
ಬುರ್ಖಾ ಧರಿಸದ ವಿದ್ಯಾರ್ಥಿನಿಯರನ್ನು ಅಫ್ಘಾನ್ ವಿವಿಯಿಂದ ಹೊರಗಿಟ್ಟ ತಾಲಿಬಾನಿಗಳು
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಹಿಳೆಯರ ಶಿಕ್ಷಣ ವ್ಯವಸ್ಥೆ ಕುಗ್ಗಿ ಹೋಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡಿರುವ ತಾಲಿಬಾನಿಗಳು ಯಾವ ಪ್ರತಿಭಟನೆಗಳಿಗೂ ಬಗ್ಗುತ್ತಿಲ್ಲ. ಯಾರ ಒತ್ತಡಕ್ಕೂ ತಲೆ ಬಾಗುತ್ತಿಲ್ಲ. ಇತ್ತೀಚೆಗೆ ಅಂಥಹದ್ದೇ ಘಟನೆ ಬೆಳಕಿಗೆ ಬಂದಿದೆ. ಬುರ್ಖಾ ಧರಿಸದ ಕಾರಣ ವಿಶ್ವವಿದ್ಯಾಲಯಕ್ಕೆ ಪ್ರವೇಶ ನಿರಾಕರಿಸಿದ ತಾಲಿಬಾನ್ ಅಧಿಕಾರಿಯೊಬ್ಬ ತಮ್ಮ ಶಿಕ್ಷಣದ ಹಕ್ಕಿಗಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರನ್ನು ಥಳಿಸುವ ಆಘಾತಕಾರಿ ದೃಶ್ಯಗಳು ಹೊರಬಂದಿವೆ.
ವಿದ್ಯಾರ್ಥಿನಿಯರ ಮೇಲೆ ಚಾಟಿ ಬೀಸುತ್ತಿರುವ ಅಧಿಕಾರಿ ತಾಲಿಬಾನ್ ಸರ್ಕಾರದ ಉಪ ಸಚಿವಾಲಯಕ್ಕೆ ಸೇರಿದವರು ಎಂದು ಇಂಡಿಪೆಂಡೆಂಟ್‌ನಲ್ಲಿ ವರದಿಯಾಗಿದೆ. ಈ ಘಟನೆಯು ಈಶಾನ್ಯ ಅಫ್ಘಾನಿಸ್ತಾನದ ಬಡಾಕ್ಷನ್ ವಿಶ್ವವಿದ್ಯಾಲಯದ ಗೇಟ್‌ಗಳ ಹೊರಗೆ ಭಾನುವಾರ ನಡೆದಿದೆ ಎಂದು ಔಟ್‌ಲೆಟ್ ತನ್ನ ವರದಿಯಲ್ಲಿ ತಿಳಿಸಿದೆ.
ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು: ನೇತ್ರದಾನ ಮಾಡಿದ ಪೋಷಕರು
ತಾಲಿಬಾನ್ ಸರ್ಕಾರಿ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯರನ್ನು ಚದುರಿಸಲು ಚಾಟಿ ಬೀಸುವುದನ್ನು ವಿಡಿಯೋ ತೋರಿಸುತ್ತದೆ. ಹತ್ತಾರು ವಿದ್ಯಾರ್ಥಿನಿಯರು ವಿಶ್ವವಿದ್ಯಾನಿಲಯದ ಗೇಟ್‌ಗಳನ್ನು ಪ್ರವೇಶಿಸಲು ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಗೇಟ್ ಬಡಿಯುತ್ತಿದ್ದರು. ಬಳಿಕ ಗೇಟ್‌ನಿಂದ ಹೊರಬಂದ ಅಧಿಕಾರಿ ವಿದ್ಯಾರ್ಥಿನಿಯರ ಮೇಲೆ ಚಾಟಿ ಬೀಸಿದ್ದಾನೆ.
Taliban beat female students
— Panjshir_Province (@PanjshirProvin1) October 30, 2022
Even though the girls are wearing hijabs, why are they not allowed to enter the university?
The #Taliban want to close the universities for #Female students.
Today the the Taliban didn’t allow female students to enter university. #Badakhshan pic.twitter.com/xXmZ8eDolH
ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡ ತಾಲಿಬಾನ್ ಮಹಿಳೆಯರ ಚಲನೆ, ಮಾತು, ಕೆಲಸದ ಅವಕಾಶಗಳು ಮತ್ತು ಉಡುಪಿನ ಸ್ವಾತಂತ್ರ್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿದೆ. ಆರನೇ ತರಗತಿಯಿಂದ ಹುಡುಗಿಯರು ಶಾಲೆಗೆ ಹೋಗುವುದನ್ನು ತಾಲಿಬಾನಿಗಳು ನಿರ್ಬಂಧಿಸಿದ್ದಾರೆ.

