ಕೆಲವೇ ವಾರಗಳಲ್ಲಿ ತಾಲಿಬಾನ್ ಹೊಸ ಆಡಳಿತ ನೀತಿ ಪ್ರಕಟ
ಕಾಬೂಲ್, ಆಗಸ್ಟ್ 21: ಮುಂದಿನ ಕೆಲವೇ ವಾರಗಳಲ್ಲಿ ಅಫ್ಘಾನಿಸ್ತಾನದ ನೂತನ ಆಡಳಿತದ ರೂಪುರೇಷೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವುದಾಗಿ ತಾಲಿಬಾನ್ ಸಂಘಟನೆ ವಕ್ತಾರರು ತಿಳಿಸಿದ್ದಾರೆ.
'ಕಾನೂನು, ಧಾರ್ಮಿಕ ಹಾಗೂ ವಿದೇಶಾಂಗ ನೀತಿ ವ್ಯವಹಾರ ಸಂಬಂಧ ನೂತನ ಆಡಳಿತ ನೀತಿ ನಿಯಮಗಳನ್ನು ಇನ್ನು ಕೆಲವೇ ವಾರಗಳಲ್ಲಿ ರೂಪಿಸಲಿರುವುದಾಗಿ ಎಂದು ತಾಲಿಬಾನ್ ಅಧಿಕಾರಿ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
1996ರಿಂದ 2001ರವರೆಗಿನ ತನ್ನ ಆಡಳಿತದಲ್ಲಿ ತಾಲಿಬಾನ್ ಅತ್ಯಂತ ಕಠಿಣ ನೀತಿಗಳೊಂದಿಗೆ ಆಡಳಿತ ನಡೆಸಿತ್ತು. ಮಹಿಳೆಯರಿಗೆ ಕಠಿಣ ನಿಬಂಧನೆಗಳನ್ನು ಹೇರಿತ್ತು. ಬರೋಬ್ಬರಿ ಇಪ್ಪತ್ತು ವರ್ಷಗಳ ನಂತರ ಅಧಿಕಾರ ಸ್ಥಾಪಿಸಲು ಅಫ್ಘಾನಿಸ್ತಾನ ಆಕ್ರಮಿಸಿಕೊಂಡಿರುವ ತಾಲಿಬಾನ್ ಇನ್ನು ಉದಾರವಾದ ಆಡಳಿತ ನೀಡುವುದಾಗಿ ಕಳೆದ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.

ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಉಗ್ರ ಸಂಘಟನೆಯು ಸರ್ಕಾರ ರಚಿಸುವುದು ಯಾವಾಗ ಎಂಬ ಪ್ರಶ್ನೆಗಉ ಶುಕ್ರವಾರ ಹುಟ್ಟಿಕೊಂಡಿದ್ದವು. ಯುಎಸ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದದಂತೆ ಯುಎಸ್ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವವರೆಗೂ ಅಂದರೆ ಆಗಸ್ಟ್ 30ರವರೆಗೂ ಯಾವುದೇ ರೀತಿ ಸರ್ಕಾರ ರಚನೆಯ ಪ್ರಕ್ರಿಯೆಗಳನ್ನು ನಡೆಸುವುದಿಲ್ಲ ಎಂದು ಮೂಲಗಳು ತಿಳಿಸಿದ್ದವು.
ಯುಎಸ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಅಂತಿಮ ವಾಪಸಾತಿ ದಿನಾಂಕ ಮುಗಿಯುವವರೆಗೂ ತಾಲಿಬಾನ್ ಸಂಘಟನೆ ಬಂಡಾಯಕಾರರು ಯಾವುದೇ ರೀತಿ ಕಾರ್ಯಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದು ತಾಲಿಬಾನ್ ಮತ್ತು ಹಿಂದಿನ ಸರ್ಕಾರದ ನಡುವೆ ಸಂಧಾನಕಾರರಾದ ಅನಾಸ್ ಹಕ್ಕಾನಿ ತಿಳಿಸಿದ್ದರು.

20 ವರ್ಷಗಳ ನಂತರ ಅಫ್ಘಾನ್‌ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಇದೀಗ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದಾರೆ. ಆನಂತರ ಎಲ್ಲೆಲ್ಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ತಾಲಿಬಾನ್ ಸಂಘಟನೆ, ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ ಎಂದು ಹೇಳಿತ್ತು.
ದೇಶವನ್ನು ಉದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, "ಈ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು. ಅವರಿಗೆ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನೆರೆಹೊರೆಯ ರಾಷ್ಟ್ರಗಳ ವಿರುದ್ಧ ದುಷ್ಕೃತ್ಯ ಎಸಗಲು ನಮ್ಮ ನೆಲವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ. ಕಾಬೂಲ್‌ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ಅಂತರಾಷ್ಟ್ರೀಯ ಸಮುದಾಯವು ನಮ್ಮ ಸರ್ಕಾರವನ್ನು ಗುರುತಿಸಬೇಕು" ಎಂದು ಹೇಳಿದ್ದರು.
ಮಹಿಳೆಯರ ಹಕ್ಕುಗಳ ರಕ್ಷಣೆ ಮಾಡುತ್ತೇವೆ ಎಂದ ತಾಲಿಬಾನ್
"ಇಸ್ಲಾಮಿಕ್ ಕಾನೂನುಗಳ ವ್ಯಾಪ್ತಿಯಲ್ಲಿ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗೆ ತಾಲಿಬಾನ್ ಸಂಘಟನೆಯು ಆದ್ಯತೆ ನೀಡುತ್ತದೆ. ಸಮಾಜದಲ್ಲಿ ಮಹಿಳೆಯರು ಸ್ವತಂತ್ರರಾಗಿ ಕಾರ್ಯ ಚಟುವಟಿಕೆಗಳಿಂದ ಇರಬೇಕು, ಆದರೆ ಅದು ಇಸ್ಲಾಮಿಕ್ ಪರಧಿಯನ್ನು ಮೀರುವಂತಿಲ್ಲ. ನಮ್ಮ ರಾಷ್ಟ್ರವು ಮುಸ್ಲಿಂ ರಾಷ್ಟ್ರ. ಆದರೆ 20 ವರ್ಷಗಳ ಹಿಂದಿನ ಪರಿಸ್ಥಿತಿಗೂ ಇಂದಿನ ಸ್ಥಿತಿಗತಿಗೂ ತುಂಬಾ ವ್ಯತ್ಯಾಸವಿದೆ. ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ನಂತರದಲ್ಲಿ ಕಾನೂನುಗಳ ಬಗ್ಗೆ ಮಾತನಾಡಲಾಗುವುದು," ಎಂದಿದ್ದರು.












Click it and Unblock the Notifications