3ನೇ ಮಹಾಯುದ್ಧ: ರಷ್ಯಾ-ಉಕ್ರೇನ್ ಯುದ್ಧ ಮುಗಿಯಲ್ವಾ?
ಮಾಸ್ಕೋ: ರಷ್ಯಾ & ಉಕ್ರೇನ್ ನಡುವೆ ಹೊತ್ತಿ ಉರಿಯುತ್ತಿರುವ ಪರಿಸ್ಥಿತಿ ಒಂಚೂರು ತಣ್ಣಗಾಗಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಪಗಡೆ ಆಟ ಆಡುತ್ತಾ ಎರಡೂ ದೇಶಗಳ ನಡುವೆ ರೋಷದ ಜ್ವಾಲೆ ಧಗಧಗಿಸುತ್ತಿದೆ. ಈ ಹೊತ್ತಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೆ ದಾಳಿ ನಡೆದಿರುವುದು ಭೀಕರ ಯುದ್ಧವನ್ನ ಹತ್ತಾರು ವರ್ಷ ಎಳೆದೊಯ್ಯುವ ಮುನ್ಸೂಚನೆ ನೀಡಿದೆ. ಇದನ್ನ ಸ್ವತಃ ಪುಟಿನ್ ಸ್ನೇಹಿತ ಬಾಯಿಬಿಟ್ಟಿದ್ದಾರೆ!
ರಷ್ಯಾ & ಉಕ್ರೇನ್ ಯುದ್ಧ 456ನೇ ದಿನಕ್ಕೆ ಕಾಲಿಟ್ಟಿದೆ (Russia Ukraine War). ಇಷ್ಟುದಿನ ಪರೋಕ್ಷವಾಗಿ ಉಕ್ರೇನ್ ಪರ ನಿಂತಿದ್ದ ಅಮೆರಿಕ ನೇರವಾಗಿಯೂ ಸಹಾಯ ಮಾಡುತ್ತಿದೆ. ಉಕ್ರೇನ್‌ಗೆ ಭಾರಿ ಪ್ರಮಾಣದ ಅಸ್ತ್ರ ಪೂರೈಕೆ ಮಾಡಿದ ಆರೋಪ ಕೂಡ ಅಮೆರಿಕ ವಿರುದ್ಧ ಇದೆ. ಈ ಹೊತ್ತಲ್ಲಿ ರಷ್ಯಾ ಪಡೆಗಳು ಕೂಡ ಉಕ್ರೇನ್ ವಿರುದ್ಧ ತಮ್ಮ ದಾಳಿ ತೀವ್ರಗೊಳಿಸಿ ಸೇಡು ತೀರಿಸಿಕೊಳ್ಳುತ್ತಿವೆ. ಹಾಗೇ ಇನ್ನೊಂದ್ಕಡೆ ರಷ್ಯಾ ಮಾಧ್ಯಮ ಬೆಚ್ಚಿಬೀಳಿಸುವ ವಿಚಾರವನ್ನ ರಿವೀಲ್ ಮಾಡಿ, ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೂ ಶಾಕ್ ನೀಡಿದೆ. ಅದೇನು ಅನ್ನೋದನ್ನ ಇಲ್ಲಿ ತಿಳಿಯೋಣ.

ರೊಚ್ಚಿಗೆದ್ದ ರಷ್ಯಾ ಮಾಜಿ ಅಧ್ಯಕ್ಷ!
ಡಿಮಿಟ್ರಿ ಮೆಡ್ವೆಡೆವ್, ಈ ಹೆಸರನ್ನ ಬಹುಪಾಲು ಜನರು ಕೇಳೇ ಇರುತ್ತಾರೆ. ಏಕೆಂದರೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಪ್ತ ಡಿಮಿಟ್ರಿ ಮೆಡ್ವೆಡೆವ್. ರಷ್ಯಾ ಮಾಜಿ ಅಧ್ಯಕ್ಷ ಈ ಡಿಮಿಟ್ರಿ ಮೆಡ್ವೆಡೆವ್. ಈಗ ಪುಟಿನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡು, ಯುದ್ಧ ತಂತ್ರ ಹೆಣೆಯುತ್ತಿದ್ದಾರೆ. ಪುಟಿನ್ ಕಟ್ಟಿರುವ ಭದ್ರತಾ ಮಂಡಳಿ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್. ಇಂತಹ ವ್ಯಕ್ತಿ ಹೇಳಿಕೆಯೊಂದನ್ನ ನೀಡಿದ್ದು ರಷ್ಯಾ & ಉಕ್ರೇನ್ ಯುದ್ಧವು ಹತ್ತಾರು ವರ್ಷ ಮುಂದುವರಿಯುತ್ತೆ ಎಂದಿದ್ದಾರೆ ಅಂತಾ ರಷ್ಯಾದ ಮಾಧ್ಯಮ ಸ್ಫೋಟಕ ವರದಿ ನೀಡಿದೆ.
ಹಾಗಾದ್ರೆ ಪುಟಿನ್ ರಣತಂತ್ರ ಏನು?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗಲೇ ಜಗತ್ತು ಡಿಸೈಡ್ ಆಗಿತ್ತು. ಈ ಯುದ್ಧ ಒಂದೆರಡು ವಾರದಲ್ಲಿ ಮುಗಿದು ಹೋಗುತ್ತೆ, ರಷ್ಯಾ ಎದುರು ಉಕ್ರೇನ್ ಬೇಗ ಸೋತು ಹೋಗುತ್ತದೆ ಅಂತಾ. ಆದ್ರೆ ಈಗ ಏನಾಗಿದೆ ಹೇಳಿ? ಇನ್ನೇನು ಒಂದೂವರೆ ತಿಂಗಳು ಕಳೆದರೆ ರಷ್ಯಾ & ಉಕ್ರೇನ್ ಯುದ್ಧ 500 ದಿನ ಪೂರೈಸುತ್ತದೆ. ಹೀಗೆ ಎರಡೂ ರಾಷ್ಟ್ರಗಳ ನಡುವಿನ ಭೀಕರ ಕದನ ಇಷ್ಟುದಿನ ಮುಂದುವರಿಯಲು ಕಾರಣ ಪುಟಿನ್ ರಣತಂತ್ರವಾ? ಪುಟಿನ್ ಪ್ಲ್ಯಾನ್ ಏನಿರಬಹುದು? ಬನ್ನಿ ಅದರ ಲೆಕ್ಕಾಚಾರ ತಿಳಿಯೋಣ.

ದೀರ್ಘಕಾಲದ ಯುದ್ಧಕ್ಕೆ ರಷ್ಯಾ ಸಜ್ಜು!
ಹೌದು, ಉಕ್ರೇನ್ ಯುದ್ಧ ಶುರುವಾದ ಸಂದರ್ಭದಲ್ಲೇ ರಷ್ಯಾ ಒಂದು ದೀರ್ಘಕಾಲದ ಯುದ್ಧಕ್ಕೆ ಸಜ್ಜಾಗಿಯೇ ಬಂದಂತೆ ಕಾಣುತ್ತಿದೆ. ರಷ್ಯಾದ ಯುದ್ಧ ತಂತ್ರ & ಉಕ್ರೇನ್ ವಿರುದ್ಧ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವ ರೀತಿ ನೋಡಿದರೆ ಸಾಕು ಅನುಮಾನ ಬಾರದೆ ಇರದು. ಏಕೆಂದರೆ ಈ ಜಗತ್ತಿನಲ್ಲೇ 2ನೇ ಬಲಿಷ್ಠ ಸೇನೆಯನ್ನು ಹೊಂದಿರುವ ರಷ್ಯಾ ಪಡೆಗೆ ಉಕ್ರೇನ್ ಯಾವ ಲೆಕ್ಕ? ಆದರೂ ಯುದ್ಧ ಮುಂದುವರಿಯುತ್ತಿದೆ ಏಕೆ? ಯಾವ ಕಾರಣಕ್ಕೆ? ಎಂಬ ಪ್ರಶ್ನೆ ಮೂಡಿರುವಾಗಲೇ ಶಾಕಿಂಗ್ ನ್ಯೂಸ್ ಸಿಕ್ಕಿದೆ.
ಯುದ್ಧದ ಮೂಲಕ ಉಕ್ರೇನ್ ಸ್ನೇಹಿತರಿಗೆ ಪೆಟ್ಟು?
