ಯುದ್ಧಕ್ಕೆ ಸಿದ್ಧವಾಗಿರಲು ಸೇನೆಗೆ ಸೂಚಿಸಿದ ಕಿಮ್ ಜಾಂಗ್ ಉನ್!
ಉತ್ತರ ಕೊರಿಯಾ ಮತ್ತೊಮ್ಮೆ ರೊಚ್ಚಿಗೆದ್ದಿದೆ. ಅತ್ತ ಜಪಾನ್, ದಕ್ಷಿಣ ಕೊರಿಯಾ ಜೊತೆಗೆ ಸೇರಿ ಅಮೆರಿಕ ಜಂಟಿ ಸಮರಭ್ಯಾಸ ನಡೆಸುತ್ತಿದೆ. ಈ ವೇಳೆ ರೊಚ್ಚಿಗೆದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಂ ಅಧ್ಯಕ್ಷ ಕಿಮ್ ಜಾಂಗ್ ಉನ್ ಸೈನಿಕರಿಗೆ ಯುದ್ಧಕ್ಕೆ ಸಿದ್ಧವಾಗಿರಿ ಎಂದು ಸೂಚನೆ ನೀಡಿದ್ದಾನೆ. ಹೀಗಾಗಿ ಮತ್ತೊಮ್ಮೆ ಉತ್ತರ ಕೊರಿಯಾದಿಂದ ದಾಳಿಯ ಆತಂಕವು ಎದುರಾಗಿದೆ.
ಉತ್ತರ ಕೊರಿಯಾ ನೌಕಾಸೇನೆ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿರುವ ಸರ್ವಾಧಿಕಾರಿ ಕಿಮ್, ಶತ್ರುಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಅಲ್ಲದೆ ಅಮೆರಿಕ ಅಧ್ಯಕ್ಷ ಬೈಡನ್ ಸೇರಿದಂತೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಮುಖ್ಯಸ್ಥರನ್ನು ಬೈದಿದ್ದಾನೆ. ಈ ಪರಿಸ್ಥಿತಿ ನೋಡಿದರೆ ನಮಗೆ ಅಪಾಯ ಎದುರಾಗಬಹುದು. ಹೀಗಾಗಿ ನಮ್ಮ ನೌಕಾ ಸೇನೆ ಉತ್ತರ ಕೊರಿಯಾ ಜಲಗಡಿಯ ಸುತ್ತಲೂ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ಹೀಗಿದ್ದಾಗ ಮಾತ್ರ ನಾವು ನಮ್ಮ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದಿದ್ದಾನೆ ಕಿಮ್ ಜಾಂಗ್ ಉನ್.

ಗಡಿ ಕಾಯುವಂತೆ ಯೋಧರಿಗೆ ಸೂಚನೆ!
ಹಾಗೇ ಪರಮಾಣು ಯುದ್ಧದ ಬಗ್ಗೆಯೂ ಕಿಮ್ ಜಾಂಗ್ ಉನ್ ಮಾತನಾಡಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ಒಟ್ಟಾಗಿ ಜಂಟಿ ಸೇನಾ ಕಸರತ್ತು ನಡೆಸಿದ್ದಾರೆ. ಈ ಮೂಲಕ ಉತ್ತರ ಕೊರಿಯಾ ಮೇಲೆ ಪರಮಾಣು ಅಸ್ತ್ರ ಬಳಕೆಯಾಗುವ ಭೀತಿ ಇದೆ. ಹೀಗಾಗಿ ನಾವು ಸದಾ ಎಚ್ಚರಿಕೆ ವಹಿಸಬೇಕು. ನೌಕಾ ಸೇನೆ ಯೋಧರು ನಮ್ಮ ಜಲಗಡಿ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಾಗಿ ಗಸ್ತು ತಿರಗಲಿ ಎಂದು ಸೂಚಿಸಿದ್ದಾನೆ. ಹೀಗೆ ಸರ್ವಾಧಿಕಾರಿ ಕೊಟ್ಟ ಆದೇಶಕ್ಕೆ ಯಾರಾದರೂ ಮರು ಮಾತನಾಡಿ ಉಳಿಯುವುದು ಸಾಧ್ಯವಾ? ಇಲ್ಲ ತಾನೆ, ಅದಕ್ಕೆ ಉ.ಕೊರಿಯಾ ಸೈನಿಕರು ಹೌದು ಹೌದು ಎಂದಿದ್ದಾರೆ.
ಇದು ಒಂದು ಕಡೆಯಾದರೆ ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಸ್ಫೋಟದಿಂದ ಭಯ ಮೂಡಿದೆ. ಕಿಮ್ ಜಾಂಗ್ ಉನ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂಬ ಆರೋಪ ಈಗ ಕೇಳಿಬಂದಿದೆ. ಹೀಗಾಗಿ ಉತ್ತರ ಕೊರಿಯಾ ಅಲರ್ಟ್ ಆಗಿ ತನ್ನ ಶತ್ರುಗಳ ಮೇಲೆ ಕಣ್ಣಿಟ್ಟು ಕೂತಿದೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಸ್ವತಃ ಉತ್ತರ ಕೊರಿಯಾ ಸರ್ವಾಧಿಕಾರಿ ಎಚ್ಚರಿಕೆ ಸಂದೇಶ ನೀಡಿದ್ದಾನೆ. ಶತ್ರು ರಾಷ್ಟ್ರಗಳ ವಿರುದ್ಧ ಗುಡುಗಿದ್ದಾನೆ ಕಿಮ್ ಜಾಂಗ್ ಉನ್.

