ಘೋರ ದುರಂತ: ಸಬ್‌ಮರಿನ್ ಸಮುದ್ರ ಪಾಲು, 53 ನಾವಿಕರ ದುರಂತ ಅಂತ್ಯ..?
ಇಂಡೋನೇಷ್ಯಾದ ಇತಿಹಾಸದಲ್ಲೇ ಘೋರ ದುರಂತ ಸಂಭವಿಸಿದ್ದು ಸುಮಾರು 53 ನಾವಿಕರಿದ್ದ ಸಬ್‌ಮರಿನ್ ಮುಳುಗಡೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಇಂಡೋನೇಷ್ಯಾದ ಬಾಲಿ ಬಳಿ ಬುಧವಾರ ಸಬ್‌ಮರಿನ್ ನಾಪತ್ತೆಯಾಗಿತ್ತು. 'ಕೆಆರ್‌ಐ ನಂಗಲ್ಲಾ-402' ಹೆಸರಿನ ಜಲಾಂತರ್ಗಾಮಿಯಲ್ಲಿ ಇದ್ದ ಆಕ್ಸಿಜನ್ ಮುಗಿದಿದ್ದು, ಸಬ್‌ಮರಿನ್‌ಲ್ಲಿದ್ದ ನಾವಿಕರು ಬದುಕುಳಿದಿರುವುದು ಅನುಮಾನ ಎನ್ನಲಾಗುತ್ತಿದೆ.
ಇಂಡೋನೇಷ್ಯಾದ ಸೇನೆ ಬಳಿ ಸುಮಾರು 5 ಸಬ್‌ಮರಿನ್‌ಗಳಿವೆ. ಈ ಪೈಕಿ ಇದೀಗ ದುರಂತ ಅಂತ್ಯ ಕಂಡಿರುವ 'ಕೆಆರ್‌ಐ ನಂಗಲ್ಲಾ-402' ಕೂಡ ಒಂದು. ಜರ್ಮನಿ ಮೂಲದ ಕೆಆರ್‌ಐ ನಂಗಲ್ಲಾ-402 ಇಂಡೋನೇಷ್ಯಾ ನೌಕಾಪಡೆಗೆ ದೊಡ್ಡ ಶಕ್ತಿಯಾಗಿತ್ತು. ದಿಢೀರ್ ನಡೆದ ಬೆಳವಣಿಗೆ ಜಲಾಂತರ್ಗಾಮಿಯನ್ನು ಬಲಿ ತೆಗೆದುಕೊಂಡಿದೆ.
ಬುಧವಾರ ಸಬ್‌ಮರಿನ್ ನಾಪತ್ತೆಯಾದ ಬಳಿಕ ಶುಕ್ರವಾರ ಕಾರ್ಯಾಚರಣೆ ವೇಳೆ 'ಕೆಆರ್‌ಐ ನಂಗಲ್ಲಾ-402'ಗೆ ಸೇರಿದ ಕೆಲವು ವಸ್ತುಗಳು ಅಧಿಕಾರಿಗಳಿಗೆ ಕಾಣಿಸಿದ್ದವು. ಆ ಬಳಿಕ ಆತಂಕ ತೀವ್ರವಾಗಿದ್ದು, ಇದೀಗ ಸಬ್‌ಮರಿನ್ ಒಳಗಿದ್ದ ಆಕ್ಸಿಜನ್ ಸಂಗ್ರಹ ಕೂಡ ಮುಗಿದಿದೆ. 53 ನಾವಿಕರು ಬದುಕುಳಿದಿರುವುದು ಅನುಮಾನವಾಗಿದೆ. ನಾವಿಕರ ಮನೆಯಲ್ಲಿ ಶೋಕ ಮಡುಗಟ್ಟಿದೆ.

ಬಲಾಢ್ಯ ರಾಷ್ಟ್ರಗಳಿಂದ ಸಹಾಯ
ಇಂಡೋನೇಷ್ಯಾದ ಸಬ್‌ಮರಿನ್ ಹುಡುಕಲು ಜಗತ್ತಿನ ಬಲಾಢ್ಯ ರಾಷ್ಟ್ರಗಳು ಸಹಾಯ ಹಸ್ತ ಚಾಚಿವೆ. ನೀರಿನ ಒಳಗೆ ಶಬ್ದ ಗ್ರಹಿಸುವ ಸುಸಜ್ಜಿತವಾದ ಆಸ್ಟ್ರೇಲಿಯಾ ಯುದ್ಧ ನೌಕೆ ಸಹಿತ ಇಂಡೋನೇಷ್ಯಾದ ಒಟ್ಟು 24 ನೌಕೆಗಳು ಶೋಧ ಕಾರ್ಯದಲ್ಲಿ ತೊಡಗಿವೆ.
ಭಾರತ, ಸಿಂಗಪುರ, ಮಲೇಷ್ಯಾ ಮತ್ತು ಅಮೆರಿಕ ಕೂಡ ಶೋಧ ಕಾರ್ಯದಲ್ಲಿ ನೆರವಾಗಲು ಮುಂದಾಗಿದೆ. ಮತ್ತೊಂದ್ಕಡೆ ತಮ್ಮ ಕುಟುಂಬದ ಸದಸ್ಯರು ವಾಪಸ್ ಬರಲಿದ್ದಾರೆ ಎಂಬ ವಿಶ್ವಾಸದಲ್ಲಿ ನಾವಿಕರ ಮನೆಯವರು ಕಾಯುತ್ತಿದ್ದಾರೆ. ಆದರೆ ಶೋಧ ಕಾರ್ಯಾದಲ್ಲೂ ಈಗ ಶೋಕ ಮಡುಗಟ್ಟಿದ್ದು, ನಾವಿಕರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

