುಸಾರವೇ ಇವೆ ಎಂದು ಒಪ್ಪಿಕೊಂಡಿದ್ದವು. ಈ ರೀತಿ ಖರೀದಿಸಿದ ಭೂ ಪ್ರದೇಶಗಳು ಅಮೆರಿಕಾದ ಬಹುದೊಡ್ಡ ಪ್ರಾಂತ್ಯಗಳಾಗಿವೆ.
ಟ್ರಂಪ್ ದೃಷ್ಟಿಕೋನ: ಕಾಲುವೆ ಮತ್ತು ಕೆನಡಾ
ಇತ್ತೀಚಿನ ವಾರಗಳಲ್ಲಿ, ಡೊನಾಲ್ಡ್ ಟ್ರಂಪ್ ಅವರು ಪನಾಮಾ ಕಾಲುವೆಯ ಮೇಲೆ ನಿಯಂತ್ರಣ ಸಾಧಿಸುವ ಸಲಹೆ ನೀಡಿದ್ದು, ನೆರೆಯ ಕೆನಡಾ ಅಮೆರಿಕಾ ಸಂಯುಕ್ತ ಸಂಸ್ಥಾನದ 51ನೇ ರಾಜ್ಯವಾಗಬೇಕು ಎಂದಿದ್ದರು.
ಪನಾಮಾ ಕಾಲುವೆ ಮಧ್ಯ ಅಮೆರಿಕಾದಲ್ಲಿರುವ ಪನಾಮಾ ಎಂಬ ದೇಶದಲ್ಲಿದೆ. ಈ ಕಾಲುವೆ ಅಟ್ಲಾಂಟಿಕ್ ಸಮುದ್ರವನ್ನು (ಕೆರೆಬಿಯನ್ ಸಮುದ್ರದ ಮೂಲಕ) ಪೆಸಿಫಿಕ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಇದು ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಪ್ರಮುಖ ಜಲಮಾರ್ಗವಾಗಿದೆ.
ಗ್ರೀನ್ ಲ್ಯಾಂಡಿನ ಎರಡು ಗುರುತು: ಆರ್ಕ್ಟಿಕ್ ಭೂಮಿ, ಡ್ಯಾನಿಷ್ ನಿಯಂತ್ರಣ
ಗಾತ್ರದಲ್ಲಿ ಟೆಕ್ಸಾಸ್‌ನ ಮೂರು ಪಟ್ಟು ದೊಡ್ಡದಾಗಿರುವ ಗ್ರೀನ್ ಲ್ಯಾಂಡ್ ಒಂದು ಆರ್ಕ್ಟಿಕ್ ದ್ವೀಪವಾಗಿದ್ದು, ಕೇವಲ 57,000 ಜನಸಂಖ್ಯೆ ಹೊಂದಿದೆ. ಇದು ಭೌಗೋಳಿಕವಾಗಿ ಉತ್ತರ ಅಮೆರಿಕಾ ಖಂಡದಲ್ಲಿ, ಕೆನಡಾದ ಈಶಾನ್ಯ ದಿಕ್ಕಿನಲ್ಲಿದ್ದರೂ, ರಾಜಕೀಯವಾಗಿ ಯುರೋಪ್ ಜೊತೆ ಸಂಬಂಧ ಹೊಂದಿದೆ. ಗ್ರೀನ್ ಲ್ಯಾಂಡ್ ದ್ವೀಪ ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾಗಿದ್ದು, ಎರಡು ಶತಮಾನಗಳಿಗೂ ಹೆಚ್ಚು ಕಾಲ ಡೆನ್ಮಾರ್ಕ್ ಆಡಳಿತಕ್ಕೆ ಒಳಪಟ್ಟಿತ್ತು. ಇಂದಿಗೂ ಗ್ರೀನ್ ಲ್ಯಾಂಡಿನ ವಿದೇಶಾಂಗ ನೀತಿಯ ಹಲವು ವಿಚಾರಗಳನ್ನು ಡೆನ್ಮಾರ್ಕ್ ನಿರ್ವಹಿಸುತ್ತಿದೆ.
