Breaking: ಉಕ್ರೇನ್-ರಷ್ಯಾ ನಡುವಿನ ಸಂಧಾನ ಯಶಸ್ವಿ
ಕೀವ್, ಮಾರ್ಚ್ 29: ರಷ್ಯಾ ಆಕ್ರಮಣಕ್ಕೆ ಬೆದರಿದ ಉಕ್ರೇನ್ ತಟಸ್ಥ ನಿಲುವು ತಾಳುವುದಾಗಿ ಸಂಧಾನ ಸಭೆಯಲ್ಲಿ ಹೇಳಿದೆ. ಆ ಮೂಲಕ ರಷ್ಯಾದ ದಾಳಿಗೆ ಬೆದರಿದ ಉಕ್ರೇನ್, ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ತನ್ನ ಉದ್ದೇಶದಿಂದ ಹಿಂದೆ ಸರಿದಿದೆ.
ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಮಿಲಿಟರಿ ಚಟುವಟಿಕೆಯನ್ನು ಕಡಿಮೆ ಮಾಡುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆಯು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಸುತ್ತಮುತ್ತಲಿನ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ರಷ್ಯಾ ನಿರ್ಧರಿಸಿದೆ ಎಂದು ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮಾತುಕತೆಯ ನಂತರ ರಕ್ಷಣಾ ಸಚಿವರೊಬ್ಬರು ಹೇಳಿದ್ದಾರೆ.

ನ್ಯಾಟೋ ಒಕ್ಕೂಟದ ಕನಸು ಕೈಬಿಟ್ಟ ಉಕ್ರೇನ್
ರಷ್ಯಾದೊಂದಿಗಿನ ಇತ್ತೀಚಿನ ಸುತ್ತಿನ ಸಂಧಾನ ಮಾತುಕತೆಗಳಲ್ಲಿ ಭದ್ರತಾ ಒಕ್ಕೂಟವನ್ನು ಸೇರುವುದರ ಬದಲಿಗೆ ತಟಸ್ಥ ನಿಲುವು ತಾಳುವುದಾಗಿ ಕೀವ್ ನಿಯೋಗವು ಪ್ರಸ್ತಾಪಿಸಿದೆ. ಅಂದರೆ ನ್ಯಾಟೋ ಸೇರಿದಂತೆ ಇತರೆ ಯಾವುದೇ ಸೇನಾ ಮೈತ್ರಿಕೂಟವನ್ನು ಸೇರುವುದಿಲ್ಲ ಅಥವಾ ಸೇನೆ ನೆಲೆಗಳನ್ನು ಆಯೋಜಿಸುವುದಿಲ್ಲ ಎಂದು ನಿಯೋಗವು ಹೇಳಿದೆ.

ಒಪ್ಪಂದವೆಲ್ಲ ಓಕೆ ಆದ್ರೆ ಪುಟಿನ್-ಝೆಲೆನ್ಸ್ಕಿ ಸಭೆ
ಇಸ್ತಾನ್‌ಬುಲ್‌ನಲ್ಲಿ ಹಲವು ಗಂಟೆಗಳ ಕಾಲ ನಡೆದ ಸಭೆಯ ನಂತರ ರಷ್ಯಾದ ಮುಖ್ಯ ಸಮಾಲೋಚಕ ವ್ಲಾಡಿಮಿರ್ ಮೆಡಿಸ್ಕಿ ಇದೊಂದು "ರಚನಾತ್ಮಕ" ಮಾತುಕತೆ ಎಂದು ಹೇಳಿದರು. "ಈ ಸಭೆಯಲ್ಲಿ ಉಕ್ರೇನಿಯನ್ ಸಮಾಲೋಚಕರು ಮಂಡಿಸಿರುವ ಎಲ್ಲ ಪ್ರಸ್ತಾಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎದುರಿಗೆ ಇಡಲಾಗುತ್ತದೆ. ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾ ಮತ್ತು ಉಕ್ರೇನಿಯನ್ ವಿದೇಶಾಂಗ ಸಚಿವಾಲಯಗಳು ಒಪ್ಪಂದಕ್ಕೆ ಸಮ್ಮತಿಸಿದರೆ, ನಂತರದ ಸಂದರ್ಭದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಮತ್ತೊಂದು ಸುತ್ತಿನ ಸಂಧಾನ ಮಾತುಕತೆ ನಡೆಸುವ ಸಾಧ್ಯತೆಯಿದೆ," ಎಂದು ಮೆಡಿಸ್ಕಿ ಹೇಳಿದರು.

