Afraid of Women: ಮಹಿಳೆಯರಿಗೆ ಹೆದರಿ 55 ವರ್ಷ ಮನೆಯಲ್ಲಿದ್ದ ವ್ಯಕ್ತಿ!
ನಮ್ಮಲ್ಲಿ ಹಲವರು ಪ್ರಾಣಿಗಳು, ಉಕ್ಕಿ ಹರಿಯುವ ನೀರು, ಬೆಂಕಿ ಮತ್ತು ಕತ್ತಲೆ ಕೋಣೆಗಳಂತಹ ಬಹಳಷ್ಟು ವಿಷಯಗಳಿಗೆ ಹೆದರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಹೆದರಿಕೊಂಡಿದ್ದು ಮಹಿಳೆಯರಿಗೆ. ಆಶ್ಚರ್ಯ ಎನಿಸಿದರೂ ಇದು ನಿಜಾನೇ. 71 ವರ್ಷದ ಆಫ್ರಿಕನ್ ವ್ಯಕ್ತಿಯೊಬ್ಬ ಮಹಿಳೆಯರಿಂದ ದೂರವಿರಲು 55 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದು ಕಂಡು ಬಂದಿದೆ.
ಕ್ಯಾಲಿಟ್ಸ್ ನ್ಜಾಮ್ವಿಟಾ (Callitxe Nzamwita) ಆಫ್ರಿಕಾದ ರುವಾಂಡಾ ನಿವಾಸಿ. ಇವರು ತಮ್ಮ 16ನೇ ವಯಸ್ಸಿನಲ್ಲಿ ಯಾವುದೇ ಸ್ತ್ರೀ ಸಂಪರ್ಕದಿಂದ ದೂರವಿರಲು ನಿರ್ಧರಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ವ್ಯಕ್ತಿಗೆ ಮಹಿಳೆಯರು ಅಂದರೆ ಭಯ ಅದೇನೋ ಆತಂಕ. ಕಳೆದ 55 ವರ್ಷಗಳಿಂದ ಈ ಕಾರಣಕ್ಕೆ ಮನೆಯಲ್ಲೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.

ತಮ್ಮ ನಿರ್ಧಾರ ಇತರರಿಗೆ ಅರ್ಥಪಡಿಸಲು ಈ ವ್ಯಕ್ತಿ 15 ಅಡಿ ಬೇಲಿಯನ್ನು ನಿರ್ಮಿಸಿದ್ದಾರೆ. ಯಾವುದೇ ಹೆಣ್ಣು ಮನೆಯೊಳಗೆ ಪ್ರವೇಶಿಸದಂತೆ ಸ್ವತಃ ಬ್ಯಾರಿಕೇಡ್ ಹಾಕಿಕೊಂಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಕ್ಯಾಲಿಟ್ಸ್ ನ್ಜಾಮ್ವಿಟಾ ಹೇಳಿದ್ದು ಹೀಗೆ- 'ನನಗೆ ಮಹಿಳೆಯರು ಕಂಡರೆ ಅದೇನೋ ಭಯ ಆತಂಕ. ಹೀಗಾಗಿ ನಾನು ಅವರಿಂದ ದೂರವಿರಲು ಬಯಸುತ್ತೇನೆ. ಅದಕ್ಕಾಗಿ ನಾನು ನನ್ನ ಮನೆಗೆ ಬೇಲಿಯನ್ನು ಹಾಕಿದ್ದೇನೆ. ಜೊತೆಗೆ ಬೀಗ ಕೂಡ ಹಾಕಿಕೊಂಡಿರುತ್ತೇನೆ. ಆ ಮೂಲಕ ನಾನು ಅವರು ನನ್ನ ಬಳಿ ಬರುವುದನ್ನು ನಿಷೇಧಿಸಿದ್ದೇನೆ' ಎಂದು ಹೇಳಿದ್ದಾರೆ. ಆದರೆ ಆತನಿಗೆ ಮಹಿಳೆಯರು ಕಂಡರೆ ಭಯ ಹುಟ್ಟಲು ಕಾರಣ ಏನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.
ವಿಪರ್ಯಾಸವೆಂದರೆ ಆತನಿಗೆ ಹೆಣ್ಣಿನ ಭಯವಿದ್ದರೂ ಸ್ಥಳೀಯ ಹೆಂಗಸರು ಅದರಲ್ಲೂ ಅಕ್ಕಪಕ್ಕದ ಮನೆಯವರು ಮಾತ್ರ ಆತನ ಬದುಕಿಗೆ ನೆರವಾಗುತ್ತಿದ್ದಾರೆ. ವರದಿಯ ಪ್ರಕಾರ, ಈತನ ನೆರೆಹೊರೆಯವರಲ್ಲಿ ಒಬ್ಬರು ಮಾತನಾಡಿ, ಕ್ಯಾಲಿಟ್ಸ್ ನ್ಜಾಮ್ವಿಟಾ ಅವರು ಬಾಲ್ಯದಿಂದಲೂ ಮನೆಯನ್ನು ಬಿಟ್ಟು ಹೋಗುವುದನ್ನು ಅವರು ನೋಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಕ್ಯಾಲಿಟ್ಸ್ ನ್ಜಾಮ್ವಿಟಾ ನ ನೆರೆಹೊರೆಯವರೇ ಆತನಿಗೆ ಬೇಕಾದ ಆಹಾರ ಮತ್ತು ದಿನಸಿ ವಸ್ತುಗಳನ್ನು ನೀಡುತ್ತಾರೆ. ಯಾರಾದರೂ ಅವನಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ, ಅವನು ಯಾರೊಂದಿಗೂ ಮಾತನಾಡಲು ಹತ್ತಿರದಲ್ಲಿರಲು ಬಯಸುವುದಿಲ್ಲ. ಆದ್ದರಿಂದ, ಅವನಿಗೆ ಬೇಕಾದುದನ್ನು ಅವರು ಸಾಮಾನ್ಯವಾಗಿ ಅವರ ಮನೆಗೆ ಎಸೆಯುತ್ತಾರೆ. ಅದನ್ನು ಆತ ತೆಗೆದುಕೊಳ್ಳತ್ತಾನೆ.
ಯಾರಾದರು ಒಬ್ಬ ಮಹಿಳೆ ಆತನ ಕಾಂಪೌಂಡ್‌ಗೆ ಹತ್ತಿರದಲ್ಲಿದ್ದರೆ, ಆತನ ತನ್ನ ಮನೆಗೆ ನುಗ್ಗಿ ಬೀಗ ಹಾಕಿಕೊಳ್ಳುತ್ತಾನೆ. ವರದಿಗಳ ಪ್ರಕಾರ, ಕ್ಯಾಲಿಟ್ಸ್ ನ್ಜಾಮ್ವಿಟಾ ಗೈನೋಫೋಬಿಯಾ ಎಂಬ ಮಾನಸಿಕ ಸ್ಥಿತಿಯಿಂದ ಬಳಲುತ್ತಿದ್ದಾನೆ. ಇದು ಮಹಿಳೆಯರ ಬಗ್ಗೆ ಭಯವಾಗಿದೆ. ಮಾನಸಿಕ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಅಂಕಿಅಂಶಗಳ ಕೈಪಿಡಿ (DSM-5) ನಲ್ಲಿ ಗೈನೋಫೋಬಿಯಾವನ್ನು ಗುರುತಿಸಲಾಗಿಲ್ಲ. ಆದಾಗ್ಯೂ, ವೈದ್ಯಕೀಯ ವ್ಯವಸ್ಥೆಯಲ್ಲಿ, ಇದನ್ನು "ನಿರ್ದಿಷ್ಟ ಫೋಬಿಯಾ" ಎಂದು ವರ್ಗೀಕರಿಸಲಾಗಿದೆ.
ಗೈನೋಫೋಬಿಯಾದ ಲಕ್ಷಣಗಳು ಮಹಿಳೆಯರ ಬಗ್ಗೆ ಅಗಾಧ ಭಯ ಮತ್ತು ಅವರ ಬಗ್ಗೆ ಪ್ರಚೋದಿಸಬಹುದಾದ ಆತಂಕವಾಗಿದೆ. ಇದು ಪ್ಯಾನಿಕ್ ಅಟ್ಯಾಕ್, ಎದೆಯಲ್ಲಿ ಬಿಗಿತ, ಅತಿಯಾಗಿ ಬೆವರುವುದು, ಹೃದಯವು ವೇಗವಾಗಿ ಬಡಿಯುವುದು ಮತ್ತು ಉಸಿರಾಟದ ತೊಂದರೆಗಳನ್ನು ಸಹ ಒಳಗೊಂಡಿದೆ.












Click it and Unblock the Notifications