ರಷ್ಯಾದಲ್ಲಿ ಲ್ಯಾಬ್ ಟೆಕ್ನಿಷಿಯನ್ ನಿಗೂಢ ಸಾವು: ಪ್ಲೇಗ್ ಭೀತಿ ಶುರುವಾಗಿದೆಯೆ? WHO ಹೇಳಿದ್ದೇನು?

ರಷ್ಯಾ ದೇಶದ ಸೈಬೀರಿಯಾ ಪ್ರಾಂತ್ಯದಲ್ಲಿರುವ ಪ್ಲೇಗ್ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಲ್ಯಾಬ್ ಟೆಕ್ನಿಷಿಯನ್ ದಾರಿಯಾ ಶಿಪಿಲೋವಾ (Darya Shipilova) ಅವರ ಹಠಾತ್ ಸಾವು ಇದೀಗ ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ಮೂಡಿಸಿದೆ. ಅಪಾಯಕಾರಿ ರೋಗಾಣುಗಳನ್ನ ಅಧ್ಯಯನ ಮಾಡುವ ಈ ಲ್ಯಾಬ್‌ನಲ್ಲಿ ನಡೆದ ಅಚಾತುರ್ಯದಿಂದಾಗಿ ಈಕೆ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಆದರೆ, ಈ ಘಟನೆಯ ಬಳಿಕ ರಷ್ಯಾದಲ್ಲಿ ಪ್ಲೇಗ್ ಭೀತಿ ಅಥವಾ ಸಾಂಕ್ರಾಮಿಕ ರೋಗ ಹರಡುವ ಅಪಾಯ ತೀರಾ ಕಡಿಮೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿದ್ದ ಆತಂಕವನ್ನ ತುಸು ತಗ್ಗಿಸಿದೆ. ಅನಾರೋಗ್ಯ ಕಾಣಿಸಿಕೊಂಡ ಕೇವಲ ಎರಡೇ ದಿನಗಳಲ್ಲಿ ಈಕೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Russia Plague Outbreak Risk Is Low After Siberian Lab Tech Death WHO Confirms Amid US Concerns

ಸೈಬೀರಿಯಾ ಲ್ಯಾಬ್‌ನಲ್ಲಿ ಕಠಿಣ ಕ್ವಾರಂಟೈನ್ ನಿಯಮ

ಈ ಘಟನೆಯ ಬೆನ್ನಲ್ಲೇ ರಷ್ಯಾದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇರ್ಕುಟ್ಸ್ಕ್ ನಗರದಲ್ಲಿರುವ ಸಂಶೋಧನಾ ಕೇಂದ್ರ ಹಾಗೂ ಸುತ್ತಮುತ್ತಲಿನ ಹಲವು ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಾದ ಕ್ವಾರಂಟೈನ್ ಕ್ರಮಗಳನ್ನ ಜಾರಿಗೊಳಿಸಿದ್ದಾರೆ. ರಷ್ಯಾದ ಮಾಧ್ಯಮಗಳ ವರದಿ ಪ್ರಕಾರ, ಮೃತ ಶಿಪಿಲೋವಾ ಅವರ ಜೊತೆ ಕೆಲಸ ಮಾಡುತ್ತಿದ್ದ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿಯನ್ನ ಶುಕ್ರವಾರದಿಂದಲೇ ಲ್ಯಾಬ್‌ನೊಳಗೆ ಲಾಕ್ ಮಾಡಲಾಗಿದೆ.

ವೈದ್ಯಕೀಯ ಪರೀಕ್ಷೆಗಳು ಮುಗಿಯುವವರೆಗೆ ಅವರು ನೆಲ ಮತ್ತು ಕುರ್ಚಿಗಳ ಮೇಲೆಯೇ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲೂ ಇದೇ ರೀತಿಯ ನಿಯಮ ಜಾರಿಯಲ್ಲಿದ್ದು, ರೋಗಿಗಳನ್ನ ಭೇಟಿಯಾಗಲು ಸಂಬಂಧಿಕರಿಗೂ ನಿರ್ಬಂಧ ವಿಧಿಸಲಾಗಿದೆ. ಆದರೆ ರಷ್ಯಾ ಸರ್ಕಾರ ಮಾತ್ರ ಈ ಸಾವನ್ನ 'ಗುರುತು ಪತ್ತೆಯಾಗದ ನ್ಯುಮೋನಿಯಾ' ಎಂದು ಕರೆದಿದೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸ್ಪಷ್ಟನೆ

ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್‌ಮಿಯರ್ ಮಂಗಳವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ಲೇಗ್ ರೋಗವು ವ್ಯಾಪಕವಾಗಿ ಹರಡುತ್ತಿರುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಂಡುಬಂದಿಲ್ಲ ಎಂದಿದ್ದಾರೆ. "ಮೃತ ಟೆಕ್ನಿಷಿಯನ್ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪತ್ತೆಹಚ್ಚಲಾಗಿದ್ದು, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಯಾರಿಗೂ ರೋಗದ ಲಕ್ಷಣಗಳು ಕಂಡುಬಂದಿಲ್ಲ," ಎಂದು ಅವರು ತಿಳಿಸಿದ್ದಾರೆ.

ವೈರಲ್ ನ್ಯುಮೋನಿಕ್ ಪ್ಲೇಗ್‌ನಿಂದ ಶಿಪಿಲೋವಾ ಸಾವನ್ನಪ್ಪಿದ್ದಾರೆಯೇ ಎಂಬ ಬಗ್ಗೆ ರಷ್ಯಾದ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಇರ್ಕುಟ್ಸ್ಕ್ ಪ್ರದೇಶದಲ್ಲಿ ರೋಗದ ಅಪಾಯ 'ಮಧ್ಯಮದಿಂದ ಕಡಿಮೆ' ಇದ್ದರೆ, ರಷ್ಯಾದ ಇತರೆಡೆ 'ಕಡಿಮೆ' ಮತ್ತು ಯುರೋಪ್‌ಗೆ 'ತೀರಾ ಕಡಿಮೆ' ಅಪಾಯವಿದೆ ಎಂದು WHO ಅಂದಾಜಿಸಿದೆ.

ಅಮೆರಿಕದಲ್ಲಿ ಕಳವಳ

ರಷ್ಯಾದ ಈ ಬೆಳವಣಿಗೆಯನ್ನ ಅಮೆರಿಕ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು, ಈ ಪ್ರಕರಣದ ಬಗ್ಗೆ ರಷ್ಯಾ ಜಗತ್ತಿಗೆ ಹೆಚ್ಚಿನ ಮಾಹಿತಿ ನೀಡಬೇಕು ಹಾಗೂ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ರಷ್ಯಾ ಇಂತಹ ಸಮಸ್ಯೆಯನ್ನ ಎದುರಿಸುತ್ತಿರುವುದು ಬೇಸರದ ಸಂಗತಿ. ಈ ಪ್ಲೇಗ್ ಭೀತಿಯನ್ನ ಎದುರಿಸಲು ನಾವು ಅವರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತೇವೆ," ಎಂದಿದ್ದಾರೆ.

ರಷ್ಯಾದ ತಿರುಗೇಟು ಹಾಗೂ ಆರೋಗ್ಯ ಇಲಾಖೆಯ ಪ್ರತಿಕ್ರಿಯೆ

ಅಮೆರಿಕದ ಈ ಹೇಳಿಕೆಗಳಿಗೆ ರಷ್ಯಾ ಕೂಡ ತನ್ನದೇ ಶೈಲಿಯಲ್ಲಿ ತಿರುಗೇಟು ನೀಡಿದೆ. ವದಂತಿಗಳಿಗೆ ಕಿವಿಗೊಡಬೇಡಿ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಜನರಿಗೆ ಮನವಿ ಮಾಡಿದ್ದಾರೆ.

ಮತ್ತೊಂದೆಡೆ, ರಷ್ಯಾದ ಆರೋಗ್ಯ ಕಾವಲು ಸಂಸ್ಥೆ 'ರೋಸ್ಪೊಟ್ರೆಬ್ನಾಡ್ಜೋರ್' (Rospotrebnadzor), ಅಮೆರಿಕದಲ್ಲಿ ಹೆಚ್ಚುತ್ತಿರುವ ದಡಾರ ಪ್ರಕರಣಗಳು ಮತ್ತು ಜೂನ್‌ನಲ್ಲಿ ನ್ಯೂ ಮೆಕ್ಸಿಕೋದಲ್ಲಿ ವರದಿಯಾದ ಮಾರಣಾಂತಿಕ ಪ್ಲೇಗ್ ಪ್ರಕರಣವನ್ನ ಉಲ್ಲೇಖಿಸಿ, ಸಾಂಕ್ರಾಮಿಕ ರೋಗಗಳನ್ನ ನಿಭಾಯಿಸಲು ಅಮೆರಿಕಕ್ಕೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ತಿರುಗೇಟು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+