US Elections 2024: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಫೋಟಕ ತಿರುವು: ಗೆದ್ದ ಟ್ರಂಪ್, ಮುದುಡಿದ ಕಮಲಾ!
2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ತನ್ನ ಗೆಲುವನ್ನು ಘೋಷಿಸಿದ್ದು, ಅಮೆರಿಕನ್ನರು ತನಗೆ ಅತ್ಯಂತ ಪ್ರಬಲ ಮತ್ತು ಐತಿಹಾಸಿಕ ಬಹುಮತ ನೀಡಿದ್ದಾರೆ ಎಂದು ಹೇಳಿದ್ದಾರೆ. ಈಸ್ಟರ್ನ್ ಟೈಮ್‌ನಲ್ಲಿ ರಾತ್ರಿ 2 ಗಂಟೆಯ ವೇಳೆಗೆ ಪೆನ್ಸಿಲ್ವೇನಿಯಾ ರಾಜ್ಯ ಟ್ರಂಪ್ ಪರವಾಗಿದೆ ಎಂದು ಫಲಿತಾಂಶ ಹೊರಬಂತು. ಆದರೆ ಆ ವೇಳೆಗಾಗಲೇ, ಟ್ರಂಪ್ ಸ್ಪಷ್ಟ ಮುನ್ನಡೆ ಸಾಧಿಸಿದ್ದರು. ಅವರು ಪ್ರಮುಖ ಸ್ವಿಂಗ್ ರಾಜ್ಯಗಳ (ಅಂದರೆ ಸಾಂಪ್ರದಾಯಿಕವಾಗಿ ಯಾವುದೇ ಪಕ್ಷಕ್ಕೆ ನಿರಂತರ ಬೆಂಬಲಿಗನಲ್ಲದ ರಾಜ್ಯ) ಪಟ್ಟಿಯಲ್ಲಿರುವ ನಾರ್ತ್ ಕ್ಯಾರೋಲಿನ ಹಾಗೂ ಜಾರ್ಜಿಯಾಗಳಲ್ಲಿ ಗೆಲುವು ಸಾಧಿಸಿದ್ದರು. 2020ರ ಚುನಾವಣೆಯಲ್ಲಿ ಜೋ ಬೈಡನ್ ಅವರ ಪ್ರದರ್ಶನಕ್ಕಿಂತಲೂ ಬಹಳಷ್ಟು ಕಡಿಮೆ ಮತಗಳನ್ನು ಗಳಿಸಿದ್ದ ಕಮಲಾ ಹ್ಯಾರಿಸ್ ಅವರು ಗೆಲ್ಲುವ ಸಾಧ್ಯತೆ ಅಷ್ಟರಲ್ಲಾಗಲೇ ಕಮರಿ ಹೋಗಿತ್ತು.
ಕ್ಷಿಪ್ರವಾಗಿ ಕಮಲಾ ಹ್ಯಾರಿಸ್ ಗೆಲ್ಲುತ್ತಾರೆ ಎನ್ನುವ ಕಲ್ಪನೆಗಳೆಲ್ಲ ತಲೆಕೆಳಗಾಗಿದ್ದವು. ಮೊದಲ ಮತಗಳು ಕೊನೆಗೊಂಡ ಕೆಲವೇ ಗಂಟೆಗಳ ಅವಧಿಯಲ್ಲಿ, ಡೊನಾಲ್ಡ್ ಟ್ರಂಪ್ ಎದುರು ಗೆಲ್ಲಲು ಕಮಲಾ ಹ್ಯಾರಿಸ್ ಪರದಾಡುತ್ತಿರುವುದು ಅತ್ಯಂತ ಸ್ಪಷ್ಟವಾಗಿತ್ತು. ಜೋ ಬೈಡನ್ ವಿರುದ್ಧದ 2020ರ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಟ್ರಂಪ್ ಅವರಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರ ಮತದಾರರೂ ಹೆಚ್ಚಾಗಿ ಬೆಂಬಲಿಸಿದ್ದಾರೆ.