ಜೀವ ಭಯದಲ್ಲಿ ಸರ್ವಾಧಿಕಾರಿ ಕಿಮ್
ಉತ್ತರ ಕೊರಿಯಾ ಒಂದು ನಿಗೂಢ ದೇಶ, ಅಲ್ಲಿ ಏನಾಗುತ್ತೆ? ಏನೆನು ನಡೆಯುತ್ತೆ? ಎಂಬ ವಿಚಾರ ಹೊರ ಜಗತ್ತಿಗೆ ಸುಲಭವಾಗಿ ಗೊತ್ತಾಗಲ್ಲ. ಈಗಲೂ ಅಷ್ಟೇ ಸದ್ದೇ ಇಲ್ಲದೆ ಉತ್ತರ ಕೊರಿಯಾದಲ್ಲಿ ಕಿಮ್ ವಿರುದ್ಧ ಷಡ್ಯಂತ್ರ ಶುರುವಾಗಿದೆ ಎನ್ನಲಾಗಿದೆ. ಜೀವ ಭಯದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುಗಿ ಹೋಗಿದ್ದಾನೆ. ಇದೇ ಕಾರಣಕ್ಕೆ ಕಿಮ್ ಜಾಂಗ್ ಉನ್ ರಕ್ಷಣೆಗೆ ಬೇರೆ ದೇಶದಿಂದ ಸ್ಫೋಟಕ ಪತ್ತೆ ಉಪಕರಣ ತರಿಸಿಕೊಂಡಿದ್ದು ಬ್ಯಾಲಿಸ್ಟಿಕ್ ಬ್ರೀಫ್‌ಕೇಸ್ ವ್ಯವಸ್ಥೆ ಕೂಡ ಮಾಡಲಾಗಿದೆ.
ವೈರಿಗಳಿಂದ ಕಿಮ್ ರಕ್ಷಣೆಗೆ ರಣತಂತ್ರ
ಕಿಮ್ ಜಾಂಗ್ ರಕ್ಷಣೆಗೆ ತರಿಸಿದ ಗುಂಡು ನುಂಗುವ ಬ್ಯಾಗ್‌ಗಳನ್ನು ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಗುಂಡು-ನಿರೋಧಕ ಮಾತ್ರವಲ್ಲದೆ ವೈರಿಗಳಿಂದ ಆಪತ್ತು ಎದುರಾದರೆ, ತಕ್ಷಣ ವಿವಿಧ ರೀತಿಯಲ್ಲಿ ರಕ್ಷಣೆ ನೀಡುತ್ತವೆ. ಅಪಾಯ ಗೊತ್ತಾದಲ್ಲಿ ಭದ್ರತಾ ಸಿಬ್ಬಂದಿ ಈ ಬ್ಯಾಗ್‌ಗಳ ಮೂಲಕ ಕಿಮ್‌ಗೆ ರಕ್ಷಣಾ ಗೋಡೆ ನಿರ್ಮಿಸಬಹುದು. ಹಾಗೇ ಈ ಬ್ಯಾಗ್‌ಗಳನ್ನ ಫ್ಯಾಬ್ರಿಕ್ ಶೀಲ್ಡ್ ರೀತಿ ಮಡಚಿ ಕೊಂಡೊಯ್ಯಲು ಅವಕಾಶವು ಇದೆ. ಮತ್ತೊಂದು ಪ್ರಮುಖ ವಿಚಾರ ಎಂದರೆ, ಕಿಮ್ ಜಾಂಗ್ ಉನ್ ಅಪ್ಪ ಕಿಮ್ ಜಾಂಗ್ ಇಲ್ ಕೂಡ ಇದೇ ರೀತಿಯ ಉಪಕರಣದ ಮೂಲಕ ರಕ್ಷಣೆ ಪಡೆಯುತ್ತಿದ್ದ. ಈ ಬೆಳವಣಿಗೆ ಮಧ್ಯೆ ಅಮೆರಿಕ ಸೇರಿದಂತೆ ತನ್ನ ಶತ್ರುಗಳ ವಿರುದ್ಧ ಕಿಮ್ ಗುಡುಗಿದ್ದಾನೆ.












Click it and Unblock the Notifications