ಡೊನಾಲ್ಡ್ ಟ್ರಂಪ್ ಬಾಳಲ್ಲಿ ಮತ್ತೊಬ್ಬ ‘ಬೆಳದಿಂಗಳ ಬಾಲೆ’?
ನ್ಯೂಯಾರ್ಕ್: ಅಮೆರಿಕ.. ಈ ಹೆಸರು ಕೇಳಿದರೆ ಸಾಕು ಜಗತ್ತಿನ ಕಿವಿ ಅಲರ್ಟ್ ಆಗುತ್ತೆ. ಯಾಕಂದ್ರೆ ಅಮೆರಿಕದಲ್ಲಿ ನಡೆಯುವ ಪ್ರತಿಯೊಂದು ಘಟನೆ ಜಗತ್ತಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಆರ್ಥಿಕವಾಗಿ, ಭೌಗೋಳಿಕವಾಗಿ ಜಗತ್ತಿನ ಮೇಲೆ ಅಮೆರಿಕದ ಹಿಡಿತ ಅಷ್ಟು ಬಲವಾಗಿದೆ. ಆದರೆ ಇಂತಹ ಬಲಿಷ್ಠ ರಾಷ್ಟ್ರದ ಮಾಜಿ ಅಧ್ಯಕ್ಷ ಅರೆಸ್ಟ್ ಆಗುವ ಜೊತೆಗೆ ಮತ್ತೊಬ್ಬ 'ಬೆಳದಿಂಗಳ ಬಾಲೆ'ಯ ಹೆಸರು ಮುನ್ನೆಲೆಗೆ ಬಂದಿದೆ.
ಸ್ಟಾರ್ಮಿ ಡೇನಿಯಲ್ಸ್ ಪ್ರಕರಣದಲ್ಲಿ ಟ್ರಂಪ್ ಬಂಧನವಾಗಿ, ನ್ಯೂಯಾರ್ಕ್ ನಗರ ಸೂಕ್ಷ್ಮ ಪ್ರದೇಶವಾಗಿದೆ. 'ಬೈಡನ್ ಆಡಳಿತದಲ್ಲಿ ಅಮೆರಿಕ ನರಕವಾಗುತ್ತಿದೆ' ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದು ಕಡೆ ಟ್ರಂಪ್ ಜೈಲಿಗೆ ಹೋದರೆ ಉಗ್ರ ಹೋರಾಟ ನಡೆಸಲು ಬೆಂಬಲಿಗರ ಬೆಟಾಲಿಯನ್ ಸಜ್ಜಾಗಿದೆ. ಇಷ್ಟೆಲ್ಲದರ ನಡುವೆ ನೀಲಿ ಚಿತ್ರತಾರೆ ಆಗಿದ್ದ ಸ್ಟಾರ್ಮಿ ಡೇನಿಯಲ್ಸ್ ಜೊತೆಗೆ ಮತ್ತೊಬ್ಬ ಮಹಿಳೆಯ ಹೆಸರು ಟ್ರಂಪ್ ಸಂಬಂಧಗಳ ಸಾಲಿಗೆ ಸೇರ್ಪಡೆಯಾಗಿದೆ.

ಯಾರು ಆಕೆ?: ಟ್ರಂಪ್ ಪ್ರಕರಣದಲ್ಲಿ ಇಡೀ ಜಗತ್ತಿನ ಗಮನ ಸ್ಟಾರ್ಮಿ ಡೇನಿಯಲ್ಸ್ ಮೇಲೆ ನೆಟ್ಟಿದ್ದರೆ ದಿಢೀರ್ ಅಂತಾ ಮತ್ತೊಂದು ಹೆಸರು ಕೂಡ ಚಾಲ್ತಿಗೆ ಬಂದುಬಿಟ್ಟಿದೆ. ಕರೆನ್ ಮೆಕ್ಡೊಗಲ್ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ಟ್ರಂಪ್ ಪ್ರಕರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಕರೆನ್ ಮೆಕ್ಡೊಗಲ್ ಕೂಡ ಸ್ಟಾರ್ಮಿ ಡೇನಿಯಲ್ಸ್ ರೀತಿ ನೀಲಿಚಿತ್ರ ತಾರೆಯಾಗಿದ್ದರು. ಟ್ರಂಪ್ ಜೊತೆಗೆ ಕರೆನ್ ಮೆಕ್ಡೊಗಲ್ ಕೂಡ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.
