Ukraine War: ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ 1,158 ದಿನ, ಬಡಿದಾಟ ನಿಲ್ಲುವುದು ಯಾವಾಗ?
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಶುರುವಾಗಿ ನೋಡ ನೋಡುತ್ತಲೇ 1,158 ದಿನ ಕಳೆದು ಹೋಗಿದೆ. ಉಕ್ರೇನ್ ನ್ಯಾಟೋ ಜೊತೆ ಸೇರುತ್ತಿದೆ ಎಂಬ ಆರೋಪ ಹೊರಿಸಿ ರಷ್ಯಾ ಯುದ್ಧ ಶುರು ಮಾಡಿತ್ತು, ಆ ನಂತರ ರಷ್ಯಾ ಹಾಗೂ ಉಕ್ರೇನ್ ನಡುವೆ ಕಾಡ್ಗಿಚ್ಚೇ ಹೊತ್ತಿ ದೊಡ್ಡ ಯುದ್ಧ ಧಗಧಗಿಸುತ್ತಿದೆ. ಇಂತಹ ಸಮಯದಲ್ಲೇ, ಮತ್ತೊಂದು ಸುದ್ದಿ ಉಕ್ರೇನ್‌ನ ಜನರಿಗೆ ಭಯ ಹುಟ್ಟು ಹಾಕಿದೆ. ಹಾಗಾದ್ರೆ ಏನದು ಸುದ್ದಿ? ರಷ್ಯಾ ಸೇನೆಯ ಹೊಸ ತಂತ್ರ ಏನು? ಬನ್ನಿ ತಿಳಿಯೋಣ.
ರಷ್ಯಾ & ಅಮೆರಿಕ ಹಾವು ಮತ್ತು ಮುಂಗುಸಿ ರೀತಿಯಲ್ಲಿ ಕಿತ್ತಾಡುವ ದೇಶಗಳೇ ಆಗಿದ್ದರೂ, ಡೊನಾಲ್ಡ್ ಟ್ರಂಪ್ & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಬ್ಬರೂ ಸ್ನೇಹಿತರು. ಹೀಗಿದ್ದರೂ ಯುದ್ಧವನ್ನ ನಿಲ್ಲಿಸುವ ವಿಚಾರದಲ್ಲಿ ಟ್ರಂಪ್ ಮಾತು ಕೇಳುತ್ತಿಲ್ಲ ಪುಟಿನ್. ಇದು ಇಡೀ ಜಗತ್ತಿನ ಶಕ್ತಿಶಾಲಿ ದೇಶ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೂ ಆಕ್ರೋಶ ಮೂಡುವಂತೆ ಮಾಡುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಕಾಯ್ತಿರುವ ಉಕ್ರೇನ್ ಕೂಡ ಹಲವು ದಾಳ ಉರುಳಿಸಿ, ಪ್ರಯತ್ನ ಮಾಡುತ್ತಿದೆ. ಇಷ್ಟೆಲ್ಲದರ ನಡುವೆ ರಷ್ಯಾ ಹೊಸ ಆಟ ಶುರು ಮಾಡಿದೆ.

ಉಕ್ರೇನ್ ರಾಜಧಾನಿ ರಷ್ಯಾ ವಶಕ್ಕೆ?
ಒಂದು ಕಡೆ ರಷ್ಯಾ ದಾಳಿಯನ್ನ ತಡೆಯಲು ಉಕ್ರೇನ್ ಈಗ ಅಮೆರಿಕದ ಮೊರೆ ಹೋಗಿದ್ದರೆ, ಇನ್ನೊಂದು ಕಡೆ ನಿಧಾನವಾಗಿ ರಷ್ಯಾ ಬೇರೆಯದ್ದೇ ದಾಳ ಉರುಳಿಸಿದೆ. ಉಕ್ರೇನ್ ಗಮನವು ಬೇರೆ ಕಡೆ ಇದ್ದಾಗಲೇ, ಉಕ್ರೇನ್ ರಾಜಧಾನಿ ಕೀವ್ ಮೇಲೆ ಮಾರಣಾಂತಿಕ ದಾಳಿಯ ಶುರು ಮಾಡಿರುವ ರಷ್ಯಾ ದಿಢೀರ್ ಕೀವ್ ನಗರವನ್ನು ತನ್ನ ವಶಕ್ಕೆ ಪಡೆಯಲು ಪ್ಲಾನ್ ಮಾಡಿದೆ ಎಂಬ ಸುದ್ದಿ ಹಬ್ಬಿದೆ. ಇದೇ ವಿಚಾರ ಇದೀಗ ಉಕ್ರೇನ್‌ನ ಜನರಿಗೆ ಭಯ ಹುಟ್ಟಿಸುವ ಜೊತೆಗೆ ಉಕ್ರೇನ್ ಸೇನೆಗೂ ದೊಡ್ಡ ಚಿಂತೆ ತಂದಿದೆ.
ಝೆಲೆನ್ಸ್ಕಿ ಹುಟ್ಟೂರು ಕೂಡ ಉಡೀಸ್!
ಗಡಿ ಭಾಗದಲ್ಲಿ ಇರುವ ಹಳ್ಳಿಗಳನ್ನು ಈಗಾಗಲೇ ರಷ್ಯಾ ಸೇನೆ ತನ್ನ ವಶಕ್ಕೆ ಪಡೆದಿದ್ದು, ಆ ಮೂಲಕ ಗೆಲುವಿನ ಕೇಕೆ ಹಾಕಿದೆ. ರಷ್ಯಾ ದಾಳಿ ಪರಿಣಾಮ ಇದೀಗ ಕೀವ್, ಜೈಟೋಮಿರ್, ಸುಮಿ & ಡಿಪ್ರೊಪೆಟ್ರೋಪ್ಸ್ ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದೆ. ಇಷ್ಟು ಮಾತ್ರವಲ್ಲ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹುಟ್ಟಿದ ಊರಿನ ಮೇಲೆ, ರಣ ಭೀಕರವಾದ ದಾಳಿ ನಡೆದು ಜನ ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ. ವೊಲೊಡಿಮಿರ್ ಝೆಲೆನ್ಸ್ಕಿ ಹುಟ್ಟೂರು ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿರುವ ಸಮಯದಲ್ಲೇ, ಉಕ್ರೇನ್ ರಾಜಧಾನಿ ಕೀವ್ ಕೂಡ ನರಳಿ ಹೋಗುತ್ತಿದೆ.












Click it and Unblock the Notifications