ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ
ಜಕಾರ್ತ, ಸೆಪ್ಟೆಂಬರ್ 28: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಶುಕ್ರವಾರ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅದಾಗಿ ಕೆಲ ಹೊತ್ತಿಗೆ ಮತ್ತೊಮ್ಮೆ ಭೂ ಕಂಪನ ಸಂಭವಿಸಿದ್ದರಿಂದ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಕೇಂದ್ರ ಸುಲವೇಸಿ ಮತ್ತು ಪಶ್ಚಿಮ ಸುಲವೇಸಿ ಪ್ರಾಂತ್ಯದ ಜನರು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಆಗುವಂತೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ. ಅಮೆರಿಕ ಭೂಗರ್ಭ ಸರ್ವೇಕ್ಷಣಾ ಮಾಹಿತಿ ಪ್ರಕಾರ, 7.7 ತೀವ್ರತೆಯ ಭೂ ಕಂಪನ ಸಂಭವಿಸಿದ ಬೆನ್ನಿಗೇ 7.5 ತೀವ್ರತೆಯಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ.
ಮೊದಲ ಬಾರಿಗೆ ಸಂಭವಿಸಿದ ಭೂ ಕಂಪನಕ್ಕೆ ಕೆಲವು ಮನೆಗಳು ನಾಶವಾಗಿವೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜುಲೈ-ಆಗಸ್ಟ್ ನಲ್ಲಿ ಸಂಭವಿಸಿದ ಸರಣಿ ಭೂ ಕಂಪನದಿಂದ ಇಲ್ಲಿನ ಲಂಬೋಕ್ ದ್ವೀಪದಲ್ಲಿ ಐನೂರು ಮಂದಿ ಸಾವನ್ನಪ್ಪಿದ್ದರು.

ಹದಿನಾಲ್ಕು ವರ್ಷದ ಹಿಂದೆ ಉತ್ತರ ಇಂಡೋನೇಷ್ಯಾದ ಸುಮಾತ್ರದಲ್ಲಿ ಸಂಭವಿಸಿದ ಭೂ ಕಂಪನದಲ್ಲಿ ಹಿಂದೂ ಮಹಾಸಾಗರ ವ್ಯಾಪ್ತಿಯ ಹದಿಮೂರು ದೇಶಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇಂಡೋನೇಷ್ಯಾವೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.












Click it and Unblock the Notifications