ಅಂದಹಾಗೆ ಇಂತಹದ್ದೊಂದು ಮಾತನ್ನ ಕೂಡ ತಳ್ಳಿಹಾಕುವಂತೆ ಇಲ್ಲ. ಹೇಗೆಂದರೆ ಉಕ್ರೇನ್ ಪರ ನಿಂತಿರುವ ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಪಾಠ ಕಲಿಸುವ ಉದ್ದೇಶ ಕೂಡ ಪುಟಿನ್ ತಲೆಯಲ್ಲಿ ಇರಬಹುದು. ಈ ಉದ್ದೇಶದ ಜೊತೆಗೆ ಯುರೋಪ್‌ನ ನ್ಯಾಟೋ ರಾಷ್ಟ್ರಗಳಿಗೆ ರಷ್ಯಾ ತಾಕತ್ ತೋರಿಸುವ ಪ್ರಯತ್ನ ಕೂಡ ಇಲ್ಲಿ ಅಡಗಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಹಾಗಾದರೆ ರಷ್ಯಾ ಬಳಿ ಅಂತಹ ತಾಕತ್ ಏನಿ? ರಷ್ಯಾ ಇಲ್ಲ ಅಂದರೆ ಯುರೋಪ್ ಕಥೆ ಏನು? ಮುಂದೆ ಓದಿ.

ತೈಲಕ್ಕಾಗಿ ರಷ್ಯಾ ಕಾಲು ಹಿಡಿಯಬೇಕು!
ಯುರೋಪ್ ರಾಷ್ಟ್ರಗಳಿಗೆ ಹತ್ತಾರು ವರ್ಷಗಳಿಂದ ರಷ್ಯಾ ದೇಶವೇ ಆಧಾರ. ಇಲ್ಲಿಂದ ಬರುವ ತೈಲ ಹಾಗೂ ಅನಿಲ ಯುರೋಪ್ ರಾಷ್ಟ್ರಗಳನ್ನ ಕಾಯುತ್ತಿವೆ. ಅದರಲ್ಲೂ ಯುರೋಪ್ ಜನ ರಷ್ಯಾ ಇಲ್ಲದೆ ಜೀವನವನ್ನೇ ನಡೆಸಲು ಆಗಲ್ಲ. ಹೀಗಿದ್ದಾಗಲೇ ರಷ್ಯಾ ಇವರಿಗೆ ನೀಡುತ್ತಿದ್ದ ಅನಿಲ, ತೈಲ ನಿಲ್ಲಿಸಿದೆ. ಹಾಗೇ ಯುರೋಪ್ ರಾಷ್ಟ್ರಗಳು ರಷ್ಯಾ ಮೇಲೆ ನಿಷೇಧ ಹೇರಿವೆ. ಇದೆಲ್ಲಾ ನೋಡಿದರೆ ಉಕ್ರೇನ್ ಯುದ್ಧ ಹೀಗೆ ಮುಂದುವರಿದರೆ ಯಾರು ತಾನೆ ಸಹಾಯ ಮಾಡುತ್ತಾ ಕೂರಲು ಸಾಧ್ಯ? ಇದೇ ರಷ್ಯಾ ಅಧ್ಯಕ್ಷರ ಐಡಿಯಾ ಆಗಿರಬಹುದು.
ಅಮೆರಿಕ ಕೊಟ್ಟ ಅಸ್ತ್ರಗಳು ಏನಾದ್ವು?
ರಷ್ಯಾ & ಉಕ್ರೇನ್ ಯುದ್ಧ 456ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 15 ದಿನದಿಂದ ಸುಮಾರು 30ಕ್ಕೂ ಹೆಚ್ಚು ರಷ್ಯಾದ ಕ್ಷಿಪಣಿಗಳನ್ನ ಹೊಡೆದು ಉರುಳಿಸಿದ್ದಾಗಿ ಉಕ್ರೇನ್ ಹೇಳಿತ್ತು. ಆದರೆ ಈಗ ಅದೆಲ್ಲಾ ಠುಸ್ ಪಟಾಕಿ ಆಗೋಗಿದೆ! ಇಂದು ರಷ್ಯಾ ಭೀಕರ ದಾಳಿ ನಡೆಸುವ ಮೂಲಕ ಉಕ್ರೇನ್‌ಗೆ ಶಾಕ್ ಕೊಟ್ಟಿದೆ. ರಷ್ಯಾ ಸೇನೆ ಹಾರಿಸಿದ ಕ್ಷಿಪಣಿ ಒಂದು ನೇರ ಡಿನಿಪ್ರೊ ನಗರದ ಆಸ್ಪತ್ರೆ ಮೇಲೆ ಬಿದ್ದಿದೆ (Russia Ukraine War). ಚಿಕಿತ್ಸೆ ಪಡೆಯಲು ಬಂದಿದ್ದ ಜನರ ಮೇಲೆ ಕ್ಷಿಪಣಿ ದಾಳಿಯಾಗಿದ್ದು, ಇಬ್ಬರು ಮೃತಪಟ್ಟು 15 ಜನ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ.

ಮುಂದೆ ಏನಾಗುತ್ತೋ ರಷ್ಯಾಗೆ ಗೊತ್ತು!
