Breaking news; ಶೆಹಬಾಜ್ ಷರೀಫ್ ಪಾಕ್ ನೂತನ ಪ್ರಧಾನಿ
ಇಸ್ಲಾಮಾಬಾದ್, ಏಪ್ರಿಲ್ 11; ಪಾಕಿಸ್ತಾನದ ನೂತನ ಪ್ರಧಾನಿಯಾಗಿ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಆಯ್ಕೆಯಾದರು. ಪಾಕ್ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ವಿಶ್ವಾಸ ಮತದಲ್ಲಿ ಸೋಲು ಕಂಡು ಪಟ್ಟ ಕಳೆದುಕೊಂಡಿದ್ದರು.
ಸೋಮವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆಯಾದರು. ಅವಿರೋಧವಾಗಿ ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಶೆಹಬಾಜ್ ಷರೀಫ್ ಮತ್ತು ಅವರ ಪುತ್ರನ ಹೆಸರು ಮನಿ ಲಾಂಡ್ರಿಗ್ ಪ್ರಕರಣದಲ್ಲಿ ಕೇಳಿ ಬಂದಿತ್ತು.
ಭಾನುವಾರ ಪಾಕಿಸ್ತಾನ ರಾಜಕೀಯದಲ್ಲಿ ನಡುರಾತ್ರಿ ಹೈಡ್ರಾಮ ನಡೆದಿತ್ತು. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಪರವಾಗಿ 174 ಜನರು ಮತ ಚಲಾವಣೆ ಮಾಡಿದ್ದರು.

ಸೋಮವಾರ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಪಾಕಿಸ್ತಾನದ ರಾಷ್ಟ್ರೀಯ ಸಂಸತ್ ಸಭೆ ಸೇರಿತ್ತು. ಭಾನುವಾರ ವಿಶ್ವಾಸ ಮತದಲ್ಲಿ ಇಮ್ರಾನ್ ಖಾನ್ ಸೋಲು ಕಂಡ ಬಳಿಕ ಹೊಸ ಪ್ರಧಾನಿ ಆಯ್ಕೆಯ ಪ್ರಕ್ರಿಯೆ ಆರಂಭವಾಗಿತ್ತು.
70 ವರ್ಷದ ಶೆಹಬಾಜ್ ಷರೀಫ್ ಪಾಕಿಸ್ತಾನದ ಮೂರು ಬಾರಿಯ ಪ್ರಧಾನಿ ನವಾಝ್ ಷರೀಫ್ ಸಹೋದರ. ಇಮ್ರಾನ್ ಖಾನ್ ಸರ್ಕಾರವನ್ನು ಪತನಗೊಳಿಸುವಲ್ಲಿ ಶೆಹಬಾಜ್ ಪ್ರಮುಖ ಪಾತ್ರವಹಿಸಿದ್ದರು.
ಪಾಕಿಸ್ತಾನದ ಸೇನೆಯ ಜೊತೆ ಶೆಹಬಾಜ್ ಷರೀಫ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಾಕಿಸ್ತಾನದ ವಿದೇಶಾಂಗ ನೀತಿ, ರಕ್ಷಣಾ ನೀತಿ ವಿಚಾರದಲ್ಲಿ ಅವರು ಮೊದಲಿನಿಂದಲೂ ಹಿಡಿತ ಹೊಂದಿದ್ದರು.
ಪಾಕಿಸ್ತಾನದ ಸೇನೆಯ ಜನರಲ್‌ಗಳು ಸರ್ಕಾರವನ್ನು ಪತನಗೊಳಿಸುವ ಕಾರ್ಯದಲ್ಲಿ ಮೊದಲಿನಿಂದಲೂ ಕೈ ಜೋಡಿಸಿದ್ದಾರೆ. 1947ರ ಬಳಿಕ ಯಾವುದೇ ಪ್ರಧಾನಿ ದೇಶದಲ್ಲಿ ಪೂರ್ಣಾವಧಿ ಅಧಿಕಾರ ಅನುಭವಿಸಿಲ್ಲ.












Click it and Unblock the Notifications