ಭಾರತ ಮೂಲದ ಪ್ರಧಾನಿ ದಿಢೀರ್ ವಲಸೆ ಅಧಿಕಾರಿ ಆಗಿದ್ದು ಏಕೆ?
ಲಂಡನ್: ಜಗತ್ತಿನಲ್ಲಿ ಭಾರತವೇ ಸ್ಟಾಂಗ್, ಅದರಲ್ಲೂ ಭಾರತದಿಂದ ಬೇರೆ ಬೇರೆ ದೇಶಗಳಿಗೆ ವಲಸೆ ಹೋದವರು ಅಧ್ಯಕ್ಷರೂ ಆಗಿದ್ದಾರೆ, ಪ್ರಧಾನಿಯೂ ಆಗಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಭಾರತ ಮೂಲದವರು. ಆದ್ರೆ ಇಂತಿಪ್ಪ ರಿಷಿ ಸುನಕ್ ಅವರು ದಿಢೀರ್ ವಲಸೆ ಅಧಿಕಾರಿ ಆಗಿ ಬದಲಾಗಿಬಿಟ್ಟರು. ಅಕ್ರಮ ವಲಸಿಗರ ವಿರುದ್ಧ ತಾವೇ ಅಖಾಡಕ್ಕೆ ಇಳಿದಿದ್ರು.
ಶಕ್ತಿಶಾಲಿ ದೇಶ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ದಿನದಿಂದಲೇ ರಿಷಿ ಸುನಕ್ ಜಗತ್ತಿನ ಗಮನ ಸೆಳೆಯುತ್ತಿದ್ದು, ಸ್ಥಳೀಯರ ಸಮಸ್ಯೆಗಳಿಗೆ ನೆರವಾಗುತ್ತಿದ್ದಾರೆ. ಅದರಲ್ಲೂ ಬ್ರಿಟನ್ ಎಂಬ ದೈತ್ಯ ರಾಷ್ಟ್ರಕ್ಕೆ ತಲೆನೋವಾಗಿ ಪರಿಣಮಿಸಿರುವ ಅಕ್ರಮ ವಲಸಿಗರನ್ನ ದೇಶದಿಂದ ಹೊರದಬ್ಬಲು ಸಜ್ಜಾಗಿದ್ದಾರೆ. ಇದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುತ್ತಿದೆ ರಿಷಿ ಸುನಕ್ ಅವರ ಬ್ರಿಟನ್ ಸರ್ಕಾರ. ಇದರ ಭಾಗವಾಗಿ ವಲಸೆ ವಿಭಾಗದ ಅಧಿಕಾರಿಗಳು ಬ್ರಿಟನ್‌ನ ಮೂಲೆ ಮೂಲೆಯಲ್ಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳ ಜೊತೆಗೆ ತಾವೂ ಅಖಾಡಕ್ಕೆ ಇಳಿದು ಸದ್ದು ಮಾಡ್ತಿದ್ದಾರೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak).

