Petrol Diesel Price: 300 ರೂಪಾಯಿ ತಲುಪಿದ ಪೆಟ್ರೋಲ್, ಡೀಸೆಲ್!
ಜನರಿಗೆ ಬದಕಲು ಏನು ಬೇಕು ಹೇಳಿ? ತಿನ್ನಲು ಅನ್ನ ಬೇಕು, ಕುಡಿಯಲು ನೀರು ಬೇಕು, ಓಡಾಟಕ್ಕೆ ಸಾರಿಗೆ ವ್ಯವಸ್ಥೆ ಬೇಕು, ಸೂಕ್ತ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆ ನೀಡಬೇಕು ಸರ್ಕಾರಗಳು. ಆದರೆ ಭಾರತದ ಪಕ್ಕದಲ್ಲೇ ಒಂದು ದೇಶ ಇದೆ. ಆ ದೇಶದ ರಾಜಕೀಯ ನಾಯಕರಿಗೆ ಬರೀ ಬಾಂಬ್, ಬುಲೆಟ್, ಗನ್ ಬೇಕು. ಹೀಗಾಗಿಯೇ ಅಲ್ಲಿನ ಜನರ ಬದುಕು ಈಗ ಸಂಪೂರ್ಣ ಬೀದಿಗೆ ಬಿದ್ದಿದೆ.
ಹೌದು ಆರ್ಥಿಕವಾಗಿ ಬೀದಿ ಪಾಲಾಗಿ ನರಳುತ್ತಿರುವ ಪಾಕಿಸ್ತಾನದಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಪಾಕ್‌ನಲ್ಲಿ ಬಡ ಜನರ ಬದುಕು ನರಳಾಡುವ ಸನ್ನಿವೇಶಕ್ಕೆ ಸಿಲುಕಿಬಿಟ್ಟಿದೆ. ದಿನನಿತ್ಯ ಬೇಕಾಗಿರುವ ವಸ್ತುಗಳು ಕೈಗೆ ಸಿಗುತ್ತಿಲ್ಲ, ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 300 ರೂಪಾಯಿ ಗಡಿ ದಾಟಿದೆ. ಇದು ಪಾಕಿಸ್ತಾನದ ಸಾಮಾನ್ಯ ಜನರಿಗೆ ಚಳಿ ಜ್ವರ ಬರಿಸಿದೆ. ಅಲ್ಲಿನ ಜನ ಕನಿಷ್ಠ ಜೀವನ ನಡೆಸಲು ಪರದಾಡುತ್ತಿದ್ದಾರೆ.

ಗಾಯದ ಮೇಲೆ ಬರೆ ಎಳೆದ ಸರ್ಕಾರ
ಆರ್ಥಿಕ ಶಿಸ್ತು ಇಲ್ಲದೆ ಪಾಕಿಸ್ತಾನ ಈಗ ಒದ್ದಾಡುತ್ತಿದೆ. ಹೀಗೆ ಅಲ್ಲಿನ ಸರ್ಕಾರ ಸಾಮಾನ್ಯ ಜನರ ಮೇಲೆ ಸಾಲದ ಹೊರೆ ಹಾಕಲು ಪರೋಕ್ಷವಾಗಿ ಮುಂದಾಗಿದೆ. ಈ ಕಾರಣಕ್ಕೆ ಪಾಕ್ ಸರ್ಕಾರ ದಿಢೀರ್ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಮಾಡಿದೆ. ದಿಢೀರ್ ಲೀಟರ್ ಪೆಟ್ರೋಲ್ ಬೆಲೆ 14.91 ರೂಪಾಯಿ ಹಾಗೂ ಹೈ ಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 18 ರೂಪಾಯಿ ಹೆಚ್ಚಳ ಮಾಡಿದೆ. ಪಾಕ್ ಹಣಕಾಸು ಸಚಿವಾಲಯ ಈ ಆದೇಶ ಹೊರಡಿಸಿದೆ. ಮೊದಲೇ ದಾರಿ ಕಾಣದೆ ನರಳುತ್ತಿದ್ದ ಪಾಕಿಸ್ತಾನ ನಾಗರಿಕರಿಗೆ ಈಗ ಬರಸಿಡಿಲು ಬಡಿದಿದೆ.
ಮೈಯೆಲ್ಲಾ ಸಾಲ ಮಾಡಿದ ಪಾಕಿಸ್ತಾನ
ಐಎಂಎಫ್‌ನಿಂದ ಅತಿ ಹೆಚ್ಚು ಸಾಲ ಪಡೆದ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ ಪಾಕ್. ಮೊದಲ 4 ಸ್ಥಾನಗಳಲ್ಲಿ ಕ್ರಮವಾಗಿ ಅರ್ಜೆಂಟಿನಾ, ಈಜಿಪ್ಟ್, ಉಕ್ರೇನ್ ಹಾಗೂ ಈಕ್ವೆಡಾರ್ ದೇಶಗಳು ಸ್ಥಾನ ಪಡೆದಿವೆ. ಇದನ್ನ ಬಿಡಿ ಪಾಕಿಸ್ತಾನದಲ್ಲಿ ಹಣದುಬ್ಬರ ಕೈಗೆ ಸಿಕ್ಕಿಲ್ಲ. ಬೆಲೆ ಏರಿಕೆ ಬಿಸಿ ಜನರಿಗೆ ತುತ್ತು ಅನ್ನಕ್ಕೂ ಸಮಸ್ಯೆ ಮಾಡುತ್ತಿದೆ. ಆದರೂ ಅಲ್ಲಿನ ರಾಜಕೀಯ ವ್ಯವಸ್ಥೆ ಮಾತ್ರ ಒಣ ಶೋಕಿ ಬಿಡುತ್ತಿಲ್ಲ. ಹೀಗಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದೆ ಪಾಕಿಸ್ತಾನದ ಆರ್ಥಿಕ ವ್ಯವಸ್ಥೆ.
Already grappling with high inflation, economic worries deepened for Pakistan residents as the government raised petrol and diesel prices to a record high pic.twitter.com/ez0bTuXQMy
— Reuters (@Reuters) September 1, 2023
ಸಾಲ ಕೊಡಿ.. ಸಾಲ ಕೊಡಿ!
ಪಾಕಿಸ್ತಾನದ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿಲ್ಲ, ಬದಲಾಗಿ ಪಾತಾಳ ಸೇರಿದೆ ಅಂತಾ ಹೇಳಬಹುದು. ಯಾಕಂದ್ರೆ ಪಾಕಿಸ್ತಾನದ ರೂಪಾಯಿಗೆ ಬೆಲೆಯೇ ಇಲ್ಲವಾಗುತ್ತಿದೆ. ಹೀಗಾಗಿ ತನ್ನ ಆರ್ಥಿಕ ಸ್ಥಿತಿ ಸರಿ ಮಾಡಲು, ಪಾಕಿಸ್ತಾನ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಹೆಚ್ಚಿಸಿದೆ. ಇದು ಸಾಲದು ಎಂಬಂತೆ ಅಮೆರಿಕದ ಡಾಲರ್ ಎದುರು ಪಾಕ್ ಕರೆನ್ಸಿ 305.6ಕ್ಕೆ ಸರ್ವಕಾಲಿಕ ಕುಸಿತ ಕಂಡಿದೆ. ಅಲ್ಲದೆ ಪಾಕಿಸ್ತಾನದಲ್ಲಿ ಸರ್ಕಾರ ವಿಸರ್ಜನೆ ಆಗಿದ್ದು, ಇದೀಗ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಮತ್ತೊಮ್ಮೆ ಆಂತರಿಕ ಕಿತ್ತಾಟಕ್ಕೆ ಸಜ್ಜಾಗಿ ನಿಂತಂತೆ ಕಾಣುತ್ತಿದೆ ಪಾಕಿಸ್ತಾನ. ಇದೇ ಕಾರಣಕ್ಕೆ ಕಂಡ ಕಂಡ ದೇಶಗಳ ಎದುರು ಕೈಚಾಚಿ ಸಾಲ ಕೇಳುತ್ತಿದೆ ಪಾಕಿಸ್ತಾನ.
ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಬೇಕು, ಅಷ್ಟಕ್ಕೂ ಈ ಮಾತು ಪಾಕ್‌ಗೆ ಮತ್ತು ಅಲ್ಲಿನ ಭ್ರಷ್ಟ ರಾಜಕಾರಣಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತೆ. ಯಾಕಂದ್ರೆ ಈ ದೇಶ ಇದೆಯಲ್ಲ ಪಾಕಿಸ್ತಾನ, ಇಲ್ಲಿ ತಿನ್ನಲು ಅನ್ನ ಇಲ್ಲ. ಗೋಧಿ ಹಿಟ್ಟಿಗೂ ಕೊಲೆಗಳು ನಡೆಯುವ ದೇಶ ಅದು. ಪರಿಸ್ಥಿತಿ ಹೀಗಿದ್ರೂ ಪಾಕಿಗಳ ಸೇನೆಗೆ ಮಾತ್ರ ಅತ್ಯಾಧುನಿಕವಾದ ಅಸ್ತ್ರವೇ ಬೇಕು. ಅದ್ರಲ್ಲೂ ಸಾವಿರಾರು ಕೋಟಿ ರೂಪಾಯಿ ಬೆಲೆಯ ವೆಪನ್ಸ್ ಬೇಕು. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಅಂತಿದ್ದಾರೆ ಅಲ್ಲಿನ ರಾಜಕಾರಣಿಗಳು. ಇದು ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುತ್ತಿದೆ. ಮುಂದೆಯಾದರೂ ಈ ಅವ್ಯವಸ್ಥೆ ಸರಿಯಾಗುತ್ತಾ? ಕಾದು ನೋಡಬೇಕಿದೆ.












Click it and Unblock the Notifications