ಪತ್ನಿ ಹಂತಕ ಸಿಂಗ್ ಗಾಗಿ ಇಂಟರ್ ಪೋಲ್ ಹುಡುಕಾಟ
ಸಿಂಗಪುರ, ಜ.5: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ತಲೆ ಮರೆಸಿಕೊಂಡಿರುವ ಭಾರತೀಯ ಮೂಲಕ ಹರ್ವೀಂದರ್ ಸಿಂಗ್ ಗಾಗಿ ಸಿಂಗಪುರ ಪೊಲೀಸರು ಹಾಗೂ ಇಂಟರ್ ಪೋಲ್ ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ.
34 ವರ್ಷದ ಭಾರತೀಯ ಮೂಲದ ಹರ್ವೀಂದರ್ ಸಿಂಗ್ ತನ್ನ ಪತ್ನಿ 33 ವರ್ಷದ ಜಸ್ವಿಂದರ್ ಕೌರ್ ಎಂಬುವವರನ್ನು ಬರ್ಬರವಾಗಿ ಕೊಲೆಗೈದು ನಾಪತ್ತೆಯಾಗಿದ್ದಾನೆ. ಸಿಂಗಪುರದಲ್ಲಿ ಜಸ್ವಿಂದರ್ ಕೌರ್ ಅವರು ಬ್ಯೂಟಿಷಿಯನ್ ಆಗಿ ವೃತ್ತಿಯಲ್ಲಿದ್ದರು. ಆಕೆ ಶವ ವಾಂಪೊಹ ನದಿಯಲ್ಲಿ ಕಳೆದ ತಿಂಗಳು ಕಂಡು ಬಂದಿತ್ತು. ತಲೆ, ಕತ್ತು ಕೈಗಳ ಮೇಲೆ ಬಲವಾದ ಗಾಯಗಳಾದ ಗುರುತುಗಳಿತ್ತು. ಜಸ್ವಿಂದರ್ ಹಾಗೂ ಹರ್ವೀಂದರ್ ಇಬ್ಬರು ಹರ್ಯಾಣದ ಕುರುಕ್ಷೇತ್ರ ಮೂಲದವರು ಎಂದು ತಿಳಿದು ಬಂದಿದೆ.
ಜಸ್ವಿಂದರ್ ಕೌರ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗುವ ಅರ್ಧ ಗಂಟೆ ಮೊದಲು ಸಿಂಗಪುರವನ್ನು ಹರ್ವೀಂದರ್ ತೊರೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯಕ್ಕೆ ಜಸ್ವಿಂದರ್ ಕೌರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಶರಣ್ ಕೌರ್(25) ಎಂಬ ಸ್ಥಳೀಯ ಕಾರ್ಮಿಕನೊಬ್ಬನನ್ನು ಬಂಧಿಸಲಾಗಿದೆ. ಲಾಜಿಸ್ಟಿಕ್ ಸಹಾಯಕನಾಗಿ ಹರ್ವೀಂದರ್ ಜತೆ ಈತ ಕೆಲಸ ಮಾಡುತ್ತಿದ್ದ.

ಗುರುಶರಣ್ ಕೌರ್ ಹಾಗೂ ಹರ್ವೀಂದರ್ ಸಿಂಗ್ ಜತೆ ಮತ್ತೊಬ್ಬ ಅನಾಮಿಕ ವ್ಯಕ್ತಿಯೊಬ್ಬ ಜಸ್ವಿಂದರ್ ಕೌರ್ ಅವರನ್ನು ಹತ್ಯೆಗೈದು ನದಿಗೆ ಎಸೆಯಲು ಸಹಾಯ ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಜನವರಿ 17 ರಂದು ಈ ಪ್ರಕರಣದ ವಿಚಾರಣೆ ಸ್ಥಳೀಯ ಕೋರ್ಟಿನಲ್ಲಿ ನಡೆಯಲಿದೆ. ಆರೋಪ ಸಾಬೀತಾದರೆ ಸಿಂಗ್ ಹಾಗೂ ಕೌರ್ ಅವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಸ್ಥಳೀಯ ವಕೀಲರು ಹೇಳಿದ್ದಾರೆ.












Click it and Unblock the Notifications