Taliban Rules: 3ನೇ ತರಗತಿಗಿಂತ ಜಾಸ್ತಿ ಓದಬೇಡಿ ಎಂದ ತಾಲಿಬಾನ್!
ಕಾಬೂಲ್: ಉಗ್ರರ ಬಲೆಯಲ್ಲಿ ಸಿಲುಕಿ ನಲುಗಿರುವ ಅಫ್ಘಾನಿಸ್ತಾನ ಜನಕ್ಕೆ ಅಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಕ್ಷಣಕ್ಕೊಂದು ಶಾಕ್ ನೀಡುತ್ತಿದೆ. ಇತ್ತೀಚೆಗೆ ಬ್ಯೂಟಿ ಪಾರ್ಲರ್ ನಿಷೇಧ ಮಾಡಿ ಆದೇಶ ಹೊರಡಿಸಿದ್ದ ತಾಲಿಬಾನಿಗಳು, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವ ನಿರ್ಧಾರಕ್ಕೆ ಕೈಹಾಕಿದ್ದಾರೆ.
ಮೊದಲಿಂದ ತಾನು ಮಹಿಳೆಯರ ವಿರೋಧಿ ಅಂತಾ ಗುರುತಿಸಿಕೊಂಡಿರುವ ತಾಲಿಬಾನಿಗಳ ಸರ್ಕಾರ, ಮತ್ತೊಂದು ಮಹಿಳಾ ವಿರೋಧಿ ನಿರ್ಧಾರ ಕೈಗೊಂಡಿದೆ. ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯ ಕಿತ್ತುಕೊಂಡಿದೆ. ಈಗ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ 10 ವರ್ಷ ಮೇಲ್ಪಟ್ಟ ಬಾಲಕಿಯರು ಶಾಲೆಗೆ ಹಾಜರಾಗುವುದನ್ನ ನಿಷೇಧಿಸಿ ತಾಲಿಬಾನ್ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ. 3ನೇ ತರಗತಿ ಮೇಲ್ಪಟ್ಟ ಶಿಕ್ಷಣವನ್ನ ಬಾಲಕಿಯರಿಂದ ಕಸಿದುಕೊಂಡಿದ್ದು, ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನೇ ಹೊಸಕಿ ಹಾಕಿದೆ ತಾಲಿಬಾನ್.

ತಾಲಿಬಾನಿಗಳಿಗೆ ಮಹಿಳೆಯರ ಮೇಲೆ ದ್ವೇಷ?
ಇಷ್ಟು ಮಾತ್ರವಲ್ಲ 2022ರ ಡಿಸೆಂಬರ್‌ನಲ್ಲಿ ತಾಲಿಬಾನ್ ಸರ್ಕಾರವು, ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು. ಇದನ್ನು ಖಂಡಿಸಿ ಅಫ್ಘಾನಿಸ್ತಾನ ಮಹಿಳೆಯರು ತೀವ್ರ ಹೋರಾಟ ನಡೆಸಿದರು. ಅಲ್ಲದೇ ತಾಲಿಬಾನಿ ಸರ್ಕಾರದ ಕ್ರಮವನ್ನ ಜಗತ್ತು ಮತ್ತು ವಿಶ್ವಸಂಸ್ಥೆ ಖಂಡಿಸಿತ್ತು. ಇಷ್ಟೆಲ್ಲಾ ಘಟನೆ ಹಸಿಯಾಗಿ ಇರುವಾಗಲೇ ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದ ತಾಲಿಬಾನ್ ಶಿಕ್ಷಣ ಸಚಿವಾಲಯ 10 ವರ್ಷ ಮೇಲ್ಪಟ್ಟ ಬಾಲಕಿಯರಿಗೆ ಪ್ರಾಥಮಿಕ ಶಾಲೆಗಳ ಶಿಕ್ಷಣವನ್ನೇ ಕಸಿದು ಕೊಂಡಿದೆ. ಈ ಬಗ್ಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಆದೇಶ ಹೊರಡಿಸಿದೆ. ಈಗಾಗಲೇ ಓದುತ್ತಿರುವ 10 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರನ್ನು ತಕ್ಷಣ ಮನೆಗೆ ಕಳುಹಿಸಿ ಎಂದು ಆದೇಶ ನೀಡಲಾಗಿದೆ.
ಬಡ ಮಹಿಳೆಯರ ಬದುಕು ಕಷ್ಟ ಕಷ್ಟ
ತಾಲಿಬಾನಿ ಸರ್ಕಾರ ಮಾಡುತ್ತಿರುವ ರೂಲ್ಸ್ ಒಂದಲ್ಲ.. ಎರಡಲ್ಲ.. ಇವರ ನಿರ್ಧಾರ ಅಲ್ಲಿನ ಜನರ ಜೀವ ಹಿಂಡುತ್ತಿದೆ. ಹಿಂದೆ ಮಹಿಳೆಯರು ರೆಸ್ಟೋರೆಂಟ್‌ಗಳಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ನಿಷೇಧ ಮಾಡಿತ್ತು. ಹಾಗೇ ಯುವತಿಯರು ಶಾಲೆ ಅಥವಾ ಕಾಲೇಜುಗಳಿಗೆ ಹೋಗುವದನ್ನೂ ಬ್ಯಾನ್ ಮಾಡಿತ್ತು. ಇದನ್ನು ಬಿಡಿ ಹೆಣ್ಣುಮಕ್ಕಳು ಇಲ್ಲಿ ನೆಮ್ಮದಿಯಾಗಿ ಪಾರ್ಕ್ ಕಡೆಗೂ ಹೋಗುವಂತೆ ಇರಲಿಲ್ಲ. ಇದರ ಜೊತೆಗೆ ಮಹಿಳೆಯರು ಬ್ಯೂಟಿ ಪಾರ್ಲರ್‌ಗೆ ಹೋಗುವಂತಿಲ್ಲ ಎಂಬ ತಾಲಿಬಾನಿಗಳ ಆದೇಶದಿಂದ ಮೇಕಪ್ ಕಲಾವಿದರು ನಲುಗಿದ್ದರು. ಆ ಘಟನೆಗಳು ಮಾಸುವ ಮುನ್ನ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗೂ ಕೊಡಲಿ ಪೆಟ್ಟು ಬಿದ್ದಿದೆ.

