ರಷ್ಯಾದಲ್ಲಿ ಪ್ರೀತಿಸಿ ಮದುವೆ ಆಗಿದ್ದ ಜೋಡಿಗೆ ಇದೆಂತಹ ಶಿಕ್ಷೆ?
ಮದುವೆ ಒಂದು ಪವಿತ್ರವಾದ ಬಂಧ, ಅದರಲ್ಲೂ ಪ್ರೀತಿಸಿ ಮದುವೆ ಆಗುವ ಜೋಡಿಗಳಿಗೆ ಈ ಬಂಧ ಮತ್ತಷ್ಟು ಗಟ್ಟಿಯಾಗಿ ಇರುತ್ತೆ ಅನ್ನೋ ಮಾತಿದೆ. ಈ ಮಾತಿಗೆ ಪೂರಕವಾಗಿಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಶತ್ರು, ಮೃತ ಅಲೆಕ್ಸಿ ನವಲ್ನಿ ಹಾಗೂ ಅವರ ಪತ್ನಿ ಯುಲಿಯಾ ಬದುಕಿದ್ದರು. ಹೀಗೆ ಇಬ್ಬರೂ ಅನ್ಯೂನ್ಯವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದ್ರೆ ದಿಢೀರ್ ನವಲ್ನಿ ಜೀವ ಬಿಟ್ಟಿರುವುದು ಹೆಂಡತಿಗೆ ಶಾಕ್ ಕೊಟ್ಟಿದೆ.
ಹೌದು, ರಷ್ಯಾದ ಕಾರಾಗೃಹದಲ್ಲಿ ಮೃತಪಟ್ಟ ತಮ್ಮ ಪತಿ, ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಕುರಿತಾಗಿ ಭಾವುಕರಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ ಯುಲಿಯಾ. ಹಾಗೇ 'ಐ ಲವ್ ಯು' ಎಂದು ರಷ್ಯನ್ ಭಾಷೆಯಲ್ಲಿ ಬರೆದುಕೊಂಡಿರುವ ಯುಲಿಯಾ ನವಲ್ನಿ ತನ್ನ ನೋವು ಹೇಳಿಕೊಂಡಿದ್ದಾರೆ. ಹಾಗೇ ನವಲ್ನಿ ಅವರ ಇಡೀ ಕುಟುಂಬ ಈಗ ದುಖಃದಲ್ಲಿದ್ದು ರಷ್ಯಾದ ಪರಿಸ್ಥಿತಿ ಕೂಡ ಸೂಕ್ಷ್ಮವಾಗಿದೆ. ಜಾಗತಿಕ ಮಟ್ಟದಲ್ಲಿ ಕೂಡ ಅಲೆಕ್ಸಿ ನವಲ್ನಿ ಸಾವು ದೊಡ್ಡ ಮಟ್ಟಿಗೆ ಚರ್ಚೆಗೆ ವೇದಿಕೆ ಒದಗಿಸಿದ್ದು. ರಷ್ಯಾದಲ್ಲಿ ಇದೀಗ ಪ್ರತಿಭಟನೆಗಳು ಕೂಡ ಆರಂಭವಾಗಿವೆ.

ಗಂಡನಿಗೆ ವಿಷ ಹಾಕಿದಾಗ ಹೆಂಡತಿ..
ಅಂದಹಾಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಡಳಿತದ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿ ಪ್ರಬಲ ವಿರೋಧ ಪಕ್ಷದ ನಾಯಕನಾಗಿ ಗುರುತಿಸಿಕೊಂಡಿದ್ದರು ನವಲ್ನಿ, ಆ ನಂತರ ವಿಧ್ವಂಸಕ ಕೃತ್ಯ ಆರೋಪದ ಮೇಲೆ ಜೈಲು ಪಾಲಾಗಿದ್ದ ಅಲೆಕ್ಸಿ ನವಲ್ನಿ ಫೆಬ್ರವರಿ 16 ರಂದು ಜೈಲಿನಲ್ಲೇ ಜೀವ ಬಿಟ್ಟಿದ್ದರು. ಇದಕ್ಕೂ ಮೊದಲು ಅಲೆಕ್ಸಿ ನವಲ್ನಿಗೆ ವಿಷ ಹಾಕಲಾಗಿತ್ತು. ಆಗ ಕೂಡ ಅಲೆಕ್ಸಿ ನವಲ್ನಿ ಜೊತೆಗೆ ಇದ್ದ ಅವರ ಹೆಂಡತಿ ಯುಲಿಯಾ, ಎಲ್ಲಾ ಕಷ್ಟಗಳನ್ನ ಜೊತೆಗೆ ಹಂಚಿಕೊಂಡರು. ನವಲ್ನಿಗೆ ಚಿಕಿತ್ಸೆಯ ಅಗತ್ಯ ಇದ್ದಾಗ ಜರ್ಮನಿಗೆ ಕೂಡ ಕರೆದುಕೊಂಡು ಹೋಗಲಾಗಿತ್ತು. ಇಷ್ಟೆಲ್ಲಾ ಮಾಡಿ ಗಂಡ ಬಿಡುಗಡೆ ಆಗುತ್ತಾರೆ ಅಂತಾ ಕಾಯುತ್ತಿದ್ದ ನವಲ್ನಿ ಹೆಂಡತಿಗೆ ಈಗ ಆಘಾತ ಎದುರಾಗಿದೆ.
ಹೆಂಡತಿ ಹಣೆಗೆ ಗಂಡನ ಮುತ್ತು
ಪತಿ ಅಗಲಿದ ನಾಲ್ಕು ದಿನ ಬಳಿಕ ಯುಲಿಯಾ, ಪತಿಯೊಂದಿಗೆ ಕಳೆದ ಆತ್ಮೀಯ ಕ್ಷಣವೊಂದರ ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ಯುಲಿಯಾ ನವಲ್ನಿಯ ತಲೆಗೆ ಅಲೆಕ್ಸಿ ಅವರು ಮುತ್ತು ಕೊಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಇನ್ನು ಈ ಭಾವುಕ ಕ್ಷಣದ ಕುರಿತು, ರಷ್ಯನ್ನರು ಕೂಡ ಕಂಬನಿ ಮಿಡಿದಿದ್ದಾರೆ. ಹಾಗೇ ಜಗತ್ತಿನಾದ್ಯಂತ ಈ ಘಟನೆಯ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ರಷ್ಯಾದಲ್ಲಿ ನವಲ್ನಿಯ ಸಾವು ವಿರೋಧಿಸಿ ಭಾರಿ ಪ್ರತಿಭಟನೆಗಳು ಕೂಡ ಆರಂಭ ಆಗಿವೆ.

ರಷ್ಯಾ ಚುನಾವಣೆಗೂ ಮೊದಲು ಆಘಾತ
ಅಂದಹಾಗೆ ರಷ್ಯಾ ಚುನಾವಣೆ ನಡೆಯುವುದಕ್ಕೂ ಒಂದು ತಿಂಗಳ ಮೊದಲು, ಅಲೆಕ್ಸಿ ನವಲ್ನಿ ಮೃತಪಟ್ಟಿದ್ದಾರೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪುಟಿನ್ ಇಚೆಗೆ ಘೋಷಣೆ ಮಾಡಿದ್ದರು. ಹೀಗೆ ಪುಟಿನ್ ಅವರು ಅಧ್ಯಕ್ಷರಾಗಿ ಪುನರಾಯ್ಕೆ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಅಲೆಕ್ಸಿ ನವಲ್ನಿ ಮೃತಪಟ್ಟಿರುವುದು ದೊಡ್ಡ ಸಂಚಲನಕ್ಕೂ ಕಾರಣವಾಗಿದೆ. ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications