ವಾಲಿ ಬಲ: ಉಕ್ರೇನ್ ಪರ ನಿಂತ ಈ ಯೋಧನಲ್ಲಿ ದಿನಕ್ಕೆ 40 ಜನರನ್ನು ಕೊಲ್ಲುವ ಶಕ್ತಿ!
ಕೀವ್, ಮಾರ್ಚ್ 12: ಉಕ್ರೇನ್ ನೆಲದಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಇದರ ಮಧ್ಯೆ ಜಗತ್ತು ಕಂಡ ಶ್ರೇಷ್ಠ ಸ್ನೈಪರ್ ವೊಬ್ಬರು ಉಕ್ರೇನ್ ಪರವಾಗಿ ಬಂದೂಕು ಹಿಡಿದು ನಿಂತಿದ್ದಾರೆ. ಉಕ್ರೇನ್ ಪರವಾಗಿ ಯುದ್ಧ ಭೂಮಿಗೆ ಇಳಿದ ಎರಡು ದಿನಗಳಲ್ಲೇ ರಷ್ಯಾ ಆರು ಮಂದಿ ಯೋಧರನ್ನು ಹೊಡೆದುರುಳಿಸಿದ್ದಾರೆ.
ಸಮರ ಕಲೆಯನ್ನು ಕರಗತ ಮಾಡಿಕೊಂಡಿರುವ ಹಾಗೂ ದಿನಕ್ಕೆ 40 ಮಂದಿಯನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುವ ಸ್ನೈಪರ್ ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಲಿನ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ.
ರಷ್ಯಾದ ಎದೆಯಲ್ಲಿ ನಡುಕ ಹುಟ್ಟಿಸಿರುವ ಹಾಗೂ ಉಕ್ರೇನ್ ತೋಳಿಗೆ ಬಲ ತುಂಬಿರುವ ಆ ಸ್ನೈಪರ್ ಬೇರೆ ಯಾರೂ ಅಲ್ಲ. ಒನ್ ಆಂಡ್ ಒನ್ಲಿ ವಾಲಿ. ಜಗತ್ತು ಕಂಡ ಶ್ರೇಷ್ಠ ಸ್ನೈಪರ್ ಸಾಲಿನಲ್ಲಿ ನಿಲ್ಲುವ ಈ ವಾಲಿಯ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಉಕ್ರೇನ್ ಅಧ್ಯಕ್ಷನಿಗೆ ವಾಲಿ ಬಲ
ರಷ್ಯಾ ವಿರುದ್ಧದ ಯುದ್ಧದಲ್ಲಿ ವಿದೇಶಿಗರೂ ಸಹ ಕೈಜೋಡಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟ ಸ್ಪೈಪರ್ ವಾಲಿ, ಉಕ್ರೇನ್ ಪರ ಯುದ್ಧಕ್ಕೆ ಇಳಿದಿದ್ದಾರೆ. ವರದಿಗಳ ಪ್ರಕಾರ, ಬುಧವಾರ ಅಖಾಡಕ್ಕೆ ಇಳಿದ ವಾಲಿ, ಎರಡು ದಿನಗಳಲ್ಲೇ ರಷ್ಯಾದ ಆರು ಯೋಧರನ್ನು ಕೊಂದು ಹಾಕಿದ್ದಾರೆ.