ತಾಲಿಬಾನಿಗಳಿಗೆ ಮಹಿಳೆಯರೇ ಟಾರ್ಗೆಟ್!
ಮಹಿಳೆಯರ ಮೇಲೆ ದಿನಕ್ಕೊಂದು ನಿಷೇಧ ಹೇರುತ್ತಿರುವ ತಾಲಿಬಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೂ ಗುರಿಯಾಗಿದೆ. ಆದರೆ ಇದಕ್ಕೆಲ್ಲ ಅವರು ಕೇರ್ ಮಾಡುತ್ತಿಲ್ಲ. ಈ ಕಾರಣಕ್ಕೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತಿದೆ. ಅಮೆರಿಕ ಯಾವಾಗ ತಾಲಿಬಾನಿ ಕೈಯಲ್ಲಿ ಅಫ್ಘಾನಿಸ್ತಾನವನ್ನು ಬಿಟ್ಟು ಹೋಯ್ತೋ ಆಗಿನಿಂದಲೇ ಶುರುವಾಗಿದ್ದು ಕಿತ್ತಾಟ. ಅಂದಿನಿಂದ ಇಂದಿನ ತನಕ ಅಲ್ಲಿನ ಜನರಿಗೆ ನೆಮ್ಮದಿ ಇಲ್ಲ, ನೆಮ್ಮದಿಯಾಗಿ ಜೀವನವನ್ನು ಮಾಡಲು ಆಗುತ್ತಿಲ್ಲ. ಹೀಗಾಗಿಯೇ ದಿನದಿಂದ ದಿನಕ್ಕೆ ಜನರು ಪರದಾಡುತ್ತಿದ್ದಾರೆ.

2021ರಲ್ಲಿ ಹೊರಬಂದಿದ್ದ ಅಮೆರಿಕ ಸೇನೆ
ಅಷ್ಟಕ್ಕೂ ಸುಮಾರು 20 ವರ್ಷ ಸುದೀರ್ಘ ಹೋರಾಟದ ಬಳಿಕ 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಅಧ್ಯಕ್ಷ ಜೋ ಬೈಡನ್ ಆಗಿನ ಸಮಯಕ್ಕೆ 2021ರ ಆಗಸ್ಟ್ 31ನ್ನು ಡೆಡ್‌ಲೈನ್ ಆಗಿ ನೀಡಿ, ಅಮೆರಿಕದ ಸಂಪೂರ್ಣ ಸೇನೆ ಹೊರಗೆ ಕರೆಸಿಕೊಂಡರು. ಅಷ್ಟೇ ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಅಲ್ಲಿ ಜನಕ್ಕೆ ನೆಮ್ಮದಿಯಾಗಿ ಬದುಕು ಹಕ್ಕು ಕೂಡ ಇಲ್ಲ ಮಹಿಳೆಯರು ಹೊರಗೆ ಬರುವ ಹಕ್ಕು ಕೂಡ ಇಲ್ಲ. ಹೀಗೆ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಆಡಳಿತಕ್ಕೆ ಸಿಲುಕಿ ನರಳುತ್ತಿದ್ದು, ಇಡೀ ದೇಶವೇ ಅಕ್ಷರಶಃ ಜೈಲಿನ ರೂಪ ಪಡೆದಿದೆ.












Click it and Unblock the Notifications