1582 ಮೃತದೇಹಗಳ ಸಾಮೂಹಿಕ ಸಮಾಧಿಗೆ ಸಾಕ್ಷಿಯಾದ ಮರಿಯೋಪೋಲ್
ಕೀವ್, ಮಾರ್ಚ್ 13: ರಷ್ಯಾದ ಕ್ರೂರತನಕ್ಕೆ ಉಕ್ರೇನ್ ನೆಲದ ಮರಿಯೋಪೋಲ್‌ನಲ್ಲಿ ಕಂಡು ಬಂದಿರುವ ಇದೊಂದು ದೃಶ್ಯ ಜೀವಂತ ಸಾಕ್ಷಿಯಾಗಿ ನಿಲ್ಲುತ್ತದೆ. ಯುದ್ಧ ಭೂಮಿಯಲ್ಲಿ ಯೋಧರ ಜೊತೆಗೆ ಪ್ರಾಣ ಬಿಟ್ಟ ಅಮಾನಕ ನಾಗರಿಕರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗುತ್ತಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಈಗಾಗಲೇ 18ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ಕಳೆದ 12 ದಿನಗಳಲ್ಲೇ 1500ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದು, ಮರಿಯೋಪೋಲ್ ನಗರದಲ್ಲಿ 1582 ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.
"ಇದೆಲ್ಲವೂ ಕೊನೆ ಆಗಬೇಕು ಎಂದು ನಾನು ಬಯಸುತ್ತೇನೆ. ಇಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬುದು ನನಗೆ ಗೊತ್ತಿಲ್ಲ. ಇದನ್ನು ಶುಕು ಮಾಡಿದ್ದು ಯಾರು ಎಂಬುದೂ ನನಗೆ ತಿಳಿದಿಲ್ಲ, ಆದರೆ ಇದೆಲ್ಲವೂ ಕೊನೆಯಾಗಬೇಕು," ಎಂದು ಶವಗಳನ್ನು ಹೂಳಲು ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡಿದ ಸಾಮಾಜಿಕ ಸೇವಾ ಕಾರ್ಯಕರ್ತ ವೊಲೊಡಿಮಿರ್ ಬೈಕೊವ್ಸ್ಕಿ ಹೇಳಿದ್ದಾರೆ.

ರಷ್ಯಾಗೆ ಉಕ್ರೇನ್ ಸೇನೆಯನ್ನು ಸೋಲಿಸಲು ಸಾಧ್ಯವಾಗಿಲ್ಲ:
"ಮಾರಿಯುಪೋಲ್ ಮುತ್ತಿಗೆ ಹಾಕಿರುವುದು ಭೂಮಿಯ ಮೇಲಿನ ಅತ್ಯಂತ ಭೀಕರ ಮಾನವೀಯ ದುರಂತವಾಗಿದೆ. ಕಳೆದ 12 ದಿನಗಳಲ್ಲಿ 1582 ನಾಗರಿಕರ ಮೃತದೇಹಗಳನ್ನು ಈ ರೀತಿಯ ಸಾಮೂಹಿಕ ಸಮಾಧಿಗಳಲ್ಲಿ ಸಮಾಧಿ ಮಾಡಲಾಗಿದೆ. ಉಕ್ರೇನಿಯನ್ ಸೈನ್ಯವನ್ನು ಸೋಲಿಸಲು ಪುಟಿನ್ ಅವರಿಗೆ ಸಾಧ್ಯವಾಗಿಲ್ಲ, ಅದರ ಬದಲಿಗೆ ನಿರಾಯುಧರ ಮೇಲೆ ಬಾಂಬ್ ದಾಳಿ ಹಾಗೂ ಮಾನವೀಯ ಸಹಾಯವನ್ನು ನಿರ್ಬಂಧಿಸುತ್ತಿದ್ದಾರೆ. ರಷ್ಯಾದ ಈ ಯುದ್ಧ ಅಪರಾಧವನ್ನು ನಿಲ್ಲಿಸುವುದಕ್ಕೆ ನಾವು ಪ್ಲ್ಯಾನ್ ಮಾಡಬೇಕಾಗಿದೆ," ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವೀಟ್ ಮಾಡಿದ್ದಾರೆ.
