ಭಾರಿ ಹಿನ್ನಡೆ: ಸನೋಫಿ-ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕೊರೊನಾ ಲಸಿಕೆ ವಿಫಲ
ವಾಷಿಂಗ್ಟನ್, ಡಿ.11: 2020ರಲ್ಲಿ ಎಡಬಿಡದಂತೆ ಕಾಡಿದ ಮಹಾಮಾರಿ ನೊವೆಲ್ ಕೊರೊನಾವೈರಸ್ ಹೊಗಲಾಡಿಸಲು ವಿವಿಧ ದೇಶಗಳಲ್ಲಿ ಲಸಿಕೆ ಪ್ರಯೋಗದ ಹಂತದಲ್ಲಿವೆ. ಕೆಲವೆಡೆ ಇನ್ನೇನು ಮಾರುಕಟ್ಟೆಗೆ ಬಿಡುಗಡೆಯಾಗುವ ಮಟ್ಟ ಮುಟ್ಟಿವೆ. ಕ್ಲಿನಿಕಲ್ ಟ್ರಯಲ್, ಗುಣಮಟ್ಟದ ಬಗ್ಗೆ ಎಲ್ಲಾ ಕಂಪನಿಗಳು ಎಚ್ಚರಿಕೆ ವಹಿಸಿವೆ. ಏಕೆಂದರೆ ಇಡೀ ವಿಶ್ವದ ಗಮನ ಸದ್ಯ ಕೊರೊನಾ ಲಸಿಕೆ ಮೇಲಿದೆ.
ಅಮೆರಿಕದಲ್ಲಿ ಮಾರ್ಡೆನಾ ಲಸಿಕೆ ನಂತರ ಭಾರಿ ನಂಬಿಕೆ ಹುಟ್ಟು ಹಾಕಿದ್ದ ಸನೋಫಿ ಲಸಿಕೆ ಪ್ರಯೋಗ ವಿಫಲವಾಗಿರುವ ಸುದ್ದಿ ಬಂದಿದೆ. ವೃದ್ಧರ ಮೇಲೆ ಸನೋಫಿ-ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕೊರೊನಾ ಲಸಿಕೆ ಪ್ರಯೋಗಿಸಿದಾಗ ಸರಿಯಾದ ಫಲ ನೀಡಿಲ್ಲ, ಹಲವು ಸಮಸ್ಯೆ ಎದುರಾಗಿದೆ ಎಂದು ಶುಕ್ರವಾರ ಸುದ್ದಿ ಸಿಕ್ಕಿದೆ. ಇದು ಅಮೆರಿಕದ ಫಾರ್ಮಾ ಕಂಪನಿಗೆ ಕ್ಲಿನಿಕಲ್ ಟ್ರಯಲ್ ಹಂತದಲ್ಲಿ ಭಾರಿ ಹಿನ್ನಡೆಯಾಗಿದೆ.
ಈಗ ಬದಲಾದ ಲಸಿಕೆಯನ್ನು ಮತ್ತೊಮ್ಮೆ ಪ್ರಯೋಗಕ್ಕೆ ಒಳಪಡಿಸಬೇಕಾಗುತ್ತದೆ. ಬಹುಶಃ 2021ರ ಫೆಬ್ರವರಿ ತಿಂಗಳ ತನಕ ಇದು ಸಾಧ್ಯವಾಗುವುದಿಲ್ಲ. ಈಗ ಜಾರಿಯಲ್ಲಿರುವ ಹಂತ ಮುಕ್ತಾಯವಾದ ಬಳಿಕವಷ್ಟೇ ಹೊಸ ಲಸಿಕೆ ಅಥವಾ ಪರಿಷ್ಕೃತ ಲಸಿಕೆ ಬಳಕೆ ಸಾಧ್ಯ. ಸದ್ಯ ಎಲ್ಲಾ ಕಂಪನಿಗಳು ಕ್ಲಿನಿಕಲ್ ಹಂತದಲ್ಲಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಲಸಿಕೆ ಬಳಕೆಗೆ ಅನುಮತಿ ಕೋರುತ್ತಿವೆ. ಸನೋಫಿ ಲಸಿಕೆ ಕೂಡಾ ಇದರಿಂದ ಹೊರತಾಗಿಲ್ಲ.

