ಇಮ್ರಾನ್ ಖಾನ್ ಪಕ್ಷಕ್ಕೆ ಎಳ್ಳುನೀರು ಬಿಡುತ್ತಾ ಪಾಕ್ ಸೇನೆ?
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅರಾಜಕತೆ ಆರ್ಭಟಿಸುತ್ತಿದೆ, ಅದ್ರಲ್ಲೂ ಇಮ್ರಾನ್ ಖಾನ್‌ನ ಜೈಲಿಗೆ ಹಾಕಿ ಆಟ ನೋಡಲು ಪ್ರಯತ್ನಿಸಿದ ಪಾಕ್ ಕೇಂದ್ರ ಸರ್ಕಾರ ಮತ್ತು ಪಾಕ್ ಸೇನೆಗೆ ಅದು ವರ್ಕೌಟ್ ಆಗಲೇ ಇಲ್ಲ. ಈ ಕಾರಣಕ್ಕೆ ಬೇರೆ ದಾರಿ ಹಿಡಿದಿರುವ ಪಾಕಿಸ್ತಾನ ಸೇನೆ ಮತ್ತು ಅಲ್ಲಿನ ಸರ್ಕಾರ ಇಮ್ರಾನ್ ಖಾನ್ ಪಕ್ಷವನ್ನೇ ಬ್ಯಾನ್ ಮಾಡಿ, ಖಾನ್‌ನ ಮೂಲೆಗೆ ತಳ್ಳಲು ಮುಂದಾಗಿದೆಯಂತೆ.
ಹೌದು ಇಮ್ರಾನ್ ಖಾನ್ ಪಾಕಿಸ್ತಾನದ ಸೇನೆ ವಿರುದ್ಧ ಮಾತನಾಡಿದ್ದಾರೆ ಅನ್ನೋ ಕಾರಣಕ್ಕೆ ಖಾನ್ ಬೆಂಬಲಿಗ ಪಡೆ ರೊಚ್ಚಿಗೆದ್ದು ಗಲಾಟೆ ನಡೆಸಿತ್ತು. ಅದರಲ್ಲೂ ಪಾಕಿಸ್ತಾನದ ಸೇನಾ ನೆಲೆ ಮೇಲೂ ದಾಳಿ ನಡೆದವು. ಆಗ ತನ್ನ ಸೇನಾ ನೆಲೆ ರಕ್ಷಣೆ ಮಾಡಿಕೊಳ್ಳಲು ಆಗದ ಪಾಕಿಸ್ತಾನ ಸೇನೆ ಈಗ ಅದೇ ಕಾರಣ ಮುಂದಿಟ್ಟು ಇಮ್ರಾನ್ ಖಾನ್ ಪಕ್ಷ ಬ್ಯಾನ್ ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಅಂತೂ ಖಾನ್ (Imran Khan Arrest) ಪಕ್ಷ ಪಿಟಿಐ ಬ್ಯಾನ್ ಆಗೋದು ಬಹುತೇಕ ಪಕ್ಕಾ ಆಗುತ್ತಿದೆ.