ಉಕ್ರೇನ್ ಪರ ನಿಂತಿದ್ದೇಕೆ ವಾಲಿ?
ವಾಲಿ ರಾಯಲ್ ಕೆನಡಿಯನ್ 22 ನೇ ರೆಜಿಮೆಂಟ್‌ನ ಅನುಭವಿ ಸ್ಪೈಪರ್ ಆಗಿದ್ದಾರೆ. ಫ್ರೆಂಚ್-ಕೆನಡಾದ ಕಂಪ್ಯೂಟರ್ ವಿಜ್ಞಾನಿ ಆಗಿರುವ 40 ವರ್ಷ ವಯಸ್ಸಿನ ವಾಲಿ, 2009 ಮತ್ತು 2011ರ ನಡುವೆ ನಡೆದ ಅಫ್ಘಾನಿಸ್ತಾನ ಯುದ್ಧದಲ್ಲಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಮ್ಮ ಸೇವಾವಧಿಯ ಸಮಯದಲ್ಲಿ ವಾಲಿ ಎಂಬ ಹೆಸರನ್ನು ಪಡೆದುಕೊಳ್ಳುತ್ತಾರೆ. ಅರೇಬಿಕ್ ಭಾಷೆಯಲ್ಲಿ ವಾಲಿ ಎಂದರೆ ರಕ್ಷಕ ಎಂಬ ಅರ್ಥ ಬರುತ್ತದೆ.
ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದ ವಾಲಿ, "ಯುರೋಪಿಯನ್ ಆಗಲು ಬಯಸುತ್ತಿರುವ ಜನರು ರಷ್ಯನ್ ಅಲ್ಲ ಎಂಬ ಕಾರಣಕ್ಕೆ ಬಾಂಬ್ ದಾಳಿಯನ್ನು ನಡೆಸಲಾಗುತ್ತಿದೆ. ಹೀಗಿರುವಾಗ ನಾನು ಅವರಿಗೆ ಸಹಾಯ ಮಾಡಲು ಬಯಸುತ್ತೇನೆ. ಇದು ಸರಳವಾಗಿದೆ," ಎಂದು ಹೇಳಿದ್ದರು.

ಒಂದೇ ದಿನ 40 ಜನರನ್ನು ಕೊಲ್ಲುವ ಶಕ್ತಿ ಹೊಂದಿರುವ ಸ್ಪೈಪರ್ ವಾಲಿ
ವಾಲಿ ಅವರನ್ನು ಜಗತ್ತಿನ ಶ್ರೇಷ್ಠ ಸ್ಪೈಪರ್ ಎಂದು ಕರೆಯಲಾಗುತ್ತದೆ. ಏಕೆಂದರೆ ವಾಲಿ ದಿನವೊಂದಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಒಬ್ಬ ಸ್ಪೈಪರ್ ಉತ್ತಮ ಎಂದು ಕರೆಸಿಕೊಳ್ಳುವುದಕ್ಕೆ ಸರಾಸರಿ ದಿನಕ್ಕೆ 5 ರಿಂದ 6 ಜನರನ್ನು ಕೊಲ್ಲುವ ಶಕ್ತಿಯನ್ನು ಹೊಂದಿರಬೇಕು. ಶ್ರೇಷ್ಠ ಸ್ಪೈಪರ್ ಎನ್ನಿಸಿಕೊಳ್ಳಲು ದಿನಕ್ಕೆ ಕನಿಷ್ಠ 10 ಜನರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ
ಯುರೋಪಿಯನ್ ಒಕ್ಕೂಟಕ್ಕೆ ಸೇರಿಕೊಳ್ಳಬೇಕು, ನ್ಯಾಟೋ ಸದಸ್ಯವನ್ನು ಸಂಪಾದಿಸಿಕೊಳ್ಳಬೇಕು ಎಂಬ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಒಂದೇ ಒಂದು ಬಯಕೆ ರಷ್ಯಾದ ಕಣ್ಣು ಕೆಂಪಾಗಿಸಿದೆ. ಕಳೆದ ಫೆಬ್ರವರಿ 24ರಿಂದ ಆರಂಭವಾದ ಯುದ್ಧದಿಂದ ಉಕ್ರೇನ್ ನೆಲದಲ್ಲಿ ನರಕ ಸದೃಶ್ಯ ವಾತಾವರಣ ಸೃಷ್ಟಿಯಾಗಿದೆ. ರಷ್ಯಾ ನಡೆಸುತ್ತಿರುವ ವೈಮಾನಿಕ ದಾಳಿ, ಶೆಲ್ ದಾಳಿ ಮತ್ತು ಗುಂಡಿನ ಮಳೆಗೆ ಉಕ್ರೇನ್ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಉಕ್ರೇನ್ ನೀಡಿರುವ ಮಾಹಿತಿ ಪ್ರಕಾರ, ಈವರೆಗೂ ರಷ್ಯಾದ 12,000 ಯೋಧರನ್ನು ಉಕ್ರೇನ್ ಸೈನಿಕರು ಹೊಡೆದುರುಳಿಸಿದ್ದಾರೆ.












Click it and Unblock the Notifications