ಅಮೆರಿಕಕ್ಕೆ ಅಕ್ರಮ ವಲಸೆ: 2025ರಲ್ಲಿ 23,830 ಭಾರತೀಯರು ಸೆರೆ, 20 ನಿಮಿಷಕ್ಕೊಬ್ಬರ ಬಂಧನ
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಗಳು ಮತ್ತು ಗಡಿಯಲ್ಲಿನ ಹದ್ದಿನ ಕಣ್ಣಿನ ನಡುವೆಯೂ ಭಾರತೀಯರ 'ಅಮೆರಿಕ ಕನಸು' ಅಪಾಯಕಾರಿ ಹಾದಿಯನ್ನು ಹಿಡಿಯುತ್ತಲೇ ಇದೆ. ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಬಿಡುಗಡೆ ಮಾಡಿರುವ ಆಘಾತಕಾರಿ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಅಮೆರಿಕದ ಗಡಿಯಲ್ಲಿ ಪ್ರತಿ 20 ನಿಮಿಷಕ್ಕೆ ಒಬ್ಬ ಭಾರತೀಯ ಅಕ್ರಮ ವಲಸಿಗ ಸಿಕ್ಕಿಬಿದ್ದಿದ್ದಾನೆ.
ಜನವರಿಯಿಂದ ಡಿಸೆಂಬರ್ 2025 ರ ಅವಧಿಯಲ್ಲಿ ಒಟ್ಟು 23,830 ಭಾರತೀಯರನ್ನು ಅಮೆರಿಕದ ಗಡಿ ಭದ್ರತಾ ಪಡೆಗಳು ತಡೆಹಿಡಿದಿವೆ. 2024ರಲ್ಲಿ ಈ ಸಂಖ್ಯೆ ಬರೋಬ್ಬರಿ 85,119 ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದರೂ, ಭಾರತವು ಇನ್ನೂ ಅಮೆರಿಕಕ್ಕೆ ಅಕ್ರಮವಾಗಿ ನುಸುಳುವವರ ಪ್ರಮುಖ ಮೂಲ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂಬುದು ಕಟುಸತ್ಯ.

ಉದ್ಯೋಗದ ಹುಡುಕಾಟದಲ್ಲಿ ಅಪಾಯದ ಪಯಣ
ಅಮೆರಿಕದ ಗಡಿಯಲ್ಲಿ ಸಿಕ್ಕಿಬಿದ್ದವರಲ್ಲಿ ಬಹುತೇಕರು ವಯಸ್ಕರು. ಇವರು ಉತ್ತಮ ಉದ್ಯೋಗ ಮತ್ತು ಹೆಚ್ಚು ಸಂಬಳದ ಆಸೆಯೊಂದಿಗೆ ಪ್ರಾಣವನ್ನೇ ಪಣಕ್ಕಿಟ್ಟು ಈ ಸಾಹಸಕ್ಕೆ ಕೈಹಾಕಿದ್ದಾರೆ. ಆದರೆ, ಇದಕ್ಕಿಂತಲೂ ಆತಂಕಕಾರಿ ವಿಷಯವೇನೆಂದರೆ, ಗಡಿ ಭಾಗಗಳಲ್ಲಿ ಪೋಷಕರಿಲ್ಲದ ಅನಾಥ ಮಕ್ಕಳೂ ಪತ್ತೆಯಾಗುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ, ಅಂದರೆ ಜನವರಿ 2022 ರಲ್ಲಿ ಗುಜರಾತ್‌ನ ಡಿಂಗುಚಾ ಗ್ರಾಮದ ಒಂದೇ ಕುಟುಂಬದ ನಾಲ್ವರು ಸದಸ್ಯರು ಕೆನಡಾದಿಂದ ಅಮೆರಿಕಕ್ಕೆ ನುಸುಳುವಾಗ ಕೊರೆಯುವ ಚಳಿಯಲ್ಲಿ ಹೆಪ್ಪುಗಟ್ಟಿ ಸಾವನ್ನಪ್ಪಿದ್ದರು. ಆ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಅಂತಹ ಘೋರ ದುರಂತಗಳು ಕಣ್ಣಮುಂದಿದ್ದರೂ, ಇಂದಿಗೂ ದಲ್ಲಾಳಿಗಳ ಮಾತು ನಂಬಿ ಮಕ್ಕಳನ್ನು ಈ ಅಪಾಯಕಾರಿ ಹಾದಿಗೆ ತಳ್ಳುತ್ತಿರುವುದು ವಿಪರ್ಯಾಸ.
ಸಂಖ್ಯೆ ಇಳಿಕೆಯಾಗಿದ್ದು ಏಕೆ?
