ಸರೋವರಕ್ಕೆ ಧುಮುಕಿ 20 ಜನರ ಜೀವ ಉಳಿಸಿದ ರಿಯಲ್ ಹೀರೋ: ಕ್ರೀಡಾ ಜೀವನವನ್ನೇ ಪಣಕ್ಕಿಟ್ಟ ಈಜುಪಟುವಿನ ರೋಚಕ ಸ್ಟೋರಿ
ಜೀವನದಲ್ಲಿ ನಿಜವಾದ ಶೌರ್ಯ ಮತ್ತು ಮಾನವೀಯತೆ ಎಂದರೆ ಏನೆಂಬುದನ್ನು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಿರೂಪಿಸಿದ ಮಹಾನ್ ಸಾಧಕ ಶಾವರ್ಶ್ ಕರಾಪೆಟ್ಯಾನ್. ಇವರು ವಿಶ್ವದ ಪ್ರಸಿದ್ಧ ಫಿನ್‌ಸ್ವಿಮ್ಮರ್ ಎನಿಸಿಕೊಂಡು 11 ವಿಶ್ವ ದಾಖಲೆಗಳು, 17 ವಿಶ್ವ ಚಾಂಪಿಯನ್‌ಷಿಪ್ ಹಾಗೂ 13 ಯುರೋಪಿಯನ್ ಪ್ರಶಸ್ತಿಗಳನ್ನು ಗೆದ್ದ ಕ್ರೀಡಾಪಟು. ಆದರೆ ಅವರ ಇಡೀ ಜೀವನದ ಅತ್ಯಂತ ಶ್ರೇಷ್ಠ ಕ್ಷಣ ಬಂದಿದ್ದು ಯಾವುದೇ ಈಜು ಕೊಳದಲ್ಲಲ್ಲ ಅಥವಾ ಅಪಾರ ಜನಸ್ತೋಮದ ಚಪ್ಪಾಳೆಯ ನಡುವೆಯೂ ಅಲ್ಲ.
ಅಂದು ಶಾವರ್ಶ್ ತಮ್ಮ ಸಹೋದರ ಕಾಮೋ ಜೊತೆಗೂಡಿ ಯೆರೆವಾನ್ ಸರೋವರದ ದಂಡೆಯ ಮೇಲೆ ಸತತ 20 ಕಿಲೋ ಮೀಟರ್ ಸುದೀರ್ಘ ಓಟದ ಅಭ್ಯಾಸವನ್ನು ಮುಗಿಸಿದ್ದರು. ತೀವ್ರ ದಣಿವಿನಲ್ಲಿದ್ದ ಅವರಿಗೆ ದಿಢೀರನೆ ಭೀಕರ ಶಬ್ದವೊಂದು ಕೇಳಿಸಿತು. ಸರೋವರದ ತಡೆಗೋಡೆಯ ಮೇಲಿಂದ ನಿಯಂತ್ರಣ ತಪ್ಪಿದ ಟ್ರಾಲಿಬಸ್‌ವೊಂದು ನೇರವಾಗಿ ಸರೋವರಕ್ಕೆ ಪಲ್ಟಿ ಹೊಡೆದಿತ್ತು.

ಆ ಬಸ್ಸಿನಲ್ಲಿ ಬರೋಬ್ಬರಿ 92 ಪ್ರಯಾಣಿಕರಿದ್ದರು. ದಂಡೆಯಿಂದ ಸುಮಾರು 25 ಮೀಟರ್ ದೂರದಲ್ಲಿ, ಬಸ್ಸು ಬಿದ್ದ ತಕ್ಷಣವೇ 10 ಮೀಟರ್ (ಸುಮಾರು 33 ಅಡಿ) ಆಳದ ನೀರಿನಲ್ಲಿ ಮುಳುಗಿಹೋಯಿತು. ಇದನ್ನು ಗಮನಿಸಿ ಶಾವರ್ಶ್, ಕ್ಷಣಾರ್ಧದಲ್ಲೇ ನೀರಿಗೆ ಜಿಗಿದರು. ಬಸ್ಸು ಬಿದ್ದ ರಭಸಕ್ಕೆ ನೀರಿನೊಳಗೆ ಕೆಸರು ಎದ್ದು ಕಣ್ಣುಗಳಿಗೆ ಏನೂ ಕಾಣದಂತಾಗಿತ್ತು. ರಕ್ಷಣೆಗೆ ಕೇವಲ ಕೆಲವೇ ನಿಮಿಷಗಳ ಕಾಲಾವಕಾಶವಿತ್ತು. ಆದರೂ ಶಾವರ್ಶ್ ಈಜಿ ಕೆಳಗೆ ಹೋಗಿ, ಬಸ್ಸಿನ ಹಿಂಬದಿಯ ಗಾಜನ್ನು ತಮ್ಮ ಕಾಲುಗಳಿಂದ ಬಲವಾಗಿ ಒಡೆದರು.
20ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ ರಿಯಲ್ ಹೀರೋ
ಬಸ್ಸಿನಲ್ಲಿದ್ದ ಪ್ರತಿಯೊಬ್ಬರನ್ನು ರಕ್ಷಣೆ ಮಾಡಿ ಮೇಲೆ ತರಲು ಅವರಿಗೆ ಸಿಗುತ್ತಿದ್ದದ್ದು ಕೇವಲ 30 ರಿಂದ 35 ಸೆಕೆಂಡುಗಳು ಮಾತ್ರ. ಗಾಜಿನ ಚೂರುಗಳು ಮೈಯನ್ನೆಲ್ಲಾ ಇರಿದು ರಕ್ತ ಹರಿಯುತ್ತಿದ್ದರೂ, ಹೆಪ್ಪುಗಟ್ಟುವಂತಹ ಕೊರೆಯುವ ಚಳಿಯಿದ್ದರೂ ಅವರು ನಿಲ್ಲಲಿಲ್ಲ. ಮೇಲೆ ಕಾಯುತ್ತಿದ್ದ ಸಹೋದರ ಕಾಮೋ ಜನರನ್ನು ದಂಡೆಗೆ ತಲುಪಿಸಲು ನೆರವಾದರು. ರಕ್ಷಣಾ ಸಿಬ್ಬಂದಿ ಬರುವಷ್ಟರಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಜನರ ಪ್ರಾಣವನ್ನು ಶಾವರ್ಶ್ ರಕ್ಷಿಸಿದ್ದರು.
45 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ
ಸುದೀರ್ಘ ಕಾರ್ಯಾಚರಣೆಯ ನಂತರ ಶಾವರ್ಶ್ ಅವರ ದೇಹ ಸಂಪೂರ್ಣವಾಗಿ ತಣ್ಣಗಾಗಿ ಪ್ರಜ್ಞೆ ತಪ್ಪಿದರು. ರಕ್ತಸ್ರಾವ ಹಾಗೂ ಕೊರೆಯುವ ನೀರಿನ ತಂಪಿನಿಂದಾಗಿ ಅವರು ಸುಮಾರು 45 ದಿನಗಳ ಕಾಲ ಸಾವು-ಬದುಕಿನ ನಡುವೆ ಕೋಮಾದಲ್ಲಿದ್ದರು. ಈ ಘಟನೆ ಅವರ ಅದ್ಭುತ ಕ್ರೀಡಾ ಜೀವನಕ್ಕೆ ಶಾಶ್ವತ ವಿರಾಮ ನೀಡಿತು.
ಶಾವರ್ಶ್ ಸಾಹಸಕ್ಕೆ ಮೆಚ್ಚುಗೆಗಳ ಸುರಿಮಳೆ
ಇದರಲ್ಲಿ ಅಚ್ಚರಿಯ ವಿಷಯವೆಂದರೆ, ಸೋವಿಯತ್ ಒಕ್ಕೂಟದ ಮಾಧ್ಯಮಗಳು ಈ ಸಾಹಸದ ಸುದ್ದಿಯನ್ನು ಆ ಸಮಯದಲ್ಲಿ ಮುಚ್ಚಿಟ್ಟವು. ಈ ಘಟನೆ ನಡೆದು ಆರು ವರ್ಷಗಳ ನಂತರವಷ್ಟೇ ಮೊದಲ ಬಾರಿಗೆ ಪತ್ರಿಕೆಯಲ್ಲಿ ಈ ಸುದ್ದಿ ಹೊರಬಂದಿತು. ವಿಷಯ ತಿಳಿಯುತ್ತಿದ್ದಂತೆ ದೇಶಾದ್ಯಂತ ಲಕ್ಷಾಂತರ ಜನರಿಂದ ಮೆಚ್ಚುಗೆಗಳು ಹರಿದುಬಂದವು.
ಶಾವರ್ಶ್ ಕರಾಪೆಟ್ಯಾನ್ ಅವರು ಎಂದಿಗೂ ಜನಪ್ರಿಯತೆ ಅಥವಾ ಪ್ರಶಸ್ತಿಯ ಆಸೆಗೆ ಬಿದ್ದವರಲ್ಲ. ಯಾರೂ ನೋಡದಿರುವಾಗ, ಕ್ಯಾಮೆರಾಗಳು ಇಲ್ಲದಿರುವಾಗ, ಪ್ರಾಣಾಪಾಯದ ನಡುವೆಯೂ ತಕ್ಷಣ ಸರಿಯಾದ ನಿರ್ಧಾರ ತೆಗೆದುಕೊಂಡು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದೇ ನೈಜ ವೃತ್ತಿಪರತೆ ಮತ್ತು ಮಾನವೀಯತೆ. ನಮ್ಮ ದೈನಂದಿನ ಜೀವನದಲ್ಲೂ ನಿಜವಾದ ವ್ಯಕ್ತಿತ್ವ ಅಂದ್ರೆ ಇತರರು ನಮ್ಮನ್ನು ಗಮನಿಸುವುದು ಅಲ್ಲ, ಬದಲಿಗೆ ಸವಾಲಿನ ಕ್ಷಣಗಳಲ್ಲಿ ನಾವು ತೆಗೆದುಕೊಳ್ಳುವ ಜವಾಬ್ದಾರಿಯಲ್ಲಿ ಇರುತ್ತದೆ ಎಂಬುದಕ್ಕೆ ಈ ರೋಚಕ ಕಥೆಯೇ ಪ್ರಮುಖ ಸಾಕ್ಷಿಯಾಗಿದೆ.


Click it and Unblock the Notifications