10 ತಿಂಗಳ ಸಂಬಂಧ: ಮಾಡೆಲ್ ಆಗಿ, ಫಿಟ್ನೆಸ್ ಮಾಸ್ಟರ್ ಆಗಿ ಕೆಲಸ ಮಾಡಿದ್ದ ಕರೆನ್ ಮೆಕ್ಡೊಗಲ್ ತಮ್ಮ ಹಾಗೂ ಟ್ರಂಪ್ ಸಂಬಂಧದ ಬಗ್ಗೆ ಬಹಿರಂಗವಾಗಿ ಈ ಹಿಂದೆ ಮಾತನಾಡಿದ್ದರು. ಆದರೆ ನಂತರ ಖಾಸಗಿ ವಿಚಾರ ಬಹಿರಂಗ ಮಾಡುವುದಿಲ್ಲ ಎಂಬ ಒಪ್ಪಂದ ಮಾಡಿಕೊಂಡಿದ್ದ ಹಿನ್ನೆಲೆ ಎಲ್ಲಿಯೂ ಈ ಬಗ್ಗೆ ಕರೆನ್ ಮೆಕ್ಡೊಗಲ್ ಬಾಯಿಬಿಟ್ಟಿರಲಿಲ್ಲ. ಟ್ರಂಪ್ ಮತ್ತು ಕರೆನ್ ಮೆಕ್ಡೊಗಲ್ ಸುಮಾರು 10 ತಿಂಗಳ ಸಂಬಂಧದಲ್ಲಿ ಇದ್ದರು ಎನ್ನಲಾಗಿತ್ತು. ಇಬ್ಬರೂ ತಿಂಗಳಿಗೆ 4-5 ಸಾರಿ ಭೇಟಿ ಕೂಡ ಮಾಡುತ್ತಿದ್ದರಂತೆ.
ಕ್ಷಮೆ ಕೇಳಿದ್ದ ಕರೆನ್: ಇನ್ನು ತಮ್ಮ ಹಾಗೂ ಟ್ರಂಪ್ ನಡುವಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬಳಿಕ, ಕರೆನ್ ಮೆಕ್ಡೊಗಲ್ ಕ್ಷಮೆ ಕೂಡ ಕೇಳಿದ್ದರು. ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಬಳಿ ತಮ್ಮ ತಪ್ಪಿನ ಕುರಿತು ಕ್ಷಮೆ ಕೇಳುವುದಾಗಿಯೂ ಕರೆನ್ ಮೆಕ್ಡೊಗಲ್ ಹೇಳಿಕೊಂಡಿದ್ದರು. ಇದೀಗ ಟ್ರಂಪ್ ಮತ್ತು ಸ್ಟಾರ್ಮಿ ಡೇನಿಯಲ್ಸ್ ಪ್ರಕರಣದ ನಡುವೆ ಕರೆನ್ ಕೂಡ ಮುನ್ನೆಲೆಗೆ ಬಂದಿದ್ದಾರೆ.
ಸಂಕಷ್ಟದಲ್ಲಿ ಟ್ರಂಪ್: ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಾಡಿಕೊಂಡಿದ್ದ ಸಾಕಷ್ಟು ಎಡವಟ್ಟುಗಳಿಗೆ ಟ್ರಂಪ್ ಈಗಲೂ ಕೋರ್ಟ್, ಕಚೇರಿ ಅಲೆಯುತ್ತಿದ್ದಾರೆ. ಅದರಲ್ಲೂ ಹುಡುಗಿಯರ ವಿಚಾರದಲ್ಲಿ ಟ್ರಂಪ್ ವಿರುದ್ಧ ಗಂಭೀರ ಆರೋಪಗಳಿವೆ. ಇದಕ್ಕೆ ಪೂರಕ ಎಂಬಂತೆ 2016ರಲ್ಲಿ ಹಲವು ರಹಸ್ಯಗಳು ಹೊರಬಿದ್ದಿದ್ದವು. ಟ್ರಂಪ್ ವಿರೋಧಿಗಳಿಗೆ ಇದೇ ಅಸ್ತ್ರವಾಗಿ ಚುನಾವಣೆಗೂ ಬಳಕೆಯಾಗುತ್ತಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಟ್ರಂಪ್ 2024ರ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಟ್ರಂಪ್ ಬೆಂಬಲಿಗ ಪಡೆ ಕೂಡ ಇದೇ ರೀತಿ ಸ್ಪೆಷಲ್ ಕ್ಯಾಂಪೇನ್ ನಡೆಸಲು ಸಿದ್ಧವಾಗುತ್ತಿದ್ದಾರೆ. ಪ್ರಸಕ್ತ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿರುವುದು ಹಾಗು ಜೈಲು ಸೇರಿದರೂ ಟ್ರಂಪ್ ಅಧ್ಯಕ್ಷೀಯ ಚುನಾವಣೆಗಾಗಿ ಪ್ರಚಾರ ನಡೆಸಲು ಅವಕಾಶ ಇರುವುದು ರಿಪಬ್ಲಿಕನ್ ಪಕ್ಷದವರಿಗೆ ಮತ್ತಷ್ಟು ಬಲ ನೀಡಿದೆ.












Click it and Unblock the Notifications