ನವೆಂಬರ್ 6ರ ಮುಂಜಾನೆಯ ವೇಳೆಗೆ, ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ. ಚುನಾವಣೆಗೂ ಮುನ್ನ, ಕಮಲಾ ಹ್ಯಾರಿಸ್ ಮೇಲುಗೈ ಹೊಂದಿರುವಂತೆ ಕಂಡುಬಂದಿದ್ದು, ಟ್ರಂಪ್ ಸುಸ್ತಾಗಿ, ಹತಾಶರಾಗಿರುವಂತೆ ತೋರುತ್ತಿದ್ದರು. ಇದು ಚುನಾವಣೆಯಲ್ಲಿ ಅವರು ಯಶಸ್ಸು ಸಾಧಿಸಿರುವುದು ಇನ್ನಷ್ಟು ಆಶ್ಚರ್ಯಕರವಾಗುವಂತೆ ಮಾಡಿದೆ. ನಿರೀಕ್ಷೆ ಮಾಡಿದ್ದಂತೆಯೇ, ರಿಪಬ್ಲಿಕನ್ ಪಕ್ಷ ಸೆನೇಟ್ ಮೇಲೂ ನಿಯಂತ್ರಣ ಸಾಧಿಸಿದ್ದು, ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮೇಲೂ ನಿಯಂತ್ರಣ ಗಳಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ನಿಕಟ ಸ್ಪರ್ಧೆಯಿದ್ದ ರಾಜ್ಯಗಳ ಹೊರಗಡೆ, ಕಮಲಾ ಹ್ಯಾರಿಸ್ ಅವರ ತಂಡಕ್ಕೂ ಅಂತಹ ಯಾವುದೇ ಧನಾತ್ಮಕ ಬೆಳವಣಿಗೆಗಳು ಗೋಚರವಾಗಿರಲಿಲ್ಲ. ವರ್ಜೀನಿಯಾ ರಾಜ್ಯದಲ್ಲಿ 2020ರ ಚುನಾವಣೆಯಲ್ಲಿ ಜೋ ಬೈಡನ್ ಸುಲಭವಾಗಿ, ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಕಮಲಾ ಹ್ಯಾರಿಸ್ ಅಲ್ಲಿ ಪ್ರಯಾಸದ ಗೆಲುವು ಕಂಡಿದ್ದಾರೆ. ಇನ್ನು ಲೋಡೌನ್ ಕೌಂಟಿಯಂತಹ ವಾಷಿಂಗ್ಟನ್ ಡಿಸಿ ಬಳಿಯ ಉಪನಗರದಲ್ಲೂ ಕಮಲಾ ಅವರ ಮತಗಳಿಕೆ ನಾಲ್ಕು ವರ್ಷಗಳ ಹಿಂದಿನ ಬೈಡನ್ ಮತಗಳಿಕೆಗಿಂತ ಕಡಿಮೆ ಪ್ರಮಾಣದಲ್ಲಿತ್ತು.
ಈ ಬೆಳವಣಿಗೆ ಆತಂಕಕಾರಿಯಾಗಿದ್ದು, ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಕಮಲಾ ಹ್ಯಾರಿಸ್ ಸೋಲು ಕಾಣಬಹುದು ಎಂಬ ಸುಳಿವು ನೀಡಿತ್ತು. ಇನ್ನು ಮಿಷಿಗನ್ ಮತ್ತು ವಿಸ್ಕಾನ್ಸಿನ್ ನಂತಹ ಮಿಡ್ ವೆಸ್ಟರ್ನ್ ರಾಜ್ಯಗಳಲ್ಲೂ ನಗರ ಪ್ರದೇಶದ ಮತದಾರರ ಮತಗಳು ಮುಖ್ಯವಾಗಿದ್ದು, ಅಲ್ಲೂ ಕಮಲಾ ಹ್ಯಾರಿಸ್ ಗೆಲುವು ಸಾಧಿಸುವ ಸಾಧ್ಯತೆಗಳು ಕಾಣಿಸುತ್ತಿರಲಿಲ್ಲ. ಫ್ಲೋರಿಡಾ ರಾಜ್ಯದಲ್ಲಿ 2020ರ ಚುನಾವಣೆಯಲ್ಲಿ ಜೋ ಬೈಡನ್ ಕೇವಲ 3% ಮತಗಳ ಅಂತರದ ಹಿನ್ನಡೆ ಹೊಂದಿದ್ದರು. ಆದರೆ ಅಲ್ಲಿ ಕಮಲಾ ಹ್ಯಾರಿಸ್ ಮತಗಳಿಕೆ ಬಹಳಷ್ಟು ಕಡಿಮೆಯಾಗಿದೆ.