ಉಕ್ರೇನ್‌ಗೆ ಈಗ ಅಮೆರಿಕ ಮಾತ್ರವಲ್ಲ ನ್ಯಾಟೋ ಅಂದ್ರೆ ಯುರೋಪ್‌ನ ಬಹುತೇಕ ರಾಷ್ಟ್ರಗಳು ನೆರವು ನೀಡುತ್ತಿವೆ. ಉಕ್ರೇನ್ ಯುದ್ಧದಲ್ಲಿ ಗೆದ್ರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಗೆಲುವು ಸಿಗುತ್ತೆ. ಪ್ರಮುಖವಾಗಿ ಯುರೋಪ್‌ನಲ್ಲಿ ಹೊಸ ಯುಗ ಸೃಷ್ಟಿಸಿ ಅಮೆರಿಕದ ಹಿಡಿತ ಬಿಗಿ ಮಾಡುವ ಸಂಭವ ಹೆಚ್ಚಾಗಿರುವ ಕಾರಣ ಉಕ್ರೇನ್ ಗೆಲುವಿಗೆ ಅಮೆರಿಕದ ಜೊತೆ ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ಕೂಡ ಬಲವಾಗಿ ನಿಂತಿದೆ. ಅದರಲ್ಲೂ ನ್ಯಾಟೋ ಪಡೆ ಉಕ್ರೇನ್ ಗಡಿಯಲ್ಲಿ ರಹಸ್ಯವಾಗಿ ವಿನಾಶಕಾರಿ ಅಸ್ತ್ರಗಳನ್ನ ನೀಡಿ ಹೋಗುತ್ತಿರುವ ಆರೋಪ ಕೂಡ ಇದೆ.
ಭೀಕರ ಯುದ್ಧ + ಆರ್ಥಿಕ ಮಹಾ ಕುಸಿತ!
ಕೊರೊನಾ ಕಂಟಕದ ಬಳಿಕ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ, ಇದರ ನಡುವೆ ಯುದ್ಧ ಬೇರೆ ಶುರುವಾಗಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಯುರೋಪ್ ಖಂಡ ಆರ್ಥಿಕ ಕುಸಿತ ಎದುರಿಸುತ್ತಿದೆ. ಇನ್ನು ಅಮೆರಿಕದ ಪಾಡು ಕೇಳಬೇಕಿಲ್ಲ. ಈ ಕಷ್ಟದಲ್ಲೇ ಬ್ಯಾಂಕ್‌ಗಳು ಕೂಡ ಅಮೆರಿಕದಲ್ಲಿ ಬಾಗಿಲು ಹಾಕಿಕೊಂಡು ಹೋಗುತ್ತಿವೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ರಷ್ಯಾ ಸೋಲಿಸಿ, ಆದಷ್ಟು ಬೇಗ ಯುದ್ಧ ಮುಗಿಸುವ ಐಡಿಯಾ ಅಮೆರಿಕದ್ದು. ಆದ್ರೆ ಏನ್ ಮಾಡೋದು ರಷ್ಯಾ ಸೋಲುತ್ತಿಲ್ಲ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಇಡೀ ಜಗತ್ತಿಗೇ ದೊಡ್ಡ ನಷ್ಟ ಉಂಟುಮಾಡುತ್ತಿದೆ. ಹೀಗಾಗಿ ಇಡೀ ಜಗತ್ತು ರಷ್ಯಾ & ಉಕ್ರೇನ್ ವಾರ್ ನಿಲ್ಲಿಸಲು ಯೋಜಿಸುತ್ತಿದೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ಯುದ್ಧವನ್ನ ನಿಲ್ಲಿಸಲು ಆಗುತ್ತಿಲ್ಲ. ಜೊತೆಗೆ ರಷ್ಯಾ ತನ್ನ ಶತ್ರು ವಿರುದ್ಧದ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಿ, ಭಯ ಹುಟ್ಟಿಸುತ್ತಿದೆ. ಉಕ್ರೇನ್ ಕೂಡ ಬೇರೆಯವರ ಜೊತೆ ಸೇರಿ ರಷ್ಯಾ ವಿರುದ್ಧ ದಾಳಿ ನಡೆಸುತ್ತಿದೆ. ಈ ಯುದ್ಧಕ್ಕೆ ಅಮಾಯಕರ ಜೀವ ಹೋಗುತ್ತಿರುವುದು ವಿಪರ್ಯಾಸ.












Click it and Unblock the Notifications