ವೈರಲ್ ಪ್ರೋಟಿನ್ ಆಧಾರ ಲಸಿಕೆ ವೈಫಲ್ಯ ಎಲ್ಲಿ?
18 ರಿಂದ 49 ವರ್ಷ ವಯಸ್ಸಿನ ವ್ಯಕ್ತಿಗಳ ಮೇಲಿನ ಪ್ರಯೋಗದಲ್ಲಿ ಸಫಲರಾಗಿದ್ದೇವೆ. ಕೊವಿಡ್ 19 ಗುಣಮುಖರಾದವರ ಜೊತೆ ಹೋಲಿಕೆ ಮಾಡಿದಾಗ ಲಸಿಕೆ ಪ್ರಯೋಗಕ್ಕೆ ಒಳಗಾದವರಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿದೆ. ಆದರೆ, ವಯೋವೃದ್ಧರಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿಲ್ಲ, ಆಂಟಿಜೆನ್ ಕೊರತೆ ಇದಕ್ಕೆ ಕಾರಣ ಎನ್ನಬಹುದು. ದೇಹದ ಪ್ರತಿರೋಧಕ ಶಕ್ತಿಯನ್ನು ಪ್ರಚೋದಿಸುವ ಪ್ರೋಟಿನ್ ಇದಾಗಿದ್ದು, ಈ ಕೊರತೆ ಸರಿದೂಗಿಸಲು ಸಂಸ್ಥೆ ಪ್ರಯತ್ನ ಪಡಲಿದೆ ಎಂದು ಥಾಮಸ್ ಹೇಳಿದರು.
ವೈರಲ್ ಪ್ರೋಟಿನ್ ಆಧಾರ ಲಸಿಕೆ ಬಳಸುವ ಸನೋಫಿ, ಬಾಧಿತ ಕೋಶ(ಸೆಲ್)ಗಳೊಳಗೆ ಪ್ರೋಟಿನ್ ವೃದ್ದಿಯತ್ತ ಗಮನ ಹರಿಸಿದೆ. ಜಿಎಸ್ಕೆ ಸಂಸ್ಥೆ ಪ್ರತಿರೋಧ ಶಕ್ತಿ ಹೆಚ್ಚಿಸುವ ಪ್ರೋಟಿನ್ ಪೂರಕ ಅಂಶಗಳನ್ನು ಒದಗಿಸುತ್ತಿದೆ. ಇವೆರಡು ಸಮ್ಮಿಲಿತ ಲಸಿಕೆ ಈಗ ಕೊವಿಡ್ 19 ಬಾಧಿತರ ಮೇಲೆ ಪ್ರಯೋಗದ ಹಂತದಲ್ಲಿದೆ. ಈ ಹಿಂದೆ ಇದೇ ವಿನ್ಯಾಸದ ಲಸಿಕೆಯನ್ನು ಇನ್ ಫ್ಲೂಯೆಂಜಾ ಮೇಲೆ ಪ್ರಯೋಗಿಸಿದ್ದ ಸನೋಫಿ ಉತ್ತಮ ಫಲಿತಾಂಶ ಪಡೆದುಕೊಂಡಿತ್ತು.

ಭಾರಿ ಒಪ್ಪಂದ ಮಾಡಿಕೊಂಡಿರುವ ಸನೋಫಿ- ಜಿಎಸ್ಕೆ
ಅಮೆರಿಕದ ಆಪರೇಷನ್ ವಾರ್ಪ್ ಸ್ಪೀಡ್ ನ ಭಾಗವಾಗಿ ಆಯ್ಕೆಯಾಗಿರುವ 6 ಪ್ರಮುಖ ಕೊರೊನಾ ಲಸಿಕೆಗಳ ಪೈಕಿ ಸನೋಫಿ ಲಸಿಕೆಯೂ ಒಂದು. ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಜೊತೆ ಫಾರ್ಮಾ ಕಂಪನಿಗಳು ಸರಿ ಸುಮಾರು 2.1 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದು, 100 ಮಿಲಿಯನ್ ಡೋಸ್ ನೀಡಲು ಮುಂದಾಗಿವೆ. ಅಮೆರಿಕದ ಜೊತೆಗಷ್ಟೇ ಅಲ್ಲದೆ ಯುರೋಪಿಯನ್ ಯೂನಿಯನ್ ಜೊತೆ 300 ಮಿಲಿಯನ್ ಡೋಸ್ ನೀಡುವ ಒಪ್ಪಂದಕ್ಕೆ ಸನೋಫಿ ಹಾಗೂ ಜಿಎಸ್ಕೆ ಸಹಿ ಹಾಕಿವೆ. ಸನೋಫಿ 200 ಮಿಲಿಯನ್ ಡೋಸ್ ನೀಡುವ ಇನ್ನೊಂದು ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಂಡಿದೆ. 2021 ವೇಳೆಗೆ 1 ಬಿಲಿಯನ್ ಡೋಸ್ ಭರವಸೆಯನ್ನು ಈ ಎರಡು ಸಂಸ್ಥೆಗಳು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತುರ್ತು ಪರಿಸ್ಥಿತಿಯಲ್ಲಿ ಬಳಸಲು ಅನುಮತಿ ಸಿಕ್ಕಿಲ್ಲ
ಫೈಜರ್ ಹಾಗೂ ಜರ್ಮನಿಯ ಬಯೋಎನ್ ಟೆಕ್ ಈಗಾಗಲೇ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಬ್ರಿಟನ್ ಅನುಮತಿ ನೀಡಿದೆ. ಕೆನಡಾದಲ್ಲಿ ಆಗಲೇ ಬಳಸಲಾಗುತ್ತಿದೆ. ಅಮೆರಿಕದ ಆಹಾರ ಹಾಗೂ ಔಷಧ ಆಡಳಿತ (FDA) ಮೇಲೆ ಈ ಲಸಿಕೆಗಳ ಬಳಕೆಗೆ ಅಧಿಕೃತ ಮುದ್ರೆ ಒತ್ತುವಂತೆ ಒತ್ತಡ ಕೇಳಿ ಬಂದಿದೆ ಅಮೆರಿಕದ ತಜ್ಞರ ಸಮಿತಿ ಕೂಡಾ ಗುರುವಾರದಂದು ವರದಿ ನೀಡಿದೆ. ಇದೆಲ್ಲದರ ಜೊತೆಗೆ ಮಾರ್ಡೆನಾ ಲಸಿಕೆ ಇನ್ನು ಕೆಲ ವಾರಗಳಲ್ಲಿ ಅನುಮತಿ ಪಡೆದುಕೊಳ್ಳುವ ಸಾಧ್ಯತೆಯಿದೆ.

