Russia VS America: ಅಮೆರಿಕ ಮಾಡುತ್ತಿರುವ ತಪ್ಪುಗಳು ಇವು!
ಜಗತ್ತಿನಲ್ಲಿ ಏನೇ ನಡೆದರೂ ಅಮೆರಿಕ ನಂದೂ ಒಂದು ಇರಲಿ ಎಂಬಂತೆ ಮೂಗು ತೂರಿಸಿ ತನ್ನ ಶಕ್ತಿ ಪ್ರದರ್ಶನಕ್ಕೆ ನಿಲ್ಲುತ್ತದೆ. ಹೀಗೆ ಜಗತ್ತಿನ ಎಲ್ಲಾ ಯುದ್ಧಗಳಿಗೂ, ಅಮೆರಿಕ ನೇರ ಅಥವಾ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂಬ ಆರೋಪ ಇದೆ. ಇಷ್ಟೆಲ್ಲಾ ಆರೋಪಗಳು ಕೇಳಿ ಬರುತ್ತಿರುವ ಸಮಯದಲ್ಲೇ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಅಮೆರಿಕದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಷ್ಯಾ & ಉಕ್ರೇನ್ ಮಧ್ಯೆ ಯುದ್ಧ ಶುರುವಾದ ಬಳಿಕ ಯಾರು ಅಡ್ಡ ಬಂದರೋ ಇಲ್ವೋ ಗೊತ್ತಿಲ್ಲ, ಆದ್ರೆ ಅಮೆರಿಕ ಮಾತ್ರ ಮೊದಲು ಹೆಜ್ಜೆ ಇಟ್ಟಿತ್ತು. ಯುದ್ಧದಲ್ಲಿ ಸಹಾಯವನ್ನ ಮಾಡ್ತೀವಿ ಅಂತಾ ಉಕ್ರೇನ್ ಪರವಾಗಿ ನಿಂತಿತ್ತು ಅಮೆರಿಕ. ಹೀಗೆ ಅಮೆರಿಕ ಬಂದ ನಂತರ ಹಲವು ವಿನಾಶಕಾರಿ ಅಸ್ತ್ರವನ್ನು ಉಕ್ರೇನ್ ಸೇನೆಗೆ ಸಪ್ಲೈ ಮಾಡಿದ ಆರೋಪ ಕೇಳಿಬಂತು. ಇದೆಲ್ಲದಕ್ಕೂ ಇದೀಗ ಉತ್ತರ ನೀಡಿರುವ ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕ ಮಾಡುತ್ತಿರುವ ತಪ್ಪುಗಳನ್ನ ಪಟ್ಟಿ ಮಾಡಿದ್ದಾರೆ.

