Breaking; ಕೋವಿಡ್; ಲಾಕ್‌ಡೌನ್ ನಿಯಮ ಕಠಿಣಗೊಳಿಸಿದ ಶಾಂಘೈ
ಬೀಜಿಂಗ್, ಏಪ್ರಿಲ್ 22; ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನಲೆಯಲ್ಲಿ ಶುಕ್ರವಾರ ಶಾಂಘೈ ಕಠಿಣ ಲಾಕ್‌ಡೌನ್ ನಿಯಮಗಳನ್ನು ಘೋಷಣೆ ಮಾಡಿದೆ. ನಗರದಾದ್ಯಂತ ಪರೀಕ್ಷೆಗಳನ್ನು ಮಾಡುವುದಾಗಿ ಹೇಳಿದೆ.
ಶಾಂಘೈ ಸರ್ಕಾರ ವಿ-ಚಾಟ್ ಮೂಲಕ ಶುಕ್ರವಾರ ಈ ಕುರಿತು ಮಾಹಿತಿ ನೀಡಿದೆ. ನಗರದ ಸಾಂಕ್ರಾಮಿಕದ ಪರಿಸ್ಥಿತಿ ಸಕಾತ್ಮಕ ಮಟ್ಟದಲ್ಲಿ ಸಾಗುತ್ತಿದೆ. ಸೋಂಕು ಹತೋಟಿಗೆ ಬರುವ ತನಕ ಕಠಿಣ ನಿಯಮ ಅನಿವಾರ್ಯವಾಗಿದೆ ಎಂದು ತಿಳಿಸಿದೆ.
ಜನರು ಮನೆಯಲ್ಲಿಯೇ ಇದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಸೋಂಕು ಹರಡುವಿಕೆ ಕಡಿಮೆಯಾಗಲಿದೆ. ಸೋಂಕಿನ ಪ್ರಮಾಣ ಕಡಿಮೆಯಾದರೆ ನಿಯಮಗಳನ್ನು ಸಡಿಲಿಸಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಶಾಂಘೈನಿಂದ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಸಹ ಭೇಟಿ ನೀಡಲು ನಿಷೇಧ ಹೇರಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ತಲುಪಿಸುವುದು ನಮ್ಮ ಗುರಿಯಾಗಿದೆ. ಏಪ್ರಿಲ್ 1ರಿಂದಲೇ ಶಾಂಘೈ ನಗರ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಿತ್ತು. ಆದರೆ ಸರ್ಕಾರದ ವಿರುದ್ಧ ಜನರು ಬೀದಿಗಿಳಿದಿದ್ದರು.
ಕಳೆದ ಗುರುವಾರ ಕೋವಿಡ್ ಹಡುವಿಕೆ ತಡೆಗೆ 9 ಅಂಶಗಳ ಮಾರ್ಗಸೂಚಿಯನ್ನು ಶಾಂಘೈ ಪ್ರಕಟಿಸಿತ್ತು. ಶುಕ್ರವಾರ 8 ಅಂಶಗಳ ಹೊಸ ಮಾರ್ಗಸೂಚಿಯನ್ನು ಘೋಷಣೆ ಮಾಡಿದೆ.
ಶಾಂಘೈ ಚೀನಾದ ವಾಣಿಜ್ಯ ನಗರಿಯಾಗಿದೆ. ನಗರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮಂಗಳವಾರ 7 ಸೋಂಕಿತರು ಮೃತಪಟ್ಟಿದ್ದರು. ಆ ಮೂಲಕ ಒಟ್ಟು ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿತ್ತು.
ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ಮಾಹಿತಿ ಪ್ರಕಾರ ದೇಶದಲ್ಲಿ 2,700ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಇವುಗಳಲ್ಲಿ 2500ರಷ್ಟು ಪ್ರಕರಣಗಳು ಶಾಂಘೈ ನಗರವೊಂದರಲ್ಲಿಯೇ ದಾಖಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಠಿಣ ಲಾಕ್‌ಡೌನ್ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.












Click it and Unblock the Notifications