ಸೋಮಾಲಿಯಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ 17 ಮಂದಿ ಸಾವು
ಸೋಮಾಲಿಯಾದ ರಾಜಧಾನಿ ಮೊಗದಿಶುನಲ್ಲಿರುವ ಅಪರಾಧ ತನಿಖಾ ಇಲಾಖೆ ಕಚೇರಿಯ ಬಳಿ ಹೋಟೆಲ್ ನಲ್ಲಿ ಎರಡು ಕಾರಿನಲ್ಲಿ ಬಂದ ಆತ್ಮಹತ್ಯಾ ಬಾಂಬ್ ದಾಳಿಕೋರರು ಶುಕ್ರವಾರ ಸ್ಫೋಟಗೊಂಡಿದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಫಿ ಹೋಟೆಲ್ ನ ಭದ್ರತಾ ಸಿಬ್ಬಂದಿ ಹಾಗೂ ಸಿಐಡಿ ಅಧಿಕಾರಿಗಳು ಸ್ಫೋಟದ ನಂತರ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದು, ಆ ನಂತರ ಇಪ್ಪತ್ತು ನಿಮಿಷ ಕಳೆದ ಮೇಲೆ ಮೂರನೇ ಸ್ಫೋಟವು ಜನನಿಬಿಡ ಪ್ರದೇಶದಲ್ಲಿ ಆಗಿದೆ ಎಂದು ಮಾಹಿತಿ ದೊರೆತಿದೆ.
"ಈ ವರೆಗೆ ದೊರೆತಿರುವ ಮಾಹಿತಿ ಪ್ರಕಾರ 17 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಅವರೆಲ್ಲ ಸಾರ್ವಜನಿಕ ವಾಹನದಲ್ಲಿ ತೆರಳುತ್ತಿದ್ದರು. ಸಾವಿನ ಸಂಖ್ಯೆ ಖಂಡಿತಾ ಏರುವ ಸಾಧ್ಯತೆ ಇದೆ" ಎಂದು ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಿಐಡಿ ಕಚೇರಿಯ ಎದುರಿಗೇ ಇರುವ ಸಹಫಿ ಹೋಟೆಲ್ ಅನ್ನು ಗುರಿ ಮಾಡಿಕೊಂಡೇ ದಾಳಿ ನಡೆಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ವರೆಗೆ ಯಾವುದೇ ಉಗ್ರ ಸಂಘಟನೆಯು ಕೃತ್ಯದ ಜವಾಬ್ದಾರಿ ಹೊತ್ತುಕೊಂಡಿಲ್ಲ. ಅಲ್ ಕೈದಾ ಇಸ್ಲಾಮಿಕ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಅಲ್ ಶಬಾಬ್ ಗುಂಪು ಸೋಮಾಲಿಯಾ ರಾಜಧಾನಿಯಲ್ಲಿ ದಾಳಿಗಳು ನಡೆಸುತ್ತಿರುವುದು ಹೆಚ್ಚಾಗುತ್ತಲೇ ಇದೆ.












Click it and Unblock the Notifications