ಉಕ್ರೇನ್ ಪರವಾಗಿ ಬಂದ ಸಂಧಾನಕಾರನಿಗೆ ಎಚ್ಚರಿಕೆ ಸಂದೇಶ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿಗೆ ಸ್ಪಂದಿಸಿದ ರೋಮನ್ ಅಬ್ರಮೊವಿಚ್ ಸಂಧಾನ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಕಳೆದ ಫೆಬ್ರವರಿ 24ರಂದು ರಷ್ಯಾ ಘೋಷಿಸಿದ ಯುದ್ಧಕ್ಕೆ ಅಂತ್ಯ ಹಾಡುವಂತೆ ಸಂಧಾನಕ್ಕೆ ಮುಂದಾದರು. ಟರ್ಕಿಯ ಇಸ್ತಾಂಬುಲ್, ರಷ್ಯಾ ರಾಜಧಾನಿ ಮಾಸ್ಕೋ ಹಾಗೂ ಉಕ್ರೇನ್ ರಾಜಧಾನಿ ಕೀವ್ ನಡುವಿನ ಸಂಧಾನದ ಸಂದೇಶಗಳನ್ನು ಪರಸ್ಪರ ಆಯಾ ರಾಷ್ಟ್ರದ ಅಧ್ಯಕ್ಷರಿಗೆ ತಲುಪಿಸುವ ಕಾರ್ಯವನ್ನು ಮಾಡಿದರು.
ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬರೆದಿರುವ ಶಾಂತಿ-ಸಂಧಾನದ ಪತ್ರವನ್ನು ಸಂಧಾನಕಾರ ರೋಮನ್ ಅಬ್ರಮೊವಿಚ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿದರು. ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಸಂಧಾನ ಮಾತುಕತೆಗೆ ಮುಂದಾದರು. ಆದರೆ, ಈ ವೇಳೆ ಕೆರಳಿದ ಪುಟಿನ್, ಆ ಉಕ್ರೇನ್ ಅಧ್ಯಕ್ಷರನ್ನು ನಾನು ಸೋಲಿಸಿಯೇ ತೀರುತ್ತೇನೆ ಎಂದು ಗುಡುಗಿದ್ದಾರೆ ಎಂಬುದಾಗಿ ವರದಿಯಾಗಿದೆ.

34ನೇ ದಿನಗಳವರೆಗೂ ಯುದ್ಧದ ಬೆಳವಣಿಗೆಗಳೇನು?
ರಷ್ಯಾ ಆಕ್ರಮಣವನ್ನು ಶುರು ಮಾಡಿದ 34 ದಿನಗಳಲ್ಲಿ ಮರಿಯುಪೋಲ್ ನಗರವೊಂದರಲ್ಲಿಯೇ ಕನಿಷ್ಠ 5000 ಸಾವಿರ ಜನರು ಸಾವಿನ ಮನೆ ಸೇರಿದ್ದಾರೆ ಎಂದು ಉಕ್ರೇನಿಯನ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಉಪನಗರ ಇರ್ಪಿನ್ ಅನ್ನು ಉಕ್ರೇನ್ ಪಡೆಗಳು ತೊರೆದಿವೆ ಎಂದು ಆಂತರಿಕ ಸಚಿವರು ಮಾಹಿತಿ ನೀಡಿದ್ದಾರೆ.
ರಷ್ಯಾ ನಡೆಸಿರುವ ಆಕ್ರಮಣದಿಂದಾಗಿ ಕೀವ್ ನಗರದ 80,000ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಷ್ಯಾ ಪಡೆಗಳು ಆಕ್ರಮಣ ಶುರು ಮಾಡಿದವು. ಅಂದಿನಿಂದ ಇಂದಿನವರೆಗೂ ಸುಮಾರು 35 ಲಕ್ಷ ಸ್ವದೇಶಿಗಳು ಹಾಗೂ ವಿದೇಶಿಯರು ಉಕ್ರೇನ್ ನಗರಗಳನ್ನು ತೊರೆದು ಹೋಗಿದ್ದಾರೆ. ಎರಡೂ ಕಡೆಗಳಲ್ಲಿ ಯೋಧರು ಸಾವಿರಾರು ಸಂಖ್ಯೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.












Click it and Unblock the Notifications