ಪಾಕಿಸ್ತಾನ ಸರ್ಕಾರದಿಂದಲೇ ಬ್ಯಾನ್ ಹೇಳಿಕೆ!
ಅಷ್ಟಕ್ಕೂ ಇಮ್ರಾನ್ ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅನ್ನ ಬ್ಯಾನ್ ಮಾಡುವುದಾಗಿ ಹೇಳಿದ್ದು ಬೇರೆ ಯಾರೋ ಅಲ್ಲ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್. ದೇಶದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ ಹಿನ್ನೆಲೆ ಇಮ್ರಾನ್ ಖಾನ್ ಪಕ್ಷವನ್ನ ಬ್ಯಾನ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಇಂದು ಹೇಳಿದ್ದಾರೆ. ಇದು ಪಾಕ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದು, ಕಂಡ ಕಂಡ ಜಾಗದಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಬೆಂಕಿ ಇಡುವ ಮುನ್ಸೂಚನೆ ಕೊಟ್ಟಿದೆ.
ಚಾಲೆಂಜ್ ಹಾಕಿದ ಪಿಟಿಐ ವಕೀಲ!
ಇನ್ನು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿಕೆಗೆ ಇಮ್ರಾನ್ ಖಾನ್ ಪಕ್ಷದ ವಕೀಲ ತಿರುಗೇಟು ನೀಡಿ, ಚಾಲೆಂಜ್ ಮಾಡಿದ್ದಾರೆ. ಪಿಟಿಐ ಪಕ್ಷದ ವಕೀಲ ಬ್ಯಾರಿಸ್ಟರ್ ಅಲಿ ಜಾಫರ್, ರಾಜಕೀಯ ಪಕ್ಷಗಳನ್ನ ನಿಷೇಧಿಸಲು ಆಗಲ್ಲ. ಜಮಾತ್-ಎ-ಇಸ್ಲಾಮಿ ಅನ್ನ ನಿಷೇಧಿಸುವ ಪ್ರಯತ್ನ ಬಹಳ ಹಿಂದೆಯೇ ನಡೆದಿತ್ತು. ಆದರೆ, ರಾಜಕೀಯ ಪಕ್ಷ ರಚಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಹೀಗಾಗಿ ನಿಷೇಧ ಹೇರುವಂತಿಲ್ಲ ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎನ್ನುವ ಮೂಲಕ ಪಾಕಿಸ್ತಾನಿ ಕೇಂದ್ರ ಸರ್ಕಾರಕ್ಕೆ ಚಾಲೆಂಜ್ ಹಾಕಿದ್ದಾರೆ.

ಇಮ್ರಾನ್ ಖಾನ್ ವಿರುದ್ಧ ಪಿತೂರಿ?
ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಕೂಡ ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಇಮ್ರಾನ್ ಖಾನ್ ಲಾಕ್ ಆಗಿಲ್ಲ, ಹೀಗಾಗಿ ಪಕ್ಷವನ್ನೇ ಮುಗಿಸುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
5 ಸಾವಿರ ಕೋಟಿ ರೂ. ನುಂಗಿದ ಇಮ್ರಾನ್?
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಆದ್ರೂ ಇದೇ ಪ್ರಕರಣ ಸಂಬಂಧ ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಇದೇ ಸಂದರ್ಭ ಬಳಸಿ, ಖಾನ್ ಪಕ್ಷವನ್ನೇ ಬ್ಯಾನ್ ಮಾಡಲು ಇಮ್ರಾನ್ ಶತ್ರುಗಳು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಈ ಘಟನೆಗಳು ಹೊರ ಜಗತ್ತಿಗೆ ಸಿಕ್ಕಾಪಟ್ಟೆ ಎಂಟರ್‌ಟೈನ್ಮೆಂಟ್ ನೀಡುತ್ತಿರುವುದು ನಿಜ. ಪಾಕಿಸ್ತಾನದ ಮಾಜಿ ಪ್ರಧಾನಿಯನ್ನೇ ಜೈಲಿಗೆ ಹಾಕಿ, ಅದರಲ್ಲೂ ಜೈಲಿಗೆ ಹಾಕುವಾಗ ತಲೆಗೆ ಹೊಡೆದು ಪಾಕ್ ಅರೆಸೈನಿಕ ಪಡೆ ಏನೆಲ್ಲಾ ರಂಪಾಟ ಮಾಡಿತ್ತು ಅನ್ನೋದನ್ನ ಪ್ರಪಂಚ ನೋಡಿದೆ. ಈ ಮೂಲಕ ಪಾಕಿಸ್ತಾನದ ಬಂಡವಾಳ ಜಗತ್ತಿನ ಎದುರು ಬಯಲಾಗುತ್ತಲೇ ಇದೆ.












Click it and Unblock the Notifications