ಸನೋಫಿ ಹಾಗೂ ಜಿಎಸ್ಕೆ ಹಾದಿ ಕಠಿಣ
ಒಟ್ಟಾರೆ, ಸದ್ಯಕ್ಕಂತೂ ಸನೋಫಿ ಹಾಗೂ ಜಿಎಸ್ಕೆ ಹಾದಿ ಕಠಿಣವಾಗಿದೆ. ಈಗಾಗಲೇ ಅನುಮತಿ ಪಡೆದ ಲಸಿಕೆಗಳಷ್ಟು ಗುಣಮಟ್ಟ ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಯಕ್ಷಮತೆ ತೋರುವುದು ಅನಿವಾರ್ಯವಾಗಿದೆ. ಕೊವಿಡ್ 19 ರೋಗಿಗಳ ಮೇಲೆ ಫೈಜರ್ ಹಾಗೂ ಮಾರ್ಡೆನಾ ಪ್ರಯೋಗ ಮಾಡಲಾಗಿದ್ದು, ಶೇ 90ರಷ್ಟು ಪರಿಣಾಮಕಾರಿ ಎಂಬ ಪ್ರಮಾಣಪತ್ರ ಗಳಿಸಿವೆ. ಆದರೆ, ಪೂರ್ಣಪ್ರಮಾಣದ ಲಸಿಕೆ 2021ರಲ್ಲೇ ಲಭ್ಯ ಎಂದು ಆ ಎರಡು ಸಂಸ್ಥೆಗಳು ಹೇಳಿವೆ.
Recommended Video

ಲಸಿಕೆ ವಿಭಾಗದ ಉಪಾಧಕ್ಷ ಥಾಮಸ್ ಟ್ರಿಯೊಪ್
ಸನೋಫಿ ಪ್ಯಾಸ್ಚರ್ ಸಂಸ್ಥೆಯ ಲಸಿಕೆ ವಿಭಾಗದ ಉಪಾಧಕ್ಷ ಥಾಮಸ್ ಟ್ರಿಯೊಪ್ ಮಾತನಾಡಿ, ಸಾರ್ವಜನಿಕ ಆರೋಗ್ಯದ ಬಗ್ಗೆ ಸಂಸ್ಥೆ ತೀವ್ರ ಕಾಳಜಿ ಹೊಂದಿದ್ದು, ಲಸಿಕೆ ವಿಳಂಬದ ಬಗ್ಗೆ ಬೇಸರವಿದೆ. ವಿಜ್ಞಾನ ಹಾಗೂ ದತ್ತಾಂಶದ ಆಧಾರದ ಮೇಲೆ ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಈ ಪ್ರಯೋಗ ಆತುರದ ನಿರ್ಧಾರ ಸಾಧ್ಯವಿಲ್ಲ. ಸಾಂಕ್ರಾಮಿಕಕ್ಕೆ ಲಸಿಕೆಯನ್ನು ಇಡೀ ವಿಶ್ವಕ್ಕೆ ಒಂದೇ ಕಂಪನಿ ಪೂರೈಸಲು ಸಾಧ್ಯವೇ ಇಲ್ಲ, ವಿಳಂಬವಾದರೂ ಹೆಚ್ಚೆಚ್ಚು ಲಸಿಕೆಗಳು ಬೇಕಾಗುತ್ತದೆ ಎಂದಿದ್ದಾರೆ.












Click it and Unblock the Notifications