ಕಮಲಾ ಹ್ಯಾರಿಸ್ ಮತ್ತು ಅವರ ಡೆಮಾಕ್ರಟಿಕ್ ಪಕ್ಷ ಚುನಾವಣೆಯ ಫಲಿತಾಂಶ ಯಾಕೆ ತಮಗೆ ಪೂರಕವಾಗಿ ಬಂದಿಲ್ಲ ಎಂಬ ಕುರಿತು ಚಿಂತನೆ ನಡೆಸಬೇಕಿದೆ. ಬಹುಶಃ ಅಮೆರಿಕಾದ ಮತದಾರರು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸರ್ಕಾರದ ಕ್ರಮಗಳಿಂದ ಬೇಸತ್ತು ಹೋಗಿದ್ದು, ಈ ಆಡಳಿತ ವಿರೋಧಿ ಅಲೆಯ ಪರಿಣಾಮವಾಗಿ ಅವರು ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ ಎನ್ನಬಹುದು. ಇದು ಒಂದು ರೀತಿಯಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆಯುವ ವಿದ್ಯಮಾನಗಳ ರೀತಿಯದಾಗಿದ್ದು, ಒಂದು ವೇಳೆ ಸರ್ಕಾರದ ಆಡಳಿತ ಸಮಾಧಾನ ತರದಿದ್ದರೆ, ಜನರು ಆಡಳಿತ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸುವುದು ಸಾಮಾನ್ಯವಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಈ ಬಾರಿ ಬಿಳಿಯ ಮತದಾರರು ಮಾತ್ರವಲ್ಲದೆ, ಲ್ಯಾಟಿನೋ ಮತ್ತು ಕರಿಯ ಜನಾಂಗದ ಪುರುಷರ ಮತವನ್ನೂ ಗಳಿಸಿದ್ದು, ಆ ಮೂಲಕ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ತನ್ನ ಪರ ಬೆಂಬಲವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ಆಶ್ಚರ್ಯಕರವಾಗಿದ್ದು, ಟ್ರಂಪ್ ಅವರು ತನ್ನ ಸಾಂಪ್ರದಾಯಿಕ ಬೆಂಬಲಿಗರು ಮಾತ್ರವಲ್ಲದೆ, ಬೇರೆ ಬೇರೆ ಸಮುದಾಯಗಳ ಮತದಾರರ ಬೆಂಬಲವನ್ನೂ ಗಳಿಸಿಕೊಂಡಿದ್ದಾರೆ. ಆ ಮೂಲಕ ಟ್ರಂಪ್ ಅವರ ಪುನರಾಗಮನ ನಿಜಕ್ಕೂ ಐತಿಹಾಸಿಕವಾಗಿದೆ. ಬಹಳಷ್ಟು ಸಮೀಕ್ಷೆಗಳು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಅಮೆರಿಕಾಗೆ ಪ್ರಥಮ ಮಹಿಳಾ ಅಧ್ಯಕ್ಷೆ ಸಿಗುವಂತೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದವು. ಆದರೆ ಫಲಿತಾಂಶ ಅದಕ್ಕೆ ವ್ಯತಿರಿಕ್ತವಾಗಿ ಹೊರಬಂದಿದೆ. ಫಲಿತಾಂಶ ಹೊರಬಂದ ಬಳಿಕ, ಡೆಮಾಕ್ರಟಿಕ್ ಪಕ್ಷ ನಾವು ಯಾಕೆ ಈ ಚುನಾವಣೆಯಲ್ಲಿ ಪ್ರಮುಖ ಮತದಾರ ಸಮುದಾಯಗಳನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ












Click it and Unblock the Notifications