ಗ್ರೀನ್ ಲ್ಯಾಂಡಿನ ಜನರು ಡ್ಯಾನಿಶ್ ಪ್ರಜೆಗಳಾಗಿದ್ದು, ಡೆನ್ಮಾರ್ಕ್ ಸಂಸತ್ತಿನಲ್ಲಿ ಇಬ್ಬರು ಗ್ರೀನ್ ಲ್ಯಾಂಡ್ ಪ್ರತಿನಿಧಿಗಳಿದ್ದಾರೆ. ಗ್ರೀನ್ ಲ್ಯಾಂಡಿನ ಜನಸಂಖ್ಯೆಯ ಬಹುತೇಕ ನಾಗರಿಕರು ಸ್ಥಳೀಯ ಜನರೇ ಆಗಿದ್ದಾರೆ.
ಗ್ರೀನ್ ಲ್ಯಾಂಡ್ ಮೇಲೇಕೆ ಟ್ರಂಪ್ ಕಣ್ಣು?
ಗ್ರೀನ್ ಲ್ಯಾಂಡನ್ನು ತನ್ನದಾಗಿಸಿಕೊಳ್ಳುವುದು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಅಮೆರಿಕಾಗೆ ಅತ್ಯಂತ ಮುಖ್ಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಗ್ರೀನ್ ಲ್ಯಾಂಡಿನಲ್ಲಿ ಅಮೆರಿಕಾದ ಮಿಲಿಟರಿ ಒಂದು ಸೇನಾ ನೆಲೆಯನ್ನು ನಿರ್ವಹಿಸುತ್ತಿದ್ದು, ಅದನ್ನು ಪಿಟುಫಿಕ್ ಸ್ಪೇಸ್ ಬೇಸ್ ಎಂದು ಕರೆಯಲಾಗುತ್ತದೆ. ಇದು ಕ್ಷಿಪಣಿ ರಕ್ಷಣೆ ಮತ್ತು ಬಾಹ್ಯಾಕಾಶ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸೇನಾ ನೆಲೆಯನ್ನು ಶೀತಲ ಸಮರದ ಆರಂಭದಲ್ಲಿ ಸ್ಥಾಪಿಸಲಾಗಿದ್ದು, ಇದು ಕಾರ್ಯತಂತ್ರದ ದೃಷ್ಟಿಯಿಂದ ಸರಿಯಾದ ಸ್ಥಳದಲ್ಲಿದೆ ಎಂದು ಅಮೆರಿಕಾದ ಸ್ಪೇಸ್ ಫೋರ್ಸ್ ಹೇಳಿದೆ.
ಒಂದು ಬೃಹತ್ ದ್ವೀಪವಾಗಿರುವ ಗ್ರೀನ್ ಲ್ಯಾಂಡ್, 8,00,000 ಚದರ ಮೈಲಿಗಿಂತಲೂ (2 ಮಿಲಿಯನ್ ಚದರ ಕಿಲೋಮೀಟರ್) ಹೆಚ್ಚಿನ ಭೂಭಾಗವನ್ನು ವ್ಯಾಪಿಸಿದೆ. ಈ ಪ್ರದೇಶ ತೈಲ, ಮತ್ತು ಡಿಸ್ಪೋರ್ಸಿಯಂನಂತಹ ಅಪರೂಪದ ಭೂ ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿದೆ. ಇಂತಹ ಖನಿಜಗಳು ವಿದ್ಯುತ್ ಚಾಲಿತ ವಾಹನಗಳು, ಗಾಳಿಯ ಟರ್ಬೈನ್‌ಗಳು, ಮತ್ತು ಸ್ಮಾರ್ಟ್ ಫೋನ್‌ಗಳಂತಹ ಆಧುನಿಕ ತಂತ್ರಜ್ಞಾನದ ಉಪಕರಣಗಳ ನಿರ್ಮಾಣಕ್ಕೆ ಅತ್ಯಂತ ಅವಶ್ಯಕವಾಗಿವೆ. ಈಗ ಅವುಗಳನ್ನು ಬಹುತೇಕ ಚೀನಾ ಮತ್ತು ರಷ್ಯಾಗಳಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಹೇಳಿದೆ.
ಗ್ರೀನ್ ಲ್ಯಾಂಡ್ ವ್ಯಾಪಾರಕ್ಕಿದೆಯೇ?
ಗ್ರೀನ್ ಲ್ಯಾಂಡ್ ಯಾರಿಗೂ ಖರೀದಿಗೆ ಲಭ್ಯವಿಲ್ಲ. ಗ್ರೀನ್ ಲ್ಯಾಂಡಿನ ಮಾರಾಟದ ಸಾಧ್ಯತೆಯ ಕುರಿತು ಗ್ರೀನ್ ಲ್ಯಾಂಡ್ ಆಗಲಿ, ಡೆನ್ಮಾರ್ಕ್ ಅಧಿಕಾರಿಗಳಾಗಲಿ ಯಾವುದೇ ಮಾಹಿತಿ ನೀಡಿಲ್ಲ.
ಅಮೆರಿಕಾ ಹಿಂದೆಯೂ ಗ್ರೀನ್ ಲ್ಯಾಂಡ್ ಖರೀದಿಗೆ ಪ್ರಯತ್ನ ನಡೆಸಿತ್ತೇ?
1860ರ ದಶಕದಲ್ಲಿ, ಆ್ಯಂಡ್ರೂ ಜಾನ್ಸನ್ ಅಮೆರಿಕಾದ ಅಧ್ಯಕ್ಷರಾಗಿದ್ದಾಗ, ಗ್ರೀನ್ ಲ್ಯಾಂಡ್ ಹೊಂದಿರುವ ನೈಸರ್ಗಿಕ ಸಂಪನ್ಮೂಲಗಳ ಕಾರಣದಿಂದ ಅದು ಅತ್ಯಂತ ಮೌಲ್ಯಯುತವಾಗಿದೆ ಎಂಬ ವರದಿಯೊಂದನ್ನು ನೀಡಲಾಗಿತ್ತು. ಆದರೆ, ಗ್ರೀನ್ ಲ್ಯಾಂಡ್ ಮೇಲೆ ಹೂಡಿಕೆ ಮಾಡುವ ವಿಚಾರಕ್ಕೆ ಅಂತಹ ಬೆಂಬಲವೂ ವ್ಯಕ್ತವಾಗಲಿಲ್ಲ, ಆ ಪ್ರಯತ್ನವೂ ಮುಂದುವರಿಯಲಿಲ್ಲ.
ಎರಡನೇ ಮಹಾಯುದ್ಧ ಮುಕ್ತಾಯಗೊಂಡ ಕೆಲ ಸಮಯದಲ್ಲಿ, ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಆಡಳಿತ, 100 ಮಿಲಿಯನ್ ಡಾಲರ್ ಮೊತ್ತ ನೀಡಿ ಗ್ರೀನ್ ಲ್ಯಾಂಡನ್ನು ಖರೀದಿಸುವ ಪ್ರಸ್ತಾಪ ನೀಡಿತ್ತು.
ಗ್ರೀನ್ ಲ್ಯಾಂಡ್ ಖರೀದಿಗೆ ಎಷ್ಟು ಮೊತ್ತ ಬೇಕಾಗಬಹುದು?
2019ರಲ್ಲಿ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಗ್ರೀನ್ ಲ್ಯಾಂಡ್ ಹೊಂದಿರುವ ನೈಸರ್ಗಿಕ ಸಂಪನ್ಮೂಲಗಳು ಮತ್ತು ಉದ್ಯಮಗಳ ಆಧಾರದಲ್ಲಿ, ಆ ಪ್ರದೇಶ 1.7 ಟ್ರಿಲಿಯನ್ ಡಾಲರ್ ನಷ್ಟು ಮೌಲ್ಯ ಹೊಂದಿದೆ ಎಂದು ಅಂದಾಜಿಸಿತ್ತು. ಆದರೆ, ವಾಸ್ತವವಾಗಿ ಗ್ರೀನ್ ಲ್ಯಾಂಡ್ ಮಾರಾಟಕ್ಕಿಲ್ಲದಿರುವುದರಿಂದ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಟ್ರಂಪ್ ಇತ್ತೀಚಿನ ಹೇಳಿಕೆಯ ನಂತರದ ಪರಿಣಾಮವೇನು?
