Breaking: ಉಕ್ರೇನ್ ರಾಜಧಾನಿ ಕೀವ್ ಪ್ರವೇಶಿಸಿದ ರಷ್ಯಾ
ವಾಶಿಂಗ್ಟನ್, ಫೆಬ್ರವರಿ 25: ಶತ್ರುಗಳ ವಿಧ್ವಂಸಕ ಗುಂಪುಗಳು ರಾಜಧಾನಿ ಕೀವ್ ಪ್ರವೇಶಿಸಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಂದೇಶ ರವಾನಿಸಿದ್ದಾರೆ.
ರಷ್ಯಾ ಸೇನೆಯು ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ಲಗ್ಗೆಯಿಟ್ಟಿದೆ. ನಗರದ ನಿವಾಸಿಗಳು ಜಾಗರೂಕತೆಯಿಂದ ಇರಬೇಕಾಗಿದ್ದು, ಕರ್ಫ್ಯೂ ನಿಯಮಗಳನ್ನು ಪಾಲನೆ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿಯನ್ನು ಪ್ರವೇಶಿಸಿದಾಗ ರಷ್ಯಾ ಬಳಸದಂತೆ ತಡೆಯುವುದಕ್ಕಾಗಿ ಕೇವ್ ಸೇತುವೆಯನ್ನು ಸ್ವತಃ ಉಕ್ರೇನ್ ಸ್ಫೋಟಿಸಿತು. ಅದಾಗ್ಯೂ, ದೇಶವು ತನ್ನನ್ನು ತಾನೇ ರಕ್ಷಿಸಿಕೊಳ್ಳುವುದನ್ನು ಅಂತ್ಯಗೊಳಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು. "ಕೊನೆಗೂ ಉಕ್ರೇನ್ ನ್ಯಾಟೋ ಸದಸ್ಯನಾಗುವುದನ್ನು ಖಾತರಿಪಡಿಸಲು ಯಾರೂ ಸಿದ್ಧರಿಲ್ಲ. ಎಲ್ಲರೂ ಭಯ ಪಡುತ್ತಾರೆ, ಎಲ್ಲರೂ ಮೌನವಾಗಿದ್ದಾರೆ," ಎಂದರು.

ಪ್ರತಿಯೊಂದು ದೇಶಕ್ಕೂ ಧನ್ಯವಾದ ತಿಳಿಸಿದ ಝೆಲೆನ್ಸ್ಕಿ
ಉಕ್ರೇನಿಯನ್ ನಾಯಕನನ್ನು ಬೆಂಬಲಿಸಿದ ಎಲ್ಲಾ ಪಾಲುದಾರರಿಗೆ ಝೆಲೆನ್ಸ್ಕಿ ಧನ್ಯವಾದ ಅರ್ಪಿಸಿದರು. "ಉಕ್ರೇನ್‌ಗೆ ಕೇವಲ ಪದಗಳಿಂದ ಮಾತ್ರವಲ್ಲದೆ ಕಾರ್ಯಗಳಿಂದ ಸಹಾಯ ಮಾಡುವ ಪ್ರತಿಯೊಂದು ದೇಶಕ್ಕೂ ನಾನು ಕೃತಜ್ಞನಾಗಿದ್ದೇನೆ," ಎಂದು ಹೇಳಿದರು.

ರಷ್ಯಾ ಪಾಲಿಗೆ ನಾನೇ ನಂಬರ್ 1 ಟಾರ್ಗೆಟ್
ರಷ್ಯಾದ ಪಾಲಿಗೆ ನಾನೇ ನಂಬರ್ 1 ಟಾರ್ಗೆಟ್ ಆಗಿದ್ದು, ನನ್ನ ಕುಟುಂಬ ಎರಡನೇ ಟಾರ್ಗೆಟ್ ಆಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಶುಕ್ರವಾರ ದೂರದರ್ಶನದಲ್ಲಿ ರಷ್ಯಾ ದಾಳಿಯ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತನಾಡಿದರು. ರಾಷ್ಟ್ರದ ಮುಖ್ಯಸ್ಥರನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ರಷ್ಯಾ ಬಯಸಿದೆ ಎಂದು ದೂಷಿಸಿದ್ದರು. ಕೇಂದ್ರ ಸರ್ಕಾರಕ್ಕೆ ಕೆಲಸ ಮಾಡಲು ಅಗತ್ಯವಿರುವ ಎಲ್ಲರೊಂದಿಗೆ ಅವರು ಸರ್ಕಾರಿ ಕ್ವಾರ್ಟರ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು. "ನಾನು ರಾಜಧಾನಿಯಲ್ಲಿ ಇರುತ್ತೇನೆ, ನಾನು ನನ್ನ ಜನರೊಂದಿಗೆ ಇರುತ್ತೇನೆ" ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದರು.
ನನ್ನ ಕುಟುಂಬ ದೇಶದ್ರೋಹಿಯಲ್ಲ:
"ನಾನು ರಾಜಧಾನಿಯಲ್ಲಿ ಇರುತ್ತೇನೆ, ನಾನು ನನ್ನ ಜನರೊಂದಿಗೆ ಇರುತ್ತೇನೆ ಎಂದಿರುವ ಝೆಲೆನ್ಸ್ಕಿ, ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ. ನನ್ನ ಮಕ್ಕಳೂ ಉಕ್ರೇನ್‌ನಲ್ಲಿದ್ದಾರೆ. ನನ್ನ ಕುಟುಂಬ ದೇಶದ್ರೋಹಿಗಳಲ್ಲ. ಅವರು ಉಕ್ರೇನ್ ಪ್ರಜೆಗಳು. ಆದರೆ ಅವರು ಈಗ ಎಲ್ಲಿದ್ದಾರೆ ಎಂದು ಹೇಳುವ ಹಕ್ಕು ನನಗಿಲ್ಲ," ಎಂಬುದಾಗಿ ತಿಳಿಸಿದರು.

ರಷ್ಯಾ ವಿರುದ್ಧ ಪ್ರತಿಭಟಿಸಲು ಕರೆ
ರಷ್ಯಾದ ಪಡೆಗಳು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಮೇಲಿನ ಯುದ್ಧದ ವಿರುದ್ಧ ಪ್ರತಿಭಟಿಸುವಂತೆ ರಷ್ಯನ್ನರನ್ನು ಒತ್ತಾಯಿಸಿದ್ದಾರೆ.

ರಷ್ಯಾದ ವಿರುದ್ಧ ಪ್ರತಿಭಟನೆ ನಡೆಸಿದವರ ಬಂಧನ
ಲಿಥುವೇನಿಯಾದ ವಿಲ್ನಿಯಸ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಎದುರು ತೀವ್ರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು ರಷ್ಯಾ ಪಾಸ್‌ಪೋರ್ಟ್ ಅನ್ನು ಸುಟ್ಟು ಹಾಕಿದರು. ಇನ್ನೊಂದು ದಿಕ್ಕಿನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ವಿರೋಧಿಸಿ ಮಾಸ್ಕೋದಲ್ಲಿ ಪ್ರತಿಭಟಿಸುತ್ತಿರುವ 1000 ಜನರನ್ನು ಬಂಧಿಸಲಾಗಿದೆ. ರಷ್ಯಾದ ಒಟ್ಟು 54 ನಗರಗಳಲ್ಲಿ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಸುಮಾರು 1,745 ಜನರನ್ನು ಬಂಧಿಸಲಾಗಿದೆ.












Click it and Unblock the Notifications