ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ದಾಳಿಗೆ ಕನಿಷ್ಠ 32 ಮಂದಿ ಬಲಿ
ಪೂರ್ವ ಅಫ್ಘಾನಿಸ್ತಾನದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಂಗರ್ ಹಾರ್ ಪ್ರಾಂತ್ಯದಲ್ಲಿ ನಡೆದ ಈ ದಾಳಿಯಲ್ಲಿ 128ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಈ ಆತ್ಮಹತ್ಯಾ ದಾಳಿ ನಡೆದಿದೆ.
ಗುಲ್ ಮಜಿದ್ ಎಂಬುವವರು ಈ ಬಗ್ಗೆ ಮಾತನಾಡಿ, ಈ ಪ್ರಾಂತ್ಯದ ರಾಜಧಾನಿ ಜಲಾಲಬಾದ್ ಹಾಗೂ ಪಾಕಿಸ್ತಾನದ ಮುಖ್ಯ ಗಡಿಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದೊಡ್ಡದಾಗಿ ಬಾಂಬ್ ಸದ್ದು ಕೇಳಿತು. ಆ ನಂತರ ನನ್ನ ಸುತ್ತ ಮಾಂಸ, ರಕ್ತ ಹಾಗೂ ಗಾಯಗೊಂಡ ಜನರೇ ಇದ್ದರು. ಈಗಲೂ ನನ್ನ ಸ್ನೇಹಿತರಿಗಾಗಿ ಹುಡುಕಾಡುತ್ತಿದ್ದೇನೆ. ಅವರು ಜೀವಂತ ಇದ್ದಾರೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ.
ಸ್ಥಳೀಯ ಪೊಲೀಸ್ ಮುಖ್ಯಸ್ಥರ ನೇಮಕ ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಈ ಆತ್ಮಹತ್ಯಾ ದಾಳಿಗೂ ಮುನ್ನ ಜಲಾಲಬಾದ್ ನಲ್ಲಿರುವ ಹೆಣ್ಣುಮಕ್ಕಳ ಶಾಲೆಯ ಮುಂಭಾಗ ಅವಳಿ ಸ್ಫೋಟವಾಗಿತ್ತು. ಅದರಲ್ಲಿ ಬಾಲಕನೊಬ್ಬ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಈ ವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತಿಕೊಂಡಿಲ್ಲ. ಆದರೆ ಈ ಭಾಗದಲ್ಲಿ ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಹೆಚ್ಚು ಕಾರ್ಯನಿರತವಾಗಿವೆ.

ಇತ್ತೀಚಿನ ವಾರಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ದಾಳಿಗಳಲ್ಲಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಯುದ್ಧಭೂಮಿಯಲ್ಲಿ ತಾಲಿಬಾನ್ ಬಡಿದಾಡುತ್ತಿದ್ದರೆ, ನಗರ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಭೀಕರ ದಾಳಿಗಳನ್ನು ನಡೆಸುತ್ತಿದೆ.
ಈಗಾಗಲೇ ಸಾಕಷ್ಟು ತಡವಾಗಿರುವ ಅಫ್ಘಾನಿಸ್ತಾನದ ಸಂಸತ್ ಚುನಾವಣೆ ಅಕ್ಟೋಬರ್ 20ರಂದು ನಿಗದಿಯಾಗಿದೆ. ದೇಶದಾದ್ಯಂತ ಇರುವ ಸಾವಿರಾರು ಮತದಾನ ಕೇಂದ್ರಗಳಿಗೆ ಭದ್ರತೆ ಒದಗಿಸಲು ಸುರಕ್ಷತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇದರ ಜತೆಗೆ ಉಗ್ರರು ಒಳನುಸುಳುವುದನ್ನು ತಡೆಯುವ ಸವಾಲು ಕೂಡ ಎದುರಾಗಿದೆ.
ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಈಗ ಬ್ಯಾಲೆಟ್ ಪೇಪರ್ ಗಳ ರವಾನೆ, ಮತಗಳ ಮೇಲೆ ನಿಗಾ ಮಾಡುವುದೆಲ್ಲ ಪೂರ್ವಭಾವಿ ಪರೀಕ್ಷೆ ಇದ್ದಂತೆ. ಆದ್ದರಿಂದ ಈಗಿನ ಸಂಸತ್ ಚುನಾವಣೆ ಸವಾಲಿನ ಸಂಗತಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಳೆದ ಎರಡು ದಿನದಲ್ಲಿ ಕನಿಷ್ಠ 60 ಮಂದಿ ಭದ್ರತಾ ಸಿಬ್ಬಂದಿಯನ್ನು ತಾಲಿಬಾನ್ ಉಗ್ರರು ಕೊಂದಿದ್ದಾರೆ.












Click it and Unblock the Notifications