Imran Khan Arrest: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗಿದೆ. ಹಲವು ಕೇಸ್ ಎದುರಿಸುತ್ತಿರುವ ಇಮ್ರಾನ್ ಬೇಲ್ ಮೇಲೆ ಹೊರಗಿದ್ದರು. ಕೆಲದಿನಗಳ ಹಿಂದಷ್ಟೇ ಇಮ್ರಾನ್ ಖಾನ್ ವಿರುದ್ಧದ 9 ಪ್ರಕರಣಗಳಲ್ಲಿ ಜಾಮೀನು ವಿಸ್ತರಣೆ ಮಾಡಲಾಗಿತ್ತು. ಮತ್ತಷ್ಟು ಪ್ರಕರಣ ಬಾಕಿ ಇದ್ದ ಕಾರಣ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾದ ವೇಳೆ ಇಮ್ರಾನ್ ಬಂಧನವಾಗಿದ್ದು ಪಾಕ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಹಿಂದೆ ಇಮ್ರಾನ್ ಖಾನ್‌ಗೆ 8 ಪ್ರಕರಣಗಳಲ್ಲಿ ಜಾಮೀನು ವಿಸ್ತರಣೆ ಮಾಡಲಾಗಿತ್ತು. ಮೇ 3ರವರೆಗೂ ಜಾಮೀನು ವಿಸ್ತರಣೆ ಮಾಡಿ ಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಮೇ 4ರಂದು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿ ತಮ್ಮ ವಿರುದ್ಧದ 9 ಪ್ರಕರಣಗಳಲ್ಲಿ ಜಾಮೀನು ವಿಸ್ತರಣೆ ಮಾಡುವಂತೆ ಇಮ್ರಾನ್ ಖಾನ್ ಮನವಿ ಮಾಡಿದ್ರು. ಈ ಹಿನ್ನೆಲೆ ಮೇ 4ರಂದು ಇಮ್ರಾನ್ ಜಾಮೀನು ವಿಸ್ತರಣೆ ಮಾಡಲಾಗಿತ್ತು. ಆದ್ರೂ ಇನ್ನಷ್ಟು ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದ್ದ ಕಾರಣ ಇಮ್ರಾನ್ ಇಂದು ಕೋರ್ಟ್‌ಗೆ ಹಾಜರಾಗಿದ್ದರು.

ಪಾಕ್ ಮಾಜಿ ಪ್ರಧಾನಿಗೆ ಜೀವಕ್ಕೆ ಆಪತ್ತು?
ಉಗ್ರರ ತವರು ಪಾಕಿಸ್ತಾನದಲ್ಲಿ ಯಾರ ಜೀವಕ್ಕೂ ಗ್ಯಾರಂಟಿ ಇಲ್ಲ. ಅದ್ರಲ್ಲೂ ರಾಜಕಾರಣಿಗಳ ಜೀವ ಗಾಜಿನ ಮಡಿಕೆ ಇದ್ದಂತೆ. ಯಾವ ಕ್ಷಣದಲ್ಲು ಒಡೆದು ಹೋಗಬಹುದು. ಪರಿಸ್ಥಿತಿ ಹೀಗಿರುವಾಗಲೇ ಕಳೆದ ವರ್ಷ ಇಮ್ರಾನ್ ಖಾನ್ ಮೇಲೆ ಭೀಕರ ಗುಂಡಿನ ದಾಳಿ ನಡೆದಿತ್ತು. ಕಾಲಿಗೆ ಗುಂಡು ತಿಂದ ಇಮ್ರಾನ್ ಖಾನ್ ಜೀವ ಉಳಿಸಿಕೊಂಡರು. ಈಗ ದಿಢೀರ್ ಇಮ್ರಾನ್ (imran khan arrest) ಬಂಧವಾಗಿರುವುದು ಸಂಚಲನ ಸೃಷ್ಟಿಸಿದೆ. ಜೊತೆಗೆ ಬೂದಿ ಮುಚ್ಚಿದ ಕೆಂಡವಾಗಿದ್ದ ಪಾಕಿಸ್ತಾನದಲ್ಲಿ ಪರಿಸ್ಥಿತಿ ಮತ್ತೆ ಕೈಮೀರುವ ಮುನ್ಸೂಚನೆ ಸಿಕ್ಕಿದೆ.
ಹೈಕೋರ್ಟ್ ಹೊರಗೆ ಬರುತ್ತಿದ್ದಂತೆ ಲಾಕ್!
ಇಸ್ಲಾಮಾಬಾದ್ ಹೈಕೋರ್ಟ್ ಹೊರಗೆ ಬರುತ್ತಿದ್ದಂತೆ ಪಾಕಿಸ್ತಾನ ಪೊಲೀಸರು ಇಮ್ರಾನ್ ಖಾನ್ ಅವರನ್ನ ಹಿಡಿದು, ಪೊಲೀಸ್ ವಾಹನಕ್ಕೆ ತುಂಬಿಕೊಂಡಿದ್ದಾರೆ. ತಕ್ಷಣ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿ, ಪರಿಸ್ಥಿತಿ ಕೈಮೀರುವ ಸೂಚನೆ ಸಿಕ್ಕಿತ್ತು. ಹೀಗಾಗಿ ಕೂಡಲೇ ಅಲ್ಲಿಂದ ಇಮ್ರಾನ್ ಇದ್ದ ಪೊಲೀಸ್ ವಾಹನ ಜೈಲಿನ ಕಡೆಗೆ ತೆರಳಿದೆ. ಯಾವಾಗ ಎಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೋ ಎಂಬ ಆತಂಕದಲ್ಲಿ ಪಾಕ್ ಪ್ರಜೆಗಳು ದಿನದೂಡುವಂತಾಗಿದೆ.
ಇಮ್ರಾನ್‌ಗೆ ಅತಿಯಾದ ಆತ್ಮವಿಶ್ವಾಸ?
ಪಾಕಿಸ್ತಾನದಲ್ಲಿ ದೊಡ್ಡ ಬದಲಾವಣೆ ತಂದು ಬಿಡ್ತೀನಿ ಎಂಬ ಹುಮ್ಮಸ್ಸಿನಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಸ್ವತಃ ತಮ್ಮ ಜೀವ ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ಎದುರಾಗಿದೆ. 2 ತಿಂಗಳ ಹಿಂದೆ ಇಮ್ರಾನ್ ಮನೆ ಎದುರು ಪೊಲೀಸರು & ಇಮ್ರಾನ್ ಖಾನ್ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ 3 ಕೇಸ್ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿದ್ದವು. ಜೊತೆಗೆ ಇನ್ನೂ ಹಲವು ಕೇಸ್‌ಗಳನ್ನ ಇಮ್ರಾನ್ ಖಾನ್ ವಿರುದ್ಧ ಹಾಕಲಾಗಿತ್ತು. ಈಗ ಅದೇ ನಪ ಹಿಡಿದು ಇಮ್ರಾನ್ ಖಾನ್ ಬಂಧನವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜಾಮೀನು ವಿಸ್ತರಿಸಿದರೂ ಸಮಸ್ಯೆ!
ಹಿಂದೆ ಇಮ್ರಾನ್ ಖಾನ್‌ಗೆ 8 ಪ್ರಕರಣಗಳಲ್ಲಿ ಜಾಮೀನು ವಿಸ್ತರಣೆ ಮಾಡಲಾಗಿತ್ತು. ಮೇ 3ರವರೆಗೆ ಜಾಮೀನು ವಿಸ್ತರಣೆ ಮಾಡಿ ಕೋರ್ಟ್ ಆದೇಶ ನೀಡಿತ್ತು. ಇದೀಗ ಒಟ್ಟು 9 ಪ್ರಕರಣಗಳಲ್ಲಿ ಇಮ್ರಾನ್ ಖಾನ್‌ಗೆ ಜಾಮೀನು ವಿಸ್ತರಣೆ ಮಾಡಲಾಗಿತ್ತು. ಇಸ್ಲಾಮಾಬಾದ್ ಹೈಕೋರ್ಟ್‌ಗೆ ಖುದ್ದಾಗಿ ಹಾಜರಾದ ಬಳಿಕ ಪಾಕ್ ಮಾಜಿ ಪ್ರಧಾನಿಗೆ ಸಿಹಿಸುದ್ದಿ ಸಿಕ್ಕಿದೆ ಎನ್ನುವಷ್ಟರಲ್ಲೇ ಪೊಲೀಸರು ಎತ್ತಾಕೊಂಡು ಹೋಗಿದ್ದಾರೆ. ತಮ್ಮ ವಿರುದ್ಧ ಇರುವ ಪ್ರಕರಣ ಎದುರಿಸಲು ಇಮ್ರಾನ್ ಖಾನ್ ಪರದಾಡುವ ಪರಿಸ್ಥಿತಿ ಇದ್ದಾಗಲೇ ಜೈಲಿನ ದರ್ಶನ ಕೂಡ ಆಗುತ್ತಿದೆ.
ಗುಂಡು ತಿಂದು ಬದುಕಿದ್ದ ಇಮ್ರಾನ್!
ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಇಮ್ರಾನ್ ಖಾನ್ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಹೇಗೋ ಬಚಾವ್ ಆಗಿ ಜೀವ ಉಳಿಸಿಕೊಂಡರು ಪಾಕ್ ಮಾಜಿ ಪ್ರಧಾನಿ. ಆದರೆ ಈಗಲೂ ಅಂತಹದ್ದೇ ಬೆದರಿಕೆ ಕರೆಗಳು ಹಾಗೂ ಇಮ್ರಾನ್ ಕೊಲೆಗೆ ಪ್ರಯತ್ನಗಳು ಸಾಗಿವೆ. ಇದರ ನಡುವೆ ಪಾಕ್ ಕ್ರಿಕೆಟ್ ಟೀಂ ಮಾಜಿ ಆಟಗಾರ ಕಂ ಪಾಕ್ ಮಾಜಿ ಪ್ರಧಾನಿ ಜೈಲು ಸೇರಿದ್ದು, ಇಮ್ರಾನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಒಟ್ನಲ್ಲಿ ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಅನ್ನೋ ರೀತಿ ಪಾಕಿಸ್ತಾನ ವರ್ತಿಸುತ್ತಿದೆ. ಇಮ್ರಾನ್ ಖಾನ್ ಬಂಧನದ ವಿರುದ್ಧ ಭಾರಿ ಆಕ್ರೋಶ ಭುಗಿಲೆದ್ದಿದೆ. ಇದು ಅಲ್ಲಿನ ಆಡಳಿತಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಮತ್ತೊಂದ್ಕಡೆ ಜೈಲು ಸೇರಿರುವ ಇಮ್ರಾನ್ ಖಾನ್ ಭದ್ರತೆ ವಿಚಾರ ಕೂಡ ಹಲವು ಸವಾಲುಗಳನ್ನ ಸೃಷ್ಟಿಮಾಡಿದೆ.












Click it and Unblock the Notifications