ಅಕ್ರಮ ವಲಸಿಗರಿಗೆ ಗೇಟ್ ಪಾಸ್!
ಬ್ರಿಟನ್ ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ವಲಸಿಗರ ಪ್ರವೇಶ ತಡೆಯಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೊಸ ಯೋಜನೆ ಪ್ರಕಟಿಸಿದ್ದಾರೆ. ಅಕ್ರಮವಾಗಿ ಬಂದವರು ಇಲ್ಲಿ ರಾಜಾಶ್ರಯ ಕೋರಲು ಅವಕಾಶ ನೀಡುವುದಿಲ್ಲ ಎಂದು ಕಳೆದ ಮಾರ್ಚ್‌ನಲ್ಲಿ ಖಡಕ್ ಎಚ್ಚರಿಕೆ ನೀಡಿದ್ರು. ನೀವು ಇಲ್ಲಿಗೆ ಕಾನೂನುಬಾಹಿರವಾಗಿ ಬಂದಿದ್ದರೆ ರಾಜಾಶ್ರಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಉಳಿದುಕೊಳ್ಳುವುದೂ ಸಾಧ್ಯವಿಲ್ಲ ಎಂದು ರಿಷಿ ಸುನಕ್ ಅಕ್ರಮ ವಲಸಿಗರಿಗೆ ವಾರ್ನಿಂಗ್ ಕೊಟ್ಟಿದ್ದರು. ಇದಾದ ಬಳಿಕ ಬ್ರಿಟನ್‌ನ ಮೂಲೆ ಮೂಲೆಯಲ್ಲೂ ಅಕ್ರಮ ವಲಸಿಗರಿಗಾಗಿ ಸರ್ಚಿಂಗ್ ನಡೆಯುತ್ತಿದೆ (Illegal Immigration).
105 ಅಕ್ರಮ ವಲಸಿಗರ ಬಂಧನ
ಹೀಗೆ ಬ್ರಿಟನ್ ಒಳಗೆ ಅಕ್ರಮವಾಗಿ ಬಂದು ಕೆಲಸ ಮಾಡುತ್ತಿರುವ ಅಥವಾ ಆಶ್ರಯ ಪಡೆದ ವಲಸಿಗರನ್ನ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಇದಕ್ಕೆ ದೊಡ್ಡ ಕಾರ್ಯಾಚರಣೆಯೂ ನಡೆಯುತ್ತಿದೆ. ಹೀಗೆ ವಲಸೆ ಅಧಿಕಾರಿಗಳು ನಡೆಸ್ತಿದ್ದ ಕಾರ್ಯಾಚರಣೆಗೆ ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಾಥ್ ನೀಡಿದ್ದರು. ಅಲ್ಲದೆ ನೂರಾರು ಅಕ್ರಮ ವಲಸಿಗರು ಈ ವೇಳೆ ಪತ್ತೆಯಾಗಿದ್ದು, ಸುನಕ್ ಕಾರ್ಯಾಚರಣೆ ನಡೆಸುವಾಗಲೇ ಬರೋಬ್ಬರಿ 105ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನ ಅರೆಸ್ಟ್ ಮಾಡಲಾಗಿದೆ. ಈ ಮೂಲಕ ಬ್ರಿಟನ್‌ನಲ್ಲಿ ಎಷ್ಟು ಪ್ರಮಾಣದ ಅಕ್ರಮ ವಲಸಿಗರು ಇದ್ದಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಚುನಾವಣೆಗೆ ವಲಸಿಗರ ವಿಚಾರವೇ ಮದ್ದು
ಇನ್ನೇನು ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದೇ ವೇಳೆ ಆಡಳಿತ ಪಕ್ಷವು ನೀಡಿರುವ ಪ್ರಮುಖ ಭರವಸೆಗಳಲ್ಲಿ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ಕೂಡ ಸೇರಿದೆ. ಹೀಗಾಗಿ ಅಕ್ರಮ ವಲಸಿಗರನ್ನು ಬ್ರಿಟನ್ ನೆಲದಿಂದ ಹೊರಗೆ ಕಳುಹಿಸುವ ಕೆಲಸ ತುರ್ತಾಗಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹೇಗೆ ಕಾರ್ಯಾಚರಣೆಯನ್ನ ನಡೆಸುತ್ತಾರೆ? ಅವರಿಗೆ ಎದುರಾಗುವ ಕಷ್ಟ ಎಂತಹದ್ದು? ಹೀಗೆ ಎಲ್ಲಾ ವಿಚಾರ ತಿಳಿದು ಯೋಜನೆ ಸಿದ್ಧಪಡಿಸಲು ರಿಷಿ ಸುನಕ್ ವಲಸೆ ಅಧಿಕಾರಿಯಾಗಿ ಫೀಲ್ಡ್‌ಗೆ ಬಂದಿದ್ರು ಅಂತಾ ಹೇಳಲಾಗುತ್ತಿದೆ.

ನುಗ್ಗಿ ಬರುತ್ತಿದ್ದಾರೆ ಅಕ್ರಮ ವಲಸಿಗರು!
ಅಕ್ರಮ ವಲಸಿಗರ ವಿರುದ್ಧದ ಹೊಸ ಕಾನೂನಿನ ಅಡಿಯಲ್ಲಿ, ಇಂಗ್ಲಿಷ್ ಕಾಲುವೆ ಮೂಲಕ ಅಕ್ರಮವಾಗಿ ಪ್ರವೇಶಿಸಿರುವ ಎಲ್ಲಾ ವಲಸಿಗರನ್ನೂ ಗಡಿಪಾರು ಮಾಡುವ ಕಾರ್ಯ ಸಾಗಿದೆ. ಕಳೆದ ವರ್ಷ ಸಣ್ಣ ಸಣ್ಣ ದೋಣಿಗಳ ಮೂಲಕವೇ ಇಂಗ್ಲೆಂಡ್ ಆಗ್ನೇಯ ಕರಾವಳಿ ತೀರಗಳಿಗೆ 45,000ಕ್ಕೂ ಹೆಚ್ಚು ವಲಸಿಗರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಇದೆ. 2018ರಿಂದ ಈ ಕಳ್ಳ ಮಾರ್ಗ ಹೆಚ್ಚು ಜನಪ್ರಿಯವಾಗುತ್ತಿದ್ದು, ಇಲ್ಲಿಂದ ಬರುವ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಪ್ರತಿ ವರ್ಷ ಶೇಕಡಾ 60ರಷ್ಟು ಏರಿಕೆ ಕಂಡುಬಂದಿದೆ. ಹೀಗಾಗಿ ಅಕ್ರಮ ವಲಸಿಗರ ವಿರುದ್ಧ ಈ ಮಟ್ಟಿಗೆ ದೊಡ್ಡ ಹಂತದ ಕಾರ್ಯಾಚರಣೆ ನಡೆಸುತ್ತಿದೆ ಬ್ರಿಟನ್.












Click it and Unblock the Notifications