Karachi Attack : ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಗುಂಡಿನ ದಾಳಿ; ದುಷ್ಕೃತ್ಯ ಮೆರೆದ ಉಗ್ರರು
ಉಗ್ರರು ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಘಟನೆ ಕರಾಚಿ ನಗರದಲ್ಲಿ ನಡೆದಿದ್ದು, ಏನೆಲ್ಲ ಅನಾಹುತಗಳು ಸಂಭವಿಸಿವೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಇಸ್ಲಾಮಾಬಾದ್, ಫೆಬ್ರವರಿ, 17: ಉಗ್ರರು ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಘಟನೆ ದಕ್ಷಿಣ ಪಾಕಿಸ್ತಾನದ ಕರಾಚಿ ನಗರದಲ್ಲಿ ನಡೆದಿದೆ.
ಮೂಲಗಳ ಪ್ರಕಾರ , ಕರಾಚಿಯ ಶೇರಿಯಾ ಫೈಸಲ್‍ನಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಸರಿಸುಮಾರು ರಾತ್ರಿ 10 ಗಂಟೆಯವರೆಗೂ ಗುಂಡಿನ ಚಕಮಕಿ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರ ಜಮಾವಣೆ
ತಕ್ಷಣ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಕರಾಚಿ ಪೊಲೀಸರು ಹಾಗೂ ಪಾಕಿಸ್ತಾನ ರೇಂಜರ್‌ಗಳು ಪ್ರದೇಶವನ್ನು ಸುತ್ತುವರೆದಿದ್ದಾರೆ. ದಾಳಿಗೆ 8 ಉಗ್ರರು ಹ್ಯಾಂಡ್ ಗ್ರೆನೇಡ್ ಹಾಗೂ ಬಂದೂಕುಗಳನ್ನು ಬಳಸಿದ್ದು, ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಹಾಗೆಯೇ ಇಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ದಾಳಿ
ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಘಟನೆಗೆ ಸಂಬಂಧಿಸಿದಂತೆ ತಮ್ಮ ವಲಯಗಳಿಂದ ಸಿಬ್ಬಂದಿಯನ್ನು ಕಳುಹಿಸಲು ಡಿಐಜಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪೊಲೀಸ್ ಮುಖ್ಯಸ್ಥರ ಕಚೇರಿಯ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ. ಹೆಚ್ಚುವರಿ ಐಜಿ ಕಚೇರಿಯ ಮೇಲಿನ ನಡೆದ ದಾಳಿಯ ಹಿಂದಿನ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಸೂಚನೆ ನೀಡಿದರು.

"ಇದರಲ್ಲಿ ಎಷ್ಟು ಭಯೋತ್ಪಾದಕರು ಭಾಗಿಯಾಗಿದ್ದರು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಕನಿಷ್ಠ ಐದಕ್ಕಿಂತ ಹೆಚ್ಚು ಮಂದಿ ಇದ್ದಾರೆ" ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಇರ್ಫಾನ್ ಬಲೋಚ್ ಮಾಹಿತಿ ನೀಡಿದ್ದಾರೆ. ಹಾಗೆಯೇ ದಾಳಿಯ ವೇಳೆ ಠಾಣೆಯಲ್ಲಿ 30 ಜನ ಪೊಲೀಸ್ ಅಧಿಕಾರಗಳು ಇದ್ದಿರಬಹುದು ಎಂದು ಹೇಳಿದರು.












Click it and Unblock the Notifications