ಟ್ರಂಪ್ ಆಡಳಿತವು ಗಡಿ ನಿಯಂತ್ರಣದಲ್ಲಿ ಜಾರಿಗೊಳಿಸಿರುವ ಕಠಿಣ ಕ್ರಮಗಳೇ ವಲಸಿಗರ ಸಂಖ್ಯೆ ಇಳಿಕೆಯಾಗಲು ಮುಖ್ಯ ಕಾರಣ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.
* ಬಲವಾದ ಕಣ್ಗಾವಲು: ಸ್ಮಗ್ಲಿಂಗ್ ಅಥವಾ ಕಳ್ಳಸಾಗಣೆ ಮಾರ್ಗಗಳ ಮೇಲೆ ಕಣ್ಣಿಡಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
* ICE ಕಾರ್ಯಾಚರಣೆ: 'ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್' (ICE) ಏಜೆನ್ಸಿಯು ಅಕ್ರಮ ವಲಸಿಗರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದೆ.
* ಕಠಿಣ ಶಿಕ್ಷೆ: ಸಿಕ್ಕಿಬಿದ್ದವರಿಗೆ ಜೈಲು ಶಿಕ್ಷೆ ಮತ್ತು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ.
ವಲಸೆ ಪ್ರಕ್ರಿಯೆಯನ್ನು ಅಧ್ಯಯನ ಮಾಡುತ್ತಿರುವ ತಜ್ಞರ ಪ್ರಕಾರ, "ಈ ಅಂಕಿ ಅಂಶಗಳು ಅಕ್ರಮ ವಲಸೆಗೆ ತಡೆಯೊಡ್ಡಿರುವುದನ್ನು ತೋರಿಸುತ್ತವೆಯೇ ಹೊರತು, ಅದು ಸಂಪೂರ್ಣವಾಗಿ ನಿಂತಿದೆ ಎಂದಲ್ಲ. "ಅಮೆರಿಕದಲ್ಲಿ ಸಿಗುವ ಆರ್ಥಿಕ ಭದ್ರತೆ ಮತ್ತು ಡಾಲರ್ ಗಳಿಕೆಯ ಆಕರ್ಷಣೆ ಭಾರತೀಯರನ್ನು, ವಿಶೇಷವಾಗಿ ಗುಜರಾತ್ ಮತ್ತು ಪಂಜಾಬ್ ಭಾಗದ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಒಂದು ಕಡೆ ಕಾವಲು ಬಿಗಿಯಾದಂತೆ, ಮಾನವ ಕಳ್ಳಸಾಗಣೆದಾರರು ಹೊಸ ಮತ್ತು ಹೆಚ್ಚು ಅಪಾಯಕಾರಿ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. "ಡಂಕಿ" (Donkey) ರೂಟ್ ಎಂದು ಕರೆಯಲ್ಪಡುವ ಈ ಅಕ್ರಮ ಹಾದಿಯಲ್ಲಿ ದಕ್ಷಿಣ ಅಮೆರಿಕದ ಕಾಡುಗಳು, ಮೆಕ್ಸಿಕೋದ ಮರುಭೂಮಿ ಅಥವಾ ಕೆನಡಾದ ಹಿಮಭರಿತ ಪ್ರದೇಶಗಳನ್ನು ದಾಟಬೇಕಾಗುತ್ತದೆ.
ಭಾರತೀಯ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, "ಅಮೆರಿಕದ ಕಠಿಣ ನೀತಿಗಳಿಂದಾಗಿ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ ಎಂಬುದು ನಿಜ. ಆದರೆ ಗುಜರಾತಿಗಳಲ್ಲಿ ಅಮೆರಿಕದಲ್ಲಿ ನೆಲೆಸಬೇಕು ಎಂಬ ಆಸೆ ಎಷ್ಟಿದೆ ಎಂದರೆ, ಅವರು ಎಷ್ಟೇ ರಿಸ್ಕ್ ಇದ್ದರೂ ಅದನ್ನು ಎದುರಿಸಲು ಸಿದ್ಧರಾಗಿದ್ದಾರೆ." ಒಟ್ಟಿನಲ್ಲಿ, ಗೋಡೆಗಳು ಎಷ್ಟೇ ಎತ್ತರವಾದರೂ, ಕನಸು ಕಾಣುವವರ ಮನಸ್ಸು ಬದಲಾಗುವವರೆಗೂ ಈ ಕಳ್ಳಾಟ ಮುಂದುವರಿಯುವ ಸಾಧ್ಯತೆಯಿದೆ.












Click it and Unblock the Notifications