ರಷ್ಯಾ ಶೆಲ್ ದಾಳಿ ಸೃಷ್ಟಿಸಿದ ಭೀಕರತೆ ಚಿತ್ರಣ:
ರಷ್ಯಾ ನಡೆಸಿದ ಶೆಲ್ ದಾಳಿಯಿಂದ ಮರಿಯೋಪೋಲ್ ನಗರದಲ್ಲಿ ನೀರಿನ ಸರಬರಾಜು ಕಟ್ ಆಗಿದೆ. ನಗರದಲ್ಲಿ ಬೃಹತ್ ಕಟ್ಟಡಗಳು, ವಸತಿ ಗೃಹಗಳು ಧರೆಗೆ ಉರುಳಿವೆ. ಆಸ್ಪತ್ರೆಗಳು ಮತ್ತು ರಸ್ತೆಗಳು ನಾಶವಾಗಿವೆ. ಈ ಯುದ್ಧ ಸನ್ನಿವೇಶದ ನಡುವೆಯೂ ಉಕ್ರೇನಿಗರು ತಮ್ಮ ದೇಶ ಮತ್ತು ಪ್ರಜೆಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತಿದ್ದಾರೆ.
"ಯುದ್ಧದಿಂದಾಗಿ ಹಾಲಿನ ಉತ್ಪಾದನೆ ಮತ್ತು ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ನಮಗೆ ಕೃಷಿ ಉತ್ಪಾದನೆಗೆ ಅಗತ್ಯ ಬೀಜ, ಇಂಧನ ಮತ್ತು ರಸಗೊಬ್ಬರಗಳು ಬೇಕಾಗುತ್ತವೆ. ಬಹುಪಾಲು ರಸ್ತೆಗಳನ್ನು ಮುಚ್ಚಲಾಗಿದ್ದು, ವಿಶ್ವಾಸಾರ್ಹ ಮೂಲಗಳು ಬೇಕಾಗುತ್ತವೆ," ಎಂದು ಉಕ್ರೇನಿಯನ್ ರೈತ ಪೆಟ್ರೋ ಹೇಳಿದರು.
ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿಯ ತ್ವರಿತ ಕ್ಷೀಣ:
ಮಾಸ್ಕೋ "ವಿಶೇಷ ಮಿಲಿಟರಿ ಕಾರ್ಯಾಚರಣೆ" ಕುರಿತು ಮಾತನಾಡಿರುವ ರಷ್ಯಾ, ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿಯು ತ್ವರಿತವಾಗಿ ಕ್ಷೀಣಿಸುತ್ತಿದ್ದು, ಹಲವು ನಗರಗಳು ದುರಂತಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ. "ದುರಾದೃಷ್ಟವಶಾತ್, ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿಯು ವೇಗವಾಗಿ ಕ್ಷೀಣಿಸುತ್ತಿದೆ. ಕೆಲವು ನಗರಗಳಲ್ಲಿ ಇದು ದುರಂತದ ಪ್ರಮಾಣವನ್ನು ತಲುಪಿದೆ," ಎಂದು ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಮಿಖಾಯಿಲ್ ಮಿಜಿಂಟ್ಸೆವ್ ಹೇಳಿದ್ದಾರೆ.
ಮರಿಯೋಪೋಲ್ ಮುತ್ತಿಗೆ ಹಾಕಿದ ರಷ್ಯಾ:
ರಷ್ಯಾ ನಡೆಸಿದ 17ನೇ ದಿನದ ಆಕ್ರಮಣದಲ್ಲಿ ಮಾರಿಯುಪೋಲ್‌ನ ಪೂರ್ವ ಹೊರವಲಯದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಂಡಿದೆ ಎಂದು ಶನಿವಾರ ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾದ ಪಾಲಿಗೆ 4,30,000 ಜನರಿಗೆ ನೆಲೆಯಾಗಿರುವ ಆಯಕಟ್ಟಿನ ಬಂದರು ನಗರವಾದ ಮರಿಯೋಪೋಲ್‌ನ ಮೇಲೆ ನಿಯಂತ್ರಣ ಸಾಧಿಸುವುದು ಫೆಬ್ರವರಿ 24ರಂದು ನಡೆಸಿದ ಆಕ್ರಮಣದ ಆರಂಭದ ಆದ್ಯತೆ ಆಗಿತ್ತು. ಮರಿಯೋಪೋಲ್‌ನ ಮುತ್ತಿಗೆಯಿಂದ ಈಗಾಗಲೇ 1,582 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications