20 ವರ್ಷಗಳಿಂದ ಒಂದು ಹನಿ ಮದ್ಯವೂ ಕುಡಿಯದ ಟೆಲಿಗ್ರಾಂ ಸಿಇಒ! ಏನಿದು ಪಾವೆಲ್ ಡುರೋವ್ ಜೀವನಶೈಲಿ?
Telegram CEO Pavel Durov: ತಡರಾತ್ರಿವರೆಗೂ ಪಾರ್ಟಿ, ವೈನ್, ಬಿಯರ್, ಡ್ಯಾನ್ಸ್ ... ಇವು ಇಂದಿನ ಕಾರ್ಪೊರೇಟ್ ಜೀವನದ ಶೈಲಿ. ಹೆಚ್ಚಿನ ಕಾಪೊರೇಟ್ ಉದ್ಯೋಗಿಗಳಿಗೂ ಉದ್ಯಮಿಗಳಿಗೂ ಮದ್ಯಪಾನ ಒಂದು ಸಾಮಾಜಿಕ ಅಭ್ಯಾಸ. ಮೀಟಿಂಗ್ ಟೇಬಲ್ ಮೇಲೆ ಮದ್ಯ ಇಲ್ಲದಿದ್ದರೆ ಮಾತುಕತೆಯೇ ಸಾಗದು.
ಆದರೆ ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಒಂದಾದ ಟೆಲಿಗ್ರಾಂ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೋವ್ ಮಾತ್ರ ಕಳೆದ 20 ವರ್ಷಗಳಿಂದ ಒಂದು ಹನಿ ಮದ್ಯವನ್ನೂ ಮುಟ್ಟಿಲ್ಲ. ಅಷ್ಟೇ ಅಲ್ಲ, ಕಾಫಿ, ಸಿಗರೇಟ್, ಮಾದಕ ವಸ್ತುಗಳು ಮತ್ತು ಸಂಸ್ಕರಿತ ಸಕ್ಕರೆಯನ್ನೂ ದೂರವಿಟ್ಟಿದ್ದಾರೆ. ಅವರ ನಂಬಿಕೆ ಒಂದೇ- ಸ್ವಚ್ಛ ಮನಸ್ಸು ಮತ್ತು ಆರೋಗ್ಯಕರ ದೇಹವೇ ಯಶಸ್ಸಿನ ಅಡಿಪಾಯ. ಹಾಗಾದರೆ ಡುರೋವ್ ಮದ್ಯಪಾನವನ್ನು ಏಕೆ ಸಂಪೂರ್ಣವಾಗಿ ತ್ಯಜಿಸಿದ್ದಾರೆ? ವೈದ್ಯರು ಮತ್ತು ಆರೋಗ್ಯ ತಜ್ಞರು ಇದಕ್ಕೆ ಏನು ಹೇಳುತ್ತಾರೆ ಎನ್ನುವ ಪ್ರಶ್ನೆಗೆ ಸಂಪೂರ್ಣ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮೆದುಳನ್ನು ಹಾಳು ಮಾಡಿಕೊಳ್ಳುವುದೇಕೆ?
ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಸಂಶೋಧಕ ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಡುರೋವ್, ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದರು. 'ಯಶಸ್ಸು ಮತ್ತು ಸಂತೋಷದ ಪ್ರಯಾಣದಲ್ಲಿ ನಿಮ್ಮ ಮೆದುಳೇ ಅತ್ಯಮೂಲ್ಯ ಸಾಧನ. ಕೆಲ ಕ್ಷಣಗಳ ಸಂತೋಷಕ್ಕಾಗಿ ಅದನ್ನು ಏಕೆ ಹಾಳು ಮಾಡಿಕೊಳ್ಳಬೇಕು? ಮದ್ಯಪಾನ ಮಾಡಿದಾಗ ಮೆದುಳಿನ ಕೆಲವು ಕೋಶಗಳ ಕಾರ್ಯ ತಾತ್ಕಾಲಿಕವಾಗಿ ಕುಂಠಿತವಾಗುತ್ತದೆ. ಮದ್ಯದ ಅಮಲು ಇಳಿದ ನಂತರವೂ ಕೆಲವು ಕೋಶಗಳಿಗೆ ಹಾನಿಯಾಗಬಹುದು. ಕೆಲವು ಸಾಯಬಹುದು. ಇದೇ ಕಾರಣಕ್ಕೆ ಶಾಲಾ ದಿನಗಳಿಂದಲೇ ಮದ್ಯದಿಂದ ದೂರ ಉಳಿಯುವ ನಿರ್ಧಾರ ಮಾಡಿಕೊಂಡಿದ್ದೇನೆ,' ಎಂದು ಪಾವೆಲ್ ಹೇಳಿದ್ದಾರೆ.
ಸಮಸ್ಯೆಯಿಂದ ದೂರ ಓಡಬೇಡಿ
ಡುರೋವ್ ಅವರ ಪ್ರಕಾರ, ಅನೇಕರು ಒತ್ತಡ, ಆತಂಕ ಅಥವಾ ಭಯದಿಂದ ತಪ್ಪಿಸಿಕೊಳ್ಳಲು ಮದ್ಯಪಾನ ಮಾಡುತ್ತಾರೆ. ಆದರೆ ಅದು ಸಮಸ್ಯೆಗೆ ಪರಿಹಾರವಲ್ಲ. 'ನಿಮಗೆ ಕುಡಿಯಬೇಕು ಎನ್ನುವ ಆಸೆಯೇ ಬರುತ್ತಿದೆಯಾದರೆ, ಮೊದಲು ಆ ಅಗತ್ಯದ ಹಿಂದಿರುವ ಕಾರಣವನ್ನು ಹುಡುಕಿ. ಸಮಸ್ಯೆಯಿಂದ ಓಡುವ ಬದಲು ಅದನ್ನು ಎದುರಿಸಿ,' ಎಂಬುದು ಅವರ ಸಲಹೆಯಾಗಿದೆ.
ಡುರೋವ್ ಕೇವಲ ಮದ್ಯವನ್ನಷ್ಟೇ ಅಲ್ಲ, ಕಾಫಿ, ಧೂಮಪಾನ, ಇತರ ಮಾದಕ ವಸ್ತುಗಳು ಮತ್ತು ಸಂಸ್ಕರಿತ ಸಕ್ಕರೆಯನ್ನೂ ಸೇವಿಸುವುದಿಲ್ಲ. ಅವರ ಅಭಿಪ್ರಾಯದಲ್ಲಿ, ಇವುಗಳೆಲ್ಲವೂ ದೇಹ ಅಥವಾ ಮನಸ್ಸಿನಲ್ಲಿ ಚಟ (Addiction) ಉಂಟುಮಾಡುವ ಸಾಧ್ಯತೆ ಹೊಂದಿವೆ. ಜೀವನದಲ್ಲಿ ಗರಿಷ್ಠ ಸಾಮರ್ಥ್ಯ ಸಾಧಿಸಬೇಕಾದರೆ ಇಂತಹ ವ್ಯಸನಕಾರಿ ವಸ್ತುಗಳಿಂದ ದೂರವಿರುವುದು ಉತ್ತಮ ಎಂದು ಅವರು ನಂಬುತ್ತಾರೆ.
ತಜ್ಞರು ಏನು ಹೇಳುತ್ತಾರೆ?
ಡುರೋವ್ ಅವರ ಕೆಲವು ಅಭಿಪ್ರಾಯಗಳು ವೈಯಕ್ತಿಕ ಜೀವನ ತತ್ವಗಳಾಗಿದ್ದರೂ, ವೈದ್ಯಕೀಯ ವಿಜ್ಞಾನವೂ ಮದ್ಯಪಾನದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮದ್ಯಪಾನವು ತಾತ್ಕಾಲಿಕವಾಗಿ ಮೆದುಳಿನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ನಿರಂತರ ಅಥವಾ ಅತಿಯಾದ ಮದ್ಯಪಾನವು ನೆನಪು, ಏಕಾಗ್ರತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಯಕೃತ್ (ಲಿವರ್) ಕಾಯಿಲೆ, ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಕೆಲವು ವಿಧದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಉತ್ತಮ ನಿದ್ರೆಗೆ ಅಡ್ಡಿಯಾಗುತ್ತದೆ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಮದ್ಯ ಬಿಡುವುದರಿಂದ ಏನು ಲಾಭ?
ವೈದ್ಯರ ಪ್ರಕಾರ, ಮದ್ಯಪಾನವನ್ನು ಸಂಪೂರ್ಣವಾಗಿ ಅಥವಾ ಗಮನಾರ್ಹವಾಗಿ ಕಡಿಮೆ ಮಾಡಿದರೆ ಹಲವು ಆರೋಗ್ಯ ಲಾಭಗಳು ಕಾಣಿಸಬಹುದು. ಅವುಗಳಲ್ಲಿ ಉತ್ತಮ ನಿದ್ರೆ, ಏಕಾಗ್ರತೆ ಹೆಚ್ಚಳ, ಯಕೃತ್ತಿನ ಆರೋಗ್ಯದಲ್ಲಿ ಸುಧಾರಣೆ, ರಕ್ತದೊತ್ತಡ ನಿಯಂತ್ರಣ, ತೂಕ ನಿಯಂತ್ರಣಕ್ಕೆ ನೆರವು, ಮಾನಸಿಕ ಸ್ಪಷ್ಟತೆ ಹೆಚ್ಚಳ ಇವು ಪ್ರಮುಖ. ಆದರೆ ಈಗಾಗಲೇ ಹೆಚ್ಚು ಮದ್ಯಪಾನ ಮಾಡುವವರು ವೈದ್ಯರ ಸಲಹೆಯಿಲ್ಲದೆ ಹಠಾತ್ ನಿಲ್ಲಿಸುವ ಬದಲು, ಅಗತ್ಯವಿದ್ದರೆ ವೈದ್ಯಕೀಯ ಮಾರ್ಗದರ್ಶನ ಪಡೆಯುವುದು ಉತ್ತಮ.
ಡುರೋವ್ ಅವರ ಜೀವನಶೈಲಿ ಅತ್ಯಂತ ಶಿಸ್ತಿನದ್ದು. ಆದರೆ ಆರೋಗ್ಯ ತಜ್ಞರ ಅಭಿಪ್ರಾಯದಲ್ಲಿ, ಪ್ರತಿಯೊಬ್ಬರೂ ಅವರಂತೆ ಬದುಕಲೇಬೇಕು ಎನ್ನುವ ನಿಯಮವಿಲ್ಲ. ಮುಖ್ಯವಾದದ್ದು ವ್ಯಸನಗಳಿಂದ ದೂರವಿರುವುದು, ಸಮತೋಲಿತ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಒತ್ತಡವನ್ನು ಆರೋಗ್ಯಕರ ರೀತಿಯಲ್ಲಿ ನಿಭಾಯಿಸುವುದು. ಈ ಅಭ್ಯಾಸಗಳು ದೀರ್ಘಾವಧಿಯಲ್ಲಿ ಉತ್ತಮ ಆರೋಗ್ಯಕ್ಕೆ ನೆರವಾಗುತ್ತವೆ.


Click it and Unblock the Notifications