ಡಿಸೆಂಬರ್ 2024ರ ವೇಳೆಗೆ, ಡೆನ್ಮಾರ್ಕ್ ರಕ್ಷಣಾ ಸಚಿವರು ಗ್ರೀನ್ ಲ್ಯಾಂಡ್ ಭದ್ರತೆಗಾಗಿ ಅಂದಾಜು 1.5 ಬಿಲಿಯನ್ ಡಾಲರ್ ಮೌಲ್ಯದ ನೂತನ ರಕ್ಷಣಾ ಯೋಜನೆಯನ್ನು ಘೋಷಿಸಿದ್ದಾರೆ.
ರಕ್ಷಣಾ ಸಚಿವರಾದ ಟ್ರೊಯೆಲ್ಸ್ ಲಂದ್ ಪೌಲ್ಸೆನ್ ಅವರು ಗ್ರೀನ್ ಲ್ಯಾಂಡ್ ಭದ್ರತಾ ಮೊತ್ತವನ್ನು ಹೆಚ್ಚಿಸುವ ನಿರ್ಧಾರವನ್ನು ದ್ವೀಪದ ಖರೀದಿಯ ಕುರಿತು ಟ್ರಂಪ್ ಅವರ ಇತ್ತೀಚಿನ ಹೇಳಿಕೆಗೂ ಮುನ್ನವೇ ಕೈಗೊಳ್ಳಲಾಗಿತ್ತು ಎಂದಿದ್ದಾರೆ. ಇವೆರಡೂ ಬಹುತೇಕ ಏಕಕಾಲಕ್ಕೆ ಸಂಭವಿಸಿರುವುದು ಮಾತ್ರ ದುರ್ದೈವ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
"ಹಲವು ವರ್ಷಗಳ ಕಾಲ ನಾವು ಆರ್ಕ್ಟಿಕ್ ಪ್ರದೇಶದಲ್ಲಿ ಹೆಚ್ಚಿನ ಹೂಡಿಕೆ ನಡೆಸಿಲ್ಲ. ಆದರೆ, ಈಗ ನಾವು ಅಲ್ಲಿ ನಮ್ಮ ಉಪಸ್ಥಿತಿಯನ್ನು ಹೆಚ್ಚಿಸುವ ಪ್ರಯತ್ನ ನಡೆಸುತ್ತಿದ್ದೇವೆ" ಎಂದು ಪೌಲ್ಸೆನ್ ಹೇಳಿದ್ದಾರೆ.
ಡೆನ್ಮಾರ್ಕ್ ಯೋಜನೆಯಲ್ಲಿ, ಎರಡು ದೀರ್ಘ ವ್ಯಾಪ್ತಿಯ ಡ್ರೋನ್‌ಗಳು, ಹೆಚ್ಚು ಸೈನಿಕರು, ಎರಡು ಗಸ್ತು ಬೋಟುಗಳು, ಹಾಗು ಎರಡು ಸ್ಲೆಡ್ ನಾಯಿಗಳ ತಂಡಗಳನ್ನು (ಸಾಗಾಣಿಕೆಗಾಗಿ ಮಂಜಿನಲ್ಲಿ ಎಳೆಯುವ ತರಬೇತಿ ಹೊಂದಿರುವ ನಾಯಿಗಳು) ಒದಗಿಸುವುದು ಸೇರಿವೆ. ಅದರೊಡನೆ, ಎಫ್-35 ಯುದ್ಧ ವಿಮಾನಗಳ ಬಳಕೆಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣದ ಮೇಲ್ದರ್ಜೆಗೇರಿಸುವಿಕೆಯೂ ಸೇರಿದೆ












Click it and Unblock the Notifications