ಸಬ್‌ಮರಿನ್‌ಗಳು ಯುದ್ಧದಲ್ಲಿ ನಂ. 1
ಜಲಾಂತರ್ಗಾಮಿ ಅಥವಾ ಸಬ್‌ಮರಿನ್‌ಗಳು ಯುದ್ಧದಲ್ಲಿ ನಂಬರ್ 1 ಎನ್ನತ್ತಾರೆ. ಏಕೆಂದರೆ ಯುದ್ಧ ನೌಕೆ ಕೇವಲ ನೀರಿನ ಮೇಲೆ ನಿಂತು ಆರ್ಭಟಿಸಿದರೆ, ಸಬ್‌ಮರಿನ್ಸ್ ನೀರಿನ ಆಳಕ್ಕೆ ನುಗ್ಗಿ ತಾಕತ್ತು ಪ್ರದರ್ಶಿಸುತ್ತವೆ. ಅದರಲ್ಲೂ ಮಹಾಯುದ್ಧಗಳ ಸಂದರ್ಭದಲ್ಲಿ ಸಬ್‌ಮರಿನ್‌ಗಳೇ ಬಹುದೊಡ್ಡ ಪಾತ್ರ ನಿರ್ವಹಿಸಿದ್ದವು.
ಹಾಗೇ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳು ಸಮುದ್ರದ ಮೇಲೆ ಹೋರಾಟಕ್ಕೆ ಈಗಲೂ ನಂಬುವುದು ಸಬ್‌ಮರಿನ್‌ಗಳನ್ನೇ. ಅದರಲ್ಲೂ ಇಂಡೋನೇಷ್ಯಾದಂತಹ ದ್ವೀಪ ರಾಷ್ಟ್ರಗಳಿಗೆ ಸಬ್‌ಮರಿನ್‌ಗಳು ಅತ್ಯಗತ್ಯ. ಆದರೆ ಈ ದುರಂತ ಇಂಡೋನೇಷ್ಯಾ ಸೇನೆಯನ್ನ ದಂಗುಬಡಿಸಿದೆ.

ಹಿಟ್ಲರ್ ಆರ್ಭಟಿಸಿದ್ದು ಇದೇ ಕಾರಣಕ್ಕೆ..!
ಜಗತ್ತನ್ನೇ ತನ್ನ ಮುಷ್ಟಿಯಲ್ಲಿಡಿದು ಆಡಿಸಬೇಕೆಂಬ ಕನಸು ಕಂಡಿದ್ದ ಕ್ರೂರ ಸರ್ವಾಧಿಕಾರಿ ಹಿಟ್ಲರ್ ಆರ್ಭಟ ನಡೆಸಿದ್ದು ಇದೇ ಸಬ್‌ಮರಿನ್‌ಗಳ ಸಹಾಯದಿಂದ. ಅಮೆರಿಕ ಸೇರಿದಂತೆ ಇಂಗ್ಲೆಂಡ್ ಹಾಗೂ ಮಿತ್ರಪಡೆಗಳ ಪಾಲಿಗೆ ಹಿಟ್ಲರ್‌ನ ಸಬ್‌ಮರಿನ್‌ಗಳು ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದವು.

ಸಬ್‌ಮರೀನ್‌ಗಳು ಸಮುದ್ರ ಆಳುವ ಶಕ್ತಿ ಹೊಂದಿದ್ದರು
ಅಮೆರಿಕದಿಂದ ಸರಕು ಯುರೋಪ್‌ಗೆ ಬರಬೇಕು ಎಂದಿದ್ದರೆ, ಮೊದಲಿಗೆ ಹಿಟ್ಲರ್‌ನ ಸಬ್‌ಮರಿನ್ ದಾಳಿ ಎದುರಿಸಬೇಕಾದ ಅನಿವಾರ್ಯತೆ ಅಂದು ಸೃಷ್ಟಿಯಾಗಿತ್ತು. ಹೀಗೆ ಸಬ್‌ಮರೀನ್‌ಗಳು ಸಮುದ್ರ ಆಳುವ ಶಕ್ತಿ ಹೊಂದಿದ್ದರು ಕೂಡ ಸ್ವಲ್ಪ ಎಚ್ಚರ ತಪ್ಪಿದರೆ ಘೋರ ದುರಂತಕ್ಕೂ ಕಾರಣವಾಗುತ್ತವೆ. ಈಗ ಇಂಡೋನೇಷ್ಯಾದಲ್ಲೂ ಅದೇ ಆಗಿದೆ.












Click it and Unblock the Notifications