ಮಹಿಳೆಯರು ಧರಿಸಬೇಕಾದ ಉಡುಪು ನಿಖಾಬ್
ತಾಲಿಬಾನ್‌ನ ಉಪ ಮತ್ತು ಸದ್ಗುಣ ಸಚಿವಾಲಯ ಸಾರ್ವಜನಿಕವಾಗಿ ಮಹಿಳೆಯರು ಧರಿಸಬೇಕಾದ ಉಡುಪನ್ನು ಸೂಚಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಕಡ್ಡಾಯವಾಗಿ ನಿಖಾಬ್ (ತಲೆ ಮತ್ತು ಮುಖವನ್ನು ಮುಚ್ಚುವ ಮುಸುಕು ಆದರೆ ಕಣ್ಣುಗಳಲ್ಲ) ಅಥವಾ ಬುರ್ಖಾವನ್ನು ಧರಿಸಬೇಕು. ಆದರೆ ಈ ಆದೇಶದ ವಿರುದ್ಧ ಮಹಿಳೆಯರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಜೊತೆಗೆ ಶಿಕ್ಷಣ ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾನಿಲಯದ ಅಧ್ಯಕ್ಷ ನಖಿಬುಲ್ಲಾ ಖಾಜಿಝಾದ ಅವರು ಸ್ಥಳೀಯ ಮಾಧ್ಯಮ ಖಮ್ಮ ಪ್ರೆಸ್‌ಗೆ ಮಾತನಾಡಿ, ಭಯೋತ್ಪಾದಕ ಸಂಘಟನೆಯ ಹಿಂಸಾಚಾರ ಮತ್ತು ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ನಡವಳಿಕೆಯ ಬಗ್ಗೆ ಗಮನಹರಿಸಲಾಗುವುದು ಮತ್ತು ವಿದ್ಯಾರ್ಥಿಗಳ ಕೋರಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿದ್ಯಾರ್ಥಿನಿಯರಿಗೆ ಚಾಟಿ ಏಟು
ತಾಲಿಬಾನ್ ನಡುವಳಿಗೆ ವಿಶೇಷವಾಗಿ ಮಹಿಳೆಯರ ಮೇಲೆ ಅಫ್ಘಾನ್ ವಶಪಡಿಸಿಕೊಂಡಾಗಿನಿಂದಲೂ ಅತ್ಯಂತ ಕ್ರೂರವಾಗಿದೆ. ಪ್ರತಿಭಟನಾ ಮಹಿಳೆಯರನ್ನು ಥಳಿಸುವುದು, ಪ್ರತಿಭಟನೆಗಳಿಗೆ ಅಡ್ಡಿಪಡಿಸುವುದು, ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಳ್ಳುವುದು, ಇಂತಹ ದೃಶ್ಯಗಳನ್ನು ವರದಿ ಮಾಡುವ ಪತ್ರಕರ್ತರನ್ನು ಬಂಧಿಸಿ ಹಿಂಸಿಸುವ ಕೃತ್ಯಗಳು ಮಾಡಿಕೊಂಡು ಬರಲಾಗಿದೆ. ಮಾತ್ರವಲ್ಲದೆ ತಾಲಿಬಾನ್ ಅನಧಿಕೃತ ಪ್ರತಿಭಟನೆಗಳನ್ನು ನಿಷೇಧಿಸಿದೆ.
ಗಮನಾರ್ಹವಾಗಿ ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಆಫ್ಘನ್ ಸರ್ಕಾರದ ಪತನ ಮತ್ತು ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ತುಂಬಾ ಹದಗೆಟ್ಟಿದೆ.

ಹೇಳಿದು ಒಂದು ಮಾಡುತ್ತಿರುವುದು ಇನ್ನೊಂದು
ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ ತಾಲಿಬಾನ್ ಹೇಳಿದ ಒಂದೊಂದು ಮಾತು ಈ ವೇಳೆ ನೆನಪಿಗೆ ಬಾರದಿರುವುದು. ಆರಂಭದಲ್ಲಿ ತಾನು ಹಿಂಸಾಚಾರವನ್ನು ಬಯಸುವುದಿಲ್ಲ. ಮಹಿಳೆಯರ ಹಕ್ಕನ್ನು ಕಿತ್ತುಕೊಳ್ಳಲಾಗುವುದಿಲ್ಲ ಎಂಬ ಭರವಸೆ ನೀಡಿದ್ದ ತಾಲಿಬಾನ್ ಸದ್ಯ ಮತ್ತೆ ತನ್ನ ಹಳೆ ವರಸೆಯನ್ನು ಶುರು ಮಾಡಿದೆ.
ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಬಳಿಕ ಮತ್ತೆ ತಾಲಿಬಾನ್ ಆಡಳಿತ ಆರಂಭವಾಗಿದೆ. ತಾನು ಹಿಂಸಾಚಾರ ಬಯಸುವುದಿಲ್ಲ. ತನ್ನ ಆಡಳಿತದಲ್ಲಿ ಕಾಬೂಲ್‌ನಲ್ಲಿ ಯಾವುದೇ ನಾಗರಿಕ ಗಾಯಗೊಳ್ಳುವುದು ಅಥವಾ ಸಾಯುವುದನ್ನು ಕೂಡ ಬಯಸುವುದಿಲ್ಲ ಎನ್ನುವ ಮೂಲಕ ತಾಲಿಬಾನ್ ಶಾಂತಿ ಮಂತ್ರ ಜಪಿಸಿತ್ತು. ಅಷ್ಟೇ ಅಲ್ಲ, ಅನೇಕ 'ಸ್ವಾತಂತ್ರ್ಯ' ಮತ್ತು 'ಹಕ್ಕು'ಗಳ ಬಗ್ಗೆಯೂ ಮಾತನಾಡಿತ್ತು. ಎಲ್ಲ ಆಫ್ಘನ್ನರ ಪಾಲ್ಗೊಳ್ಳುವಿಕೆಯೂ ಇರುವಂತಹ ಅಫ್ಘಾನಿಸ್ತಾನ ಸರ್ಕಾರವನ್ನು ನೀಡುವುದಾಗಿ ತಾಲಿಬಾನ್ ಹೇಳಿತ್ತು.

ತಾಲಿಬಾನ್ ಹೇಳಿದ್ದೇನು?
ಮಹಿಳೆಯರ ಹಕ್ಕುಗಳನ್ನು ಗೌರವಿಸಲಿದ್ದೇವೆ. ಅವರು ಪುರುಷರ ರಕ್ಷಣೆ ಇಲ್ಲದೆ ಮನೆಯಿಂದ ಒಬ್ಬರೇ ಹೊರಬರಲು ಅವಕಾಶ ನೀಡಲಾಗುವುದು. ಮಹಿಳೆಯರು ಶಿಕ್ಷಣ ಪಡೆಯುವುದು ಮತ್ತು ಉದ್ಯೋಗಕ್ಕೆ ಹೋಗುವ ಹಕ್ಕು ಹೊಂದಿದ್ದಾರೆ ಎನ್ನುವುದು ನಮ್ಮ ನೀತಿ. ಅವರು ಹಿಜಾಬ್ ಧರಿಸುವ ಅಧಿಕಾರ ಹೊಂದಿದ್ದಾರೆ. ಅಪರಾಧಿಗಳಿಗೆ ಮರಣದಂಡನೆ, ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುವುದು ಮತ್ತು ಅಂಗಚ್ಛೇದನದಂಥ ಶಿಕ್ಷೆಗಳು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಯಾರನ್ನು ಬೇಕಾದರೂ ಟೀಕಿಸಲು ಮಾಧ್ಯಮಕ್ಕೆ ಅವಕಾಶ ನೀಡಲಾಗುವುದು. ಆದರೆ ಯಾರದ್ದೇ ವೈಯಕ್ತಿಕ ತೇಜೋವಧೆ, ಚಾರಿತ್ರ್ಯ ಹರಣ ಮಾಡುವಂತಿಲ್ಲ. ಕಾಬೂಲ್ ಆಸ್ಪತ್ರೆಗಳು, ತುರ್ತು ಸೇವೆಗಳಿಗೆ ತಡೆ ನೀಡುವುದಿಲ್ಲ. ಕಾಬೂಲ್‌ನಲ್ಲಿನ ವಿದೇಶಿಗರು ತಾವು ಬಯಸಿದರೆ ಹೊರ ಹೋಗಬಹುದು. ಅಥವಾ ಮುಂದಿನ ದಿನಗಳಲ್ಲಿ ತಮ್ಮ ಹಾಜರಾತಿ ಬಗ್ಗೆ ತಾಲಿಬಾನ್ ಸರ್ಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದಿತ್ತು. ಆದರೀಗ ಅದೆಲ್ಲವೂ ಉಲ್ಟಾ ಹೊಡೆದಿದೆ.ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋ ಗಾದೆಯನ್ನು ತಾಲಿಬಾನ್ ನಿಜ ಮಾಡಿದೆ.