ರಷ್ಯಾ ವಿರುದ್ಧ ಅಮೆರಿಕ ಪರೋಕ್ಷ ಯುದ್ಧ?
ಹೌದು, ಈಗ ಯುದ್ಧ ನಡೆಯುತ್ತಿರುವುದು ಉಕ್ರೇನ್ ಮತ್ತು ರಷ್ಯಾ ನಡುವೆ. ಆದ್ರೆ ಈಗಿನ ಪರಿಸ್ಥಿತಿ ಗಮನಿಸಿದರೆ ಅಮೆರಿಕ ಪರೋಕ್ಷವಾಗಿ ರಷ್ಯಾ ವಿರುದ್ಧ ಯುದ್ಧ ನಡೆಸುತ್ತಿರುವಂತೆ ಭಾಸವಾಗುತ್ತಿದೆ. ಉಕ್ರೇನ್‌ನ ವಿರುದ್ಧ ರಷ್ಯಾ ಯುದ್ಧ ಸಾರಿ ಒಂದು ಮುಕ್ಕಾಲು ವರ್ಷಗಳೇ ಕಳೆದಿದೆ. ಹೀಗೆ ಒಂದು ಮುಕ್ಕಾಲು ವರ್ಷದಲ್ಲಿ, ಅಮೆರಿಕ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯವನ್ನು ಉಕ್ರೇನ್ ಸೇನೆಗೆ ಮಾಡಿದೆ. ಇದು ಸಾಲದ ಎಂಬಂತೆ, ಭಯಾನಕ ಅಸ್ತ್ರ ಎನ್ನಲಾಗುವ ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್ (ATACMS) ಅಸ್ತ್ರಗಳನ್ನ ಕೂಡ ಅಮೆರಿಕ ಈಗ ಉಕ್ರೇನ್‌ಗೆ ನೀಡಿದೆ. ಇದು ಪುಟಿನ್ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಅಮೆರಿಕ ಮಾಡುತ್ತಿರುವುದು ದೊಡ್ಡ ತಪ್ಪು!
ಅಕ್ಟೋಬರ್ 17 & 18 ರಂದು ಚೀನಾದಲ್ಲಿ 'ಬೆಲ್ಟ್ & ರೋಡ್' ಸಮ್ಮೇಳನ ನಡೆಯಿತು. ಇದೇ ಕಾರಣಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚೀನಾಗೆ ಭೇಟಿ ನೀಡಿದ್ರು. ಈ ವೇಳೆ ತಮ್ಮ ಆಪ್ತ ಸ್ನೇಹಿತ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಇಸ್ರೇಲ್ ಮತ್ತು ಹಮಾಸ್ ಕಾಳಗದ ಬಗ್ಗೆಯೂ ಪುಟಿನ್ ಚರ್ಚೆ ನಡೆಸಿದ್ದಾರೆ. ಅಲ್ಲದೆ ಅಮೆರಿಕ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೇಗೆಲ್ಲಾ ಮೂಗು ತೂರಿಸುತ್ತಿದೆ ಎಂಬ ಕುರಿತು ಪುಟಿನ್ ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್ (ATACMS) ಅಸ್ತ್ರಗಳನ್ನು ಅಮೆರಿಕ ನಾಯಕರು ಉಕ್ರೇನ್‌ಗೆ ನೀಡಿದ್ದೇಕೆ? ಎಂಬುದನ್ನ ಖಡಕ್ ಆಗಿ ಕೇಳಿದ್ದಾರೆ ಪುಟಿನ್.
'ಅಮೆರಿಕ ನಮಗೆ ಸಮಾನ ಶತ್ರು!'
ಈಗ ಚೀನಾ ಜೊತೆಗೆ ಮಾತುಕತೆ ನಡೆಸುವಾಗ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಪ್ರಸ್ತಾಪ ಮಾಡಿರುವ ರಷ್ಯಾ ಅಧ್ಯಕ್ಷರು. ಅಮೆರಿಕ ಈಗ, ರಷ್ಯಾ & ಚೀನಾಗೆ ಸಮಾನ ಶತ್ರು ಎಂದಿದ್ದಾರೆ. ಅಲ್ಲದೆ ಹೀಗೆ ಸುಖಾಸುಮ್ಮನೆ ಉಕ್ರೇನ್‌ಗೆ ತನ್ನ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಅಮೆರಿಕ ತಪ್ಪು ಮಾಡುತ್ತಿದೆ. ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ನಡೆಯುತ್ತಿರುವ ಘರ್ಷಣೆ ತಪ್ಪಿಸುವಲ್ಲಿ ಅಮೆರಿಕ ಎಡವಿದ್ದು, ಅದನ್ನು ಸರಿಪಡಿಸಬೇಕಿದೆ ಎಂದಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.

ಹಾಗೇ ಉಕ್ರೇನ್ ಯುದ್ಧದ ವಿಚಾರದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಅಂದ್ರೆ ಅಮೆರಿಕ ಸೇರಿ ಮತ್ತಿತರರು ಶಾಂತಿ ಮಾತುಕತೆಗೆ ಮುಂದಾಗುತ್ತಿದ್ದಾರೆ. ರಷ್ಯಾ ಕೂಡ ಉಕ್ರೇನ್ ಜೊತೆ ಈಗ ಶಾಂತಿ ಮಾತುಕತೆಗೆ ಸಿದ್ಧ. ನಾವು ಮೊದಲಿನಿಂದ ಇದೇ ಮಾತನ್ನು ಹೇಳುತ್ತಿದ್ದು, ರಷ್ಯಾ ಹಾಕಿದ ಶರುತ್ತುಗಳ ಅನ್ವಯದಲ್ಲಿ ಮಾತುಕತೆ ನಡೆಯಲಿ. ಹಾಗೇ ವಾಸ್ತವವನ್ನು ಉಕ್ರೇನ್ ಒಪ್ಪಿಕೊಳ್ಳಲಿ. ಆಗ ಮಾತ್ರ ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆ ನಿಲ್ಲಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟವಾಗಿ ತಿಳಿಸಿದ್ದಾರೆ.












Click it and Unblock the Notifications