Imran Khan: ಜೈಲಿಂದ ಹೊರಗೆ ಬಂದು, ಮತ್ತೆ ಒಳಗೆ ಹೋದ್ರು ಇಮ್ರಾನ್!
ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಬಾಳಲ್ಲಿ ವಿಧಿಯಾಟ ನಿಂತಿಲ್ಲ. ಈ ಕಾರಣಕ್ಕೆ ಇಮ್ರಾನ್ ಖಾನ್ ಮತ್ತೆ ಒಳಗೆ ಹೋಗಿದ್ದಾರೆ. ತೋಷಾಖಾನ ಭ್ರಷ್ಟಾಚಾರ ಕೇಸ್‌ನಲ್ಲಿ ಜೈಲು ಸೇರಿದ್ದರು ಇಮ್ರಾನ್. ಆದ್ರೆ ಇಂದು ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಅವರ ಬಿಡುಗಡೆ ಆಗಿತ್ತು. ಆದರೆ ರಹಸ್ಯ ದಾಖಲೆ ಸೋರಿಕೆ ಆರೋಪದಡಿ ಮತ್ತೊಮ್ಮೆ ಇಮ್ರಾನ್‌ಗೆ ಜೈಲು ದರ್ಶನವಾಗಿದೆ.
ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದಲ್ಲಿ ನೂರಕ್ಕು ಹೆಚ್ಚು ಕೇಸ್‌ಗಳು ದಾಖಲಾಗಿವೆ. ಈ ಕಾರಣಕ್ಕೆ ಇಮ್ರಾನ್ ಯಾವಾಗ ಬೇಕಾದರೂ ಜೈಲು ಸೇರಬಹುದು ಎಂಬ ಸ್ಥಿತಿ ಇದೆ. ಈಗ ಮತ್ತೊಮ್ಮೆ ಈ ಮಾತು ಪ್ರೂವ್ ಆಗಿದೆ. ಇಂದು ಮಧ್ಯಾಹ್ನ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್ ಬಿಡುಗಡೆಗೆ ಆದೇಶ ನೀಡಿ, ಅವರ ವಿರುದ್ಧ ವಿಧಿಸಿದ್ದ 3 ವರ್ಷ ಜೈಲು ಶಿಕ್ಷೆಯ ತೀರ್ಪನ್ನು ತಡೆ ಹಿಡಿದಿದೆ. ಆದರೆ ಈಗ ನೋಡಿದರೆ ರಹಸ್ಯ ದಾಖಲೆ ಸೋರಿಕೆಯ ಆರೋಪ ಇಮ್ರಾನ್ ಖಾನ್ ಕೊರಳಿಗೆ ಸುತ್ತಿಕೊಂಡಿದೆ. ಇಮ್ರಾನ್ ಮೇಲೆ ದಾಖಲಾಗಿರುವ ಕೇಸ್‌ಗಳಲ್ಲೇ ಇದು ಅತಿ ಭಯಾನಕ ಮತ್ತು ಕಠಿಣ ಪ್ರಕರಣ ಎಂದು ವಿಶ್ಲೇಷಿಸಲಾಗಿದೆ.

ಏನಿದು ರಹಸ್ಯ ದಾಖಲೆ ಸೋರಿಕೆ?
ಖ್ಯಾತ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಏರಿದ್ದರು. ಆದ್ರೆ ಅಲ್ಲಿನ ಸೇನೆ ಹಾಗೂ ಪಾಕಿಸ್ತಾನದ ಐಎಸ್‌ಐ ವಿರೋಧವನ್ನ ಕಟ್ಟಿಕೊಂಡು ಮಾಜಿ ಪ್ರಧಾನಿ ಆಗಿದ್ದಾರೆ ಎಂಬ ಆರೋಪ ಇದೆ. ಇಷ್ಟೆಲ್ಲದರ ಮಧ್ಯೆ ಇಮ್ರಾನ್ ಖಾನ್ ತಮ್ಮನ್ನ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಅಮೆರಿಕ ಬೆಂಬಲಿತ ಪಿತೂರಿ ನಡೆದಿತ್ತು ಎಂದು ಆರೋಪಿಸಿದ್ದರು. ಈ ಆರೋಪ ಇಮ್ರಾನ್‌ಗೆ ಮುಳುವಾಗಿದೆ. ಪಿಎಂ ಹುದ್ದೆಯಿಂದ ಕೆಳಗೆ ಇಳಿಸುವ ಮುನ್ನ ಕೆಲ ದಾಖಲೆಗಳನ್ನ ಇಮ್ರಾನ್ ಪ್ರದರ್ಶನ ಮಾಡಿದ್ದರು, ಅದೇ ಈಗ ಸಂಕಷ್ಟ ತಂದೊಡ್ಡಿದೆ. ಜೈಲಿಂದ ಹೊರಗೆ ಬರುತ್ತಿದ್ದಂತೆ ಇಮ್ರಾನ್ ಖಾನ್‌ರನ್ನ ರಹಸ್ಯ ದಾಖಲೆ ಕೇಸ್‌ನಲ್ಲಿ ಮತ್ತೆ ಬಂಧಿಸಲಾಗಿದೆ.

ಒಂದಲ್ಲ.. ಎರಡಲ್ಲ.. 140 ಕೇಸ್!
ಇಮ್ರಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಕೊಲೆ ಯತ್ನವೂ ಸೇರಿ ಭ್ರಷ್ಟಾಚಾರ ಕೇಸ್‌ಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಮೇಲೆ ಒತ್ತಡ ಹೇರಿ, ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ₹13 ಕೋಟಿ ರೂಪಾಯಿಗೆ ಖರೀದಿಸಿದ ಆರೋಪ ಕೇಳಿಬಂದಿತ್ತು. ಹೀಗೆ ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ. ಹೀಗೆ ಯಾವ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಯಾವಾಗ ಕಂಟಕ ಎದುರಾಗುತ್ತೋ ಗೊತ್ತೇ ಆಗ್ತಿಲ್ಲ. ಇದು ಇಂದು ಮತ್ತೊಮ್ಮೆ ಪ್ರೂವ್ ಆಗಿದೆ. ಜೈಲಿಂದ ಹೊರಗೆ ಬಂದ ಇಮ್ರಾನ್ ತಮ್ಮ ಮನೆಗೂ ಹೋಗದೆ ಮತ್ತೆ ಜೈಲು ಸೇರಿದ್ದಾರೆ.

ಮಧ್ಯಾಹ್ನ ಸಿಹಿಸುದ್ದಿ, ಸಂಜೆ ಮತ್ತೆ ಕಹಿ!
ಅಷ್ಟಕ್ಕೂ ಇಮ್ರಾನ್ ಖಾನ್ ತಾವು ಪಾಕಿಸ್ತಾನ ಪ್ರಧಾನಿಯಾಗಿದ್ದ ಸಮಯದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಪ್ರಧಾನಿ ಆಗಿದ್ದ ಇಮ್ರಾನ್‌ಗೆ ಬಂದಿದ್ದ ಉಡುಗೊರೆ ಮಾರಾಟ ಮಾಡಿ, ಹೀಗೆ 14 ಕೋಟಿ ರೂಪಾಯಿ ಗಳಿಸಿದ್ದ ಆರೋಪ ಎದುರಿಸಿದ್ದರು ಇಮ್ರಾನ್. ಕೇಸ್ ಸಂಬಂಧ ಇಮ್ರಾನ್‌ಗೆ 3 ಜೈಲು ಶಿಕ್ಷೆ ಸೇರಿ 1 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿತ್ತು ಪಾಕಿಸ್ತಾನ ಕೋರ್ಟ್. ಹೀಗೆ ಕೆಳಹಂತದ ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು ಇಮ್ರಾನ್ ಖಾನ್. ಈ ಕಾನೂನು ಹೋರಾಟದಲ್ಲಿ ಇಮ್ರಾನ್‌ಗೆ ದೊಡ್ಡ ಗೆಲುವು ಸಿಕ್ಕಿತ್ತು. ಆದರೆ ಇನ್ನೇನು ಜೈಲು ಕೊಣೆಯಿಂದ ಹೊರಗೆ ಬಂದು, ಮನೆಗೆ ಹೋಗುವಷ್ಟರಲ್ಲಿ ಮತ್ತೆ ಜೈಲಿಗೆ ಹೋಗಿದ್ದಾರೆ.












Click it and Unblock the Notifications