‘ನ್ಯಾಟೋ’ ಸೇರಿದ ಫಿನ್‌ಲ್ಯಾಂಡ್‌ಗೆ ಬಾಂಬ್ ಮೂಲಕ ಸ್ವಾಗತ!
ಮಾಸ್ಕೋ: ಯಾರಾದರೂ ರಷ್ಯಾ ಅಥವಾ ಪುಟಿನ್ ಸಹವಾಸಕ್ಕೆ ಹೋದರೆ ತಕ್ಷಣದ ಪ್ರತಿಕ್ರಿಯೆ ಸಿಕ್ಕಿಬಿಡುತ್ತದೆ. ಅದರಲ್ಲೂ ನ್ಯಾಟೋ ಮತ್ತು ಉಕ್ರೇನ್ ವಿಚಾರದಲ್ಲಿ ರಷ್ಯಾ ಕೆಣಕಿ ಉಳಿದವರಿಲ್ಲ. ಫಿನ್‌ಲ್ಯಾಂಡ್ ವಿಚಾರದಲ್ಲೂ ಈಗ ಇದೇ ಆಗಿದ್ದು, ನ್ಯಾಟೋ ಒಕ್ಕೂಟದ ಸದಸ್ಯತ್ವ ಪಡೆದು ಅಮೆರಿಕದ ಜೊತೆ ಸೇರಿದ ಮರುದಿನವೇ ರಷ್ಯಾ ಸೇನೆ ಫಿನ್‌ಲ್ಯಾಂಡ್‌ಗೆ ಶಾಕ್ ಕೊಟ್ಟಿದೆ. ಕಲಿನಿನ್‍ಗ್ರಾಡ್ ಪ್ರದೇಶದಲ್ಲಿ ಭರ್ಜರಿ ಕವಾಯತು ನಡೆಸಿ ಎಚ್ಚರಿಕೆ ಸಂದೇಶ ರವಾನಿಸಿದೆ.
ಫಿನ್‌ಲ್ಯಾಂಡ್ ನ್ಯಾಟೋ ಸೇರಿದ ಮರುದಿನವೇ ಗಡಿಯಲ್ಲಿ ಬಾಂಬ್, ಮಿಸೈಲ್ ಸದ್ದು ಮೊಳಗಿದೆ ಎಂಬ ಆರೋಪ ಕೇಳಿಬಂದಿದೆ. ಫಿನ್‌ಲ್ಯಾಂಡ್ ಜೊತೆ ರಷ್ಯಾ ಸುಮಾರು 1300 ಕಿಲೋ ಮೀಟರ್‌ಗೂ ಹೆಚ್ಚು ವಿಸ್ತಾರವಾದ ಗಡಿ ಪ್ರದೇಶ ಹಂಚಿಕೊಂಡಿದೆ. ಹೀಗಾಗಿ ತನ್ನ ಸುರಕ್ಷತೆ ದೃಷ್ಟಿಯಿಂದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ. ಇನ್ನು ಫಿನ್‌ಲ್ಯಾಂಡ್‌ಗೆ ಬಿಸಿ ಮುಟ್ಟಿಸುವ ಕಾರಣಕ್ಕೆ ರಷ್ಯಾ ತನ್ನ ಜೊತೆ ಗಡಿ ಹಂಚಿಕೊಂಡಿರುವ ದೇಶಕ್ಕೆ S-400 ಸೇರಿದಂತೆ ಮಾರಣಾಂತಿಕ ಶಸ್ತ್ರಾಸ್ತ್ರಗಳ ಶಕ್ತಿ ತೋರಿಸುತ್ತಿದೆ.

ಆಯಕಟ್ಟಿನ ಜಾಗ: ಕಲಿನಿನ್‍ಗ್ರಾಡ್ ಆಯಕಟ್ಟಿನ ಜಾಗವಾಗಿದ್ದು, ಅಕಸ್ಮಾತ್ ಮುಂದೆ ಫಿನ್‌ಲ್ಯಾಂಡ್ ವಿರುದ್ಧ ಯುದ್ಧ ಮಾಡುವ ಸನ್ನಿವೇಶ ಎದುರಾದರೆ ರಷ್ಯಾ ನೇರವಾಗಿ ನುಗ್ಗಿ ಹೊಡೆಯಲು ಈ ಪ್ರದೇಶ ಅನುಕೂಲಕರ. ಪೋಲ್ಯಾಂಡ್ ಮತ್ತು ಲಿಥುವೇನಿಯಾ ದೇಶಗಳ ನಡುವೆ ಈ ಪ್ರದೇಶ ಬರುತ್ತದೆ. ರಷ್ಯಾ ಸೇನೆ ಕಲಿನಿನ್‍ಗ್ರಾಡ್ ಪ್ರದೇಶದಲ್ಲಿ ಅತ್ಯಂತ ಪ್ರಬಲವಾದ ಹಿಡಿತ ಹೊಂದಿದೆ.
ಎಚ್ಚರಿಕೆ ಸಂದೇಶ: ರಷ್ಯಾ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಸದ್ಯದ ಬೆಳವಣಿಗೆ ಬಗ್ಗೆ ರಷ್ಯಾ ಸೇನೆಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಫಿನ್‌ಲ್ಯಾಂಡ್ ನಡೆಯಿಂದ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿದ್ದು, ಉಕ್ರೇನ್ ನೆಲದಲ್ಲಿ ಕೈಗೊಂಡಿರುವ ಕಾರ್ಯಾಚರಣೆಗೆ ಈ ಬೆಳವಣಿಗೆ ಅಡ್ಡಿ ಮಾಡಬಾರದು ಎಂದು ಸೂಚಿಸಿದ್ದಾರೆ.
ಇದು ಬೇಕಿತ್ತಾ?: ಇಷ್ಟೆಲ್ಲದರ ನಡುವೆ ಫಿನ್‌ಲ್ಯಾಂಡ್ ನ್ಯಾಟೋ ಒಕ್ಕೂಟ ಸೇರಿರುವ ಬಗ್ಗೆ ಯುರೋಪ್ ರಾಷ್ಟ್ರಗಳ ನಡುವೆಯೇ ಒಮ್ಮತ ಮೂಡುತ್ತಿಲ್ಲ. ಈಗಾಗಲೇ ಉಕ್ರೆನ್ ಮತ್ತು ರಷ್ಯಾ ನಡುವೆ ಇದೇ ಕಾರಣಕ್ಕೆ ಯುದ್ಧ ನಡೆಯುತ್ತಿರುವಾಗ ಫಿನ್‌ಲ್ಯಾಂಡ್‌ಗೆ ಈ ನಿರ್ಧಾರ ಅಗತ್ಯ ಇತ್ತಾ? ಎಂದು ಚರ್ಚಿಸಲಾಗುತ್ತಿದೆ. ಆದರೆ ನ್ಯಾಟೋ ಪಡೆಗಳಿಗೆ ಮಾತ್ರ ಈ ಘಟನೆಯಿಂದ ಆನೆ ಬಲ ಬಂದಂತಾಗಿದೆ.
ರಾತ್ರೋ ರಾತ್ರಿ ಡಬಲ್!: ಫಿನ್‌ಲ್ಯಾಂಡ್ ಅಮೆರಿಕದ ಬುಟ್ಟಿಗೆ ಬೀಳುವ ಮೊದಲು, ಅಂದ್ರೆ ನ್ಯಾಟೋ ಸೇರುವ ಮೊದಲು ಸುಮಾರು 750 ಮೈಲಿಗಳಷ್ಟು ದೂರಕ್ಕೆ ರಷ್ಯಾ ಗಡಿಯಲ್ಲಿ ನ್ಯಾಟೋ ಪಡೆಗಳು ಬಂದು ಕೂತಿದ್ದವು. ಆದರೆ ಯಾವಾಗ ಫಿನ್‌ಲ್ಯಾಂಡ್ ಕೂಡ ನ್ಯಾಟೋ ಪಡೆಯ ಸದಸ್ಯ ರಾಷ್ಟ್ರವಾಯಿತೋ ಆಗ ಇದರ ವ್ಯತ್ಯಾಸ ಡಬಲ್ ಆಗಿದೆ. ಫಿನ್‌ಲ್ಯಾಂಡ್ ರಷ್ಯಾ ಜೊತೆಗೆ ಬರೋಬ್ಬರಿ 800 ಮೈಲಿಗೂ ಹೆಚ್ಚು ವ್ಯಾಸದಲ್ಲಿ ಗಡಿ ಪ್ರದೇಶ ಹಂಚಿಕೊಂಡಿದೆ. ಈಗ ಫಿನ್‌ಲ್ಯಾಂಡ್ ನ್ಯಾಟೋ ಒಕ್ಕೂಟ ಸೇರಿದ ಪರಿಣಾಮ ಫಿನ್‌ಲ್ಯಾಂಡ್ ನೆಲದಲ್ಲೂ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬಂದು ಕೂರಲಿವೆ. ಹೀಗೆ ರಷ್ಯಾ ಭವಿಷ್ಯಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ.
ಒಟ್ನಲ್ಲಿ ಈಗಿನ ಬೆಳವಣಿಗೆಗಳಿಂದ ಯುರೋಪ್‌ನ ಅಶಾಂತ ವಾತಾವರಣಕ್ಕೆ ಮತ್ತಷ್ಟು ಕಿಚ್ಚು ಹೊತ್ತಿಸಿದಂತಾಗಿದೆ. ಈಗಾಗಲೇ ಮತ್ತೊಂದು ಮಹಾಯುದ್ಧದ ಭಯ ಆವರಿಸಿದ್ದು, ರಷ್ಯಾ ಕಲಿನಿನ್‍ಗ್ರಾಡ್ ಪ್ರದೇಶದಲ್ಲಿ ಫಿನ್‌ಲ್ಯಾಂಡ್‌ಗೆ ತನ್ನ ತಾಕತ್ ತೋರಿಸುತ್ತಿದೆ. ಈವರೆಗೂ ಅಮೆರಿಕ ಅಥವಾ ನ್ಯಾಟೋ ಸದಸ್ಯ ರಾಷ್ಟ್ರಗಳು ಪ್ರತಿಕ್ರಿಯೆ ನೀಡಿಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ ಕಗ್ಗಂಟಾಗುವುದು ಗ್ಯಾರಂಟಿ.












Click it and Unblock the Notifications