ಆ ಒಂದು.. ಆ ಎರಡು.. ಆ ಮೂರು.. ಹೆಣಗಳು ಬಿದ್ದಿದ್ದು ಸಾವಿರಾರು!
ರಷ್ಯಾ VS ಉಕ್ರೇನ್ ಯುದ್ಧ ಪರಿಣಾಮ ಹೇಗಿದೆ ಎಂದರೆ ಪ್ರಪಂಚ ಈಗಾಗಲೇ 2 ಭಾಗವಾಗಿದ್ದು ಮನುಷ್ಯನ ವಿನಾಶಕ್ಕೆ ಮುನ್ನುಡಿ ಬರೆದಾಗಿದೆ. ಕೆಲ ದೇಶಗಳು ರಷ್ಯಾ ಪರ ನಿಂತರೆ, ಹಲವು ದೇಶಗಳು ಅಮೆರಿಕ ಜೊತೆ ಸೇರಿವೆ. ಹೀಗೆ ಎರಡೂ ಬಣಗಳ ನಡುವೆ ಕಿತ್ತಾಟವೂ ಜೋರಾಗಿದ್ದು ಭಯ ಹುಟ್ಟಿಸುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆಯೇ ರಷ್ಯಾ VS ಉಕ್ರೇನ್ ಯುದ್ಧ ಈಗ ಬರೋಬ್ಬರಿ 2 ವರ್ಷ ಪೂರೈಸಿ, ಇದೀಗ 3ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ!
ಅದು 2022ರ ಫೆಬ್ರವರಿ 20, ಅಂದು ಇಡೀ ಜಗತ್ತು ಕನಸು & ಮನಸ್ಸಿನಲ್ಲೂ ಅಂದುಕೊಳ್ಳದ ಘಟನೆ ನಡೆದು ಹೋಗಿತ್ತು. ಅಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಮೆರಿಕ ಹಾಗೂ ಅದರ ಮಿತ್ರ ದೇಶಗಳ 'ನ್ಯಾಟೋ' ಒಕ್ಕೂಟಕ್ಕೆ ಸರಿಯಾದ ಪೆಟ್ಟು ಕೊಡಲು ಯುದ್ಧವನ್ನೇ ಘೋಷಣೆ ಮಾಡಿದರು. ಉಕ್ರೇನ್ ಕೂಡ 'ನ್ಯಾಟೋ' ಒಕ್ಕೂಟ ಸೇರುತ್ತಿದೆ ಎಂದು ಆರೋಪ ಮಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಣೆಯನ್ನೇ ಮಾಡಿಬಿಟ್ಟರು. ಹೀಗೆ ಇಡೀ ಜಗತ್ತು ಮತ್ತೆ ಯುದ್ಧದ ಕೂಪದಲ್ಲಿ ನರಳುವಂತಾಯಿತು. ಈ ಯುದ್ಧ ಇದೀಗ 2ನೇ ವರ್ಷ ಪೂರೈಸಿದೆ.

ರಣಕಹಳೆ ಮೊಳಗಿಸಿದ್ದ ಪುಟಿನ್!
ಮೊದಲೇ ಹೇಳಿದಂತೆ ರಷ್ಯಾದ ಅಧ್ಯಕ್ಷ ಪುಟಿನ್ 2022ರ ಫೆಬ್ರವರಿ 20 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದ್ದರು. ರಷ್ಯಾ ಸೇನಾಧಿಕಾರಿಗಳ ಜೊತೆಯಲ್ಲಿ ಮಹತ್ವದ ಮಾತುಕತೆ ನಡೆಸಿ, ಕೆಲವೇ ಕ್ಷಣದಲ್ಲಿ ಯುದ್ಧ ಘೋಷಣೆ ಮಾಡಿದ್ದರು ಪುಟಿನ್. ಈ ಮೂಲಕ, ಶತ್ರುವಿನ ಸಾವಿಗೆ ಪಣತೊಟ್ಟರು ಪುಟಿನ್. ನೋಡ ನೋಡುತ್ತಲೇ ಯುದ್ಧ ಕೈಮೀರುತ್ತಿದ್ದು, ಈಗಾಗಲೇ ಉಕ್ರೇನ್ ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದರೂ ರಷ್ಯಾದ ಕಡೆಯಿಂದ ಆಗಲಿ, ಅಥವಾ ಉಕ್ರೇನ್ ಕಡೆಯಿಂದ ಆಗಲಿ ಯುದ್ಧ ನಿಲ್ಲಿಸುವ ಮಾತುಕತೆ ಆರಂಭ ಆಗಿಲ್ಲ. ಹೀಗಾಗಿ ಈ ಯುದ್ಧ 3ನೇ ಮಹಾಯುದ್ಧದ ರೂಪವನ್ನು ಪಡೆಯುವ ಭಯ ಆವರಿಸಿದೆ.
4 ಲಕ್ಷ ಕೋಟಿ ರೂಪಾಯಿ ಸಹಾಯ!
ಈಗಿನ ಸ್ಥಿತಿ ಗಮನಿಸಿದರೆ, ಅಮೆರಿಕ ಪರೋಕ್ಷವಾಗಿ ರಷ್ಯಾ ವಿರುದ್ಧ ಯುದ್ಧ ನಡೆಸುತ್ತಿರುವಂತೆ ಕಾಣುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಸೇನೆ ಯುದ್ಧ ಸಾರಿ 729 ದಿನಗಳು ಕಳೆದಿದೆ. ಹೀಗೆ ಕಳೆದ 2 ವರ್ಷದಲ್ಲಿ ಅಮೆರಿಕದಿಂದ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯವನ್ನೂ ಉಕ್ರೇನ್ ಸೇನೆ ಪಡೆದಿದೆ. ಇದು ಸಾಲದ ಎಂಬಂತೆ, ಭಯಾನಕ ಅಸ್ತ್ರಗಳ ರಾಶಿಯನ್ನೇ ಕಳುಹಿಸಿ ಕೊಟ್ಟ ಅಮೆರಿಕ ರಷ್ಯಾ ವಿರುದ್ಧ ಪರೋಕ್ಷ ಹೋರಾಟ ನಡೆಸುತ್ತಿದೆ. ಇವರಿಬ್ಬರ ತಿಕ್ಕಾಟಕ್ಕೆ ಇದೀಗ ಉಕ್ರೇನ್ ಬಾಲ ಮುದುಡಿ ಹೋಗಿದೆ.

ವಿಶ್ವಸಂಸ್ಥೆಗೆ ತಲೆನೋವು ಗುರೂ!
ರಷ್ಯಾ & ಉಕ್ರೇನ್ ಯುದ್ಧ ವಿಶ್ವಸಂಸ್ಥೆಗೆ ಕೂಡ ದೊಡ್ಡ ತಲೆನೋವು ತರುತ್ತಿದೆ. ಯಾಕಂದ್ರೆ ಹೀಗೆ ಬಿಟ್ಟರೆ ಇವರಿಬ್ಬರ ಕಿತ್ತಾಟ ಮುಂದೆ ಭಾರಿ ದೊಡ್ಡ ವಿನಾಶ ಸೃಷ್ಟಿ ಮಾಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ರಷ್ಯಾ VS ಉಕ್ರೇನ್ ಯುದ್ಧ ಶುರುವಾದ ನಂತರ ಜಗತ್ತಿನಲ್ಲಿ ಭಾರಿ, ದೊಡ್ಡ ಬಿರುಕು ಕಾಣಿಸಿದೆ. ಒಂದು ಕಡೆ ರಷ್ಯಾ ಬೆಂಬಲಿತ ರಾಷ್ಟ್ರಗಳು ಒಗ್ಗೂಡಿವೆ. ಇದೇ ಸಮಯದಲ್ಲಿ ಅಮೆರಿಕ ಪರವಾಗಿ ಇರುವ ದೇಶಗಳು ಸೇರಿಕೊಂಡಿವೆ. ಹೀಗೆ ಇಬ್ಬರು ಸೇರಿ, ಮತ್ತೊಂದು ಮಹಾಯುದ್ಧ ಮಾಡಿಬಿಟ್ಟರೆ? 3ನೇ ಮಹಾಯುದ್ಧ ನಡೆದುಬಿಟ್ಟರೆ? ಎನ್ನುವ ಭಯ ಈಗ ವಿಶ್ವಸಂಸ್ಥೆಗೆ ಕಾಡತೊಡಗಿದೆ.
ಇದನ್ನೆಲ್ಲಾ ನೋಡುತ್ತಿದ್ದರೆ ಮನುಷ್ಯ 1ನೇ ಮಹಾಯುದ್ಧ ಹಾಗೂ 2ನೇ ಮಹಾಯುದ್ಧದ ಬಳಿಕ ಬುದ್ಧಿ ಕಲಿತಿಲ್ಲ ಅಂತಾ ಕಾಣುತ್ತದೆ. ಹೀಗಾಗಿಯೇ 3ನೇ ಮಹಾಯುದ್ಧ ನಡೆಯುತ್ತೆ ಅನ್ನೋ ಮಾತು ಕೂಡ ಕೇಳಿಬರುತ್ತಿವೆ. ಈ ತಿಕ್ಕಾಟಗಳ ನಡುವೆ ಜಾಗತಿಕ ಆರ್ಥಿಕತೆಯೂ ಹಳ್ಳ ಹಿಡಿಯುತ್ತಿದೆ. ಅದರಲ್ಲೂ ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಈಗ ಆರ್ಥಿಕ & ಸಾಮಾಜಿಕ ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ ಆದಷ್ಟು ಬೇಗ ರಷ್ಯಾ & ಉಕ್ರೇನ್‌ನ ಯುದ್ಧ ನಿಲ್ಲಲಿ ಎಂಬುದೇ ಜಗತ್ತಿನಲ್ಲಿ ಜನರ ಬಯಕೆಯಾಗಿದೆ.